ಮಕ್ಕಳಿಗೆ ಮೊಟ್ಟೆ ಕೊಟ್ಟು ಮರಳಿ ಕಿತ್ತುಕೊಳ್ಳುತ್ತಿದ್ದ ಅಂಗನವಾಡಿ ಸಿಬ್ಬಂದಿ? ಇಬ್ಬರು ಕೆಲಸದಿಂದ ವಜಾ

KannadaprabhaNewsNetwork | Published : Aug 11, 2024 1:32 AM

ಸಾರಾಂಶ

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ, ಶಾಲಾ ದಾಖಲೆಗಾಗಿ ಅದನ್ನು ವಿಡಿಯೋ ಮಾಡಿಕೊಂಡ ನಂತರ, ಮಕ್ಕಳ ತಟ್ಟೆಯಿಂದ ಅವುಗಳನ್ನು ಕಿತ್ತುಕೊಂಡು ಸಿಬ್ಬಂದಿ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ, ಶಾಲಾ ದಾಖಲೆಗಾಗಿ ಅದನ್ನು ವಿಡಿಯೋ ಮಾಡಿಕೊಂಡ ನಂತರ, ಮಕ್ಕಳ ತಟ್ಟೆಯಿಂದ ಅವುಗಳನ್ನು ಕಿತ್ತುಕೊಂಡು ಸಿಬ್ಬಂದಿ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದನ್ನು ವಿಡಿಯೋ ಮಾಡಿಕೊಂಡ ಗ್ರಾಮದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ವಜಾ ಮಾಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

ಜೊತೆಗೆ, ಕನಕಗಿರಿ ಸಿಡಿಪಿಓ ಅಮಾನತ್ತಿಗೂ ಆದೇಶ ನೀಡಿದ್ದೇನೆ. ಹಾಗೂ ಕೊಪ್ಪಳ ಜಿಲ್ಲಾ ಉಪ ನಿರ್ದೇಶಕರಿಗೆ ನೋಟಿಸ್ ನೀಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಸರ್ಕಾರ ನೀಡುವ ಮೊಟ್ಟೆ:

ಸರ್ಕಾರ ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಮೂಲಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಮೊಟ್ಟೆ ಸೇರಿ‌ ವಿವಿಧ ಪೌಷ್ಟಿಕ ಆಹಾರವನ್ನು ವಿತರಣೆ ಮಾಡುತ್ತಿದೆ. ಆದರೆ, ಇಲ್ಲಿನ ಅಂಗನವಾಡಿಯಲ್ಲಿ ಮಕ್ಕಳಿಗೆ ಕೊಡಲಾಗುವ ಮೊಟ್ಟೆಗಳನ್ನು ಸಿಬ್ಬಂದಿ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕೇಂದ್ರದ ಸಹಾಯಕಿ ಶೈನಜಾ ಬೇಗಂ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕುತ್ತಿದ್ದರು. ಇನ್ನೊಬ್ಬ ಕಾರ್ಯಕರ್ತೆ ಜೆ.ಲಕ್ಷ್ಮೀ ಎಂಬುವರು ಶಾಲಾ ದಾಖಲಾತಿ ಉದ್ದೇಶಕ್ಕಾಗಿ ಇದನ್ನು ವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದರು. ಬಳಿಕ, ಮಕ್ಕಳ ತಟ್ಟೆಗೆ ಹಾಕಿದ್ದ ಮೊಟ್ಟೆಯನ್ನು ಸಹಾಯಕಿ ವಾಪಸ್ ಎತ್ತಿಕೊಂಡು ಒಳಗೆ ಇಡುತ್ತಿದ್ದರು. ಈ ಎಲ್ಲ ಪ್ರಹಸನವನ್ನು ಗಾಮದ ವೀರನಗೌಡ ಎಂಬುವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ಫೇಸ್‌ಬುಕ್‌ ನಲ್ಲಿ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಅಂಗನವಾಡಿ ಸಿಬ್ಬಂದಿ, ಕೇವಲ ಮೊಟ್ಟೆ ಅಷ್ಟೇ ಅಲ್ಲ, ಶಾಲೆಗಾಗಿ ಕೊಡುವ ಇತರ ಆಹಾರ ಧಾನ್ಯಗಳನ್ನೂ ಕದ್ದು ಮಾರಾಟ ಮಾಡುತ್ತಾರೆ. ಮಕ್ಕಳ ಹೊಟ್ಟೆ ಸೇರಬೇಕಾದ ಆಹಾರ ಕಳ್ಳತನವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಮಧ್ಯೆ, ತಮಗೆ ಅಂಗನವಾಡಿ ಕಾರ್ಯಕರ್ತೆ ಬೆದರಿಕೆ ಹಾಕಿದ್ದಾರೆ ಎಂದು ವಿಡಿಯೋ ಮಾಡಿರುವ ವೀರನಗೌಡ ಆಪಾದಿಸಿದ್ದಾರೆ.

-----

ನಾನು ಮಕ್ಕಳಿಂದ ಮೊಟ್ಟೆ ಕಸಿದುಕೊಂಡಿಲ್ಲ. ಕುದಿಸಿದ ಮೊಟ್ಟೆ ಕೆಟ್ಟಿರುವುದು ಗೊತ್ತಾಗುತ್ತಿದ್ದಂತೆ ವಾಪಸ್‌ ಪಡೆದಿದ್ದೇನೆ. ಇದನ್ನೇ ವೀಡಿಯೋ ಮಾಡಿದ್ದಾರೆ. ನಮ್ಮ ಮೇಲೆ ದ್ವೇಷ ಇರುವವರು ಈ ರೀತಿ ಮಾಡುತ್ತಿದ್ದಾರೆ.

- ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ. ಘಟನೆ ಬಗ್ಗೆ ಸಂಪೂರ್ಣ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುತ್ತೇನೆ.

- ವಿರೂಪಾಕ್ಷಿ, ಸಿಡಿಪಿಓ, ಕನಕಗಿರಿ

Share this article