ಮೂರು ದಿನಗಳೊಳಗೆ ವೇದಿಕೆ ನಿರ್ಮಾಣ ಪೂರ್ಣ: ನರೇಂದ್ರಸ್ವಾಮಿ

KannadaprabhaNewsNetwork | Published : Dec 16, 2024 12:45 AM

ಸಾರಾಂಶ

ವಿವಿಐಪಿಗೆ ೧೦, ವಿಐಪಿಗೆ ೧೦, ಸಾರ್ವಜನಿಕರಿಗೆ ೫೦, ಸಮಾನಾಂತರ ವೇದಿಕೆ ಬಳಿ ೧೦, ಮಳಿಗೆಗಳ ಬಳಿ ೧೦ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ೧೦ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ಶೌಚ ನೀರು ಮತ್ತು ಕೈ ತೊಳೆಯುವ ನೀರು ಜನರು ಓಡಾಡುವ ಸ್ಥಳಗಳ ಬಳಿ ಹರಿಯದಂತೆ ಪ್ರತ್ಯೇಕ ಮಾರ್ಗದಲ್ಲಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿ.೨೦, ೨೧ ಹಾಗೂ ೨೨ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಿದ್ಧತಾ ಕಾರ್ಯ ಮೂರು ದಿನಗಳೊಳಗೆ ಪೂರ್ಣಗೊಳ್ಳಲಿದೆ ಎಂದು ವೇದಿಕೆ ಸಮಿತಿ ಅಧ್ಯಕ್ಷ ಹಾಗೂ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಸಮ್ಮೇಳನ ನಡೆಯುವ ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಜಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ೩೦೦*೬೦ ಅಡಿ ಅಳತೆಯಲ್ಲಿ ಮುಖ್ಯ ವೇದಿಕೆ ಹಾಗೂ ೪೦ ಸಾವಿರ ಜನರಿಗೆ ಆಸನ ವ್ಯವಸ್ಥೆ, ೬೦*೧೫೦ ಅಳತೆಯಲ್ಲಿ ಸಮಾನಾಂತರ ವೇದಿಕೆಗಳು, ೧೦*೧೦ ಅಳತೆಯಲ್ಲಿ ೪೦೦ ಪುಸ್ತಕ ಮಳಿಗೆಗಳು, ೧೦*೧೫ರ ಅಳತೆಯಲ್ಲಿ ೩೫೦ ವಾಣಿಜ್ಯ ಮಳಿಗೆಗಳು, ೧೦*೨೦ರ ಅಳತೆಯಲ್ಲಿ ೫೫ ಸರ್ಕಾರಿ ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ವಿವರಿಸಿದರು.

ಅಡುಗೆ ಕೌಂಟರ್ ಸಹಿತ ನೋಂದಾಯಿತ ಪ್ರತಿನಿಧಿಗಳಿಗೆ ೪೦ ಮಳಿಗೆಗಳು, ೧೨೦ ಕೌಂಟರ್‌ಗಳನ್ನು ಸಾರ್ವಜನಿಕರಿಗೆ ಮೀಸಲಿರಿಸಲಾಗಿದೆ. ೨೫೦ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅಡುಗೆ ಕೋಣೆ ಬಳಿ ೫೦ ಬಾತ್‌ರೂಮ್ ವ್ಯವಸ್ಥೆ, ಪ್ರತ್ಯೇಕ ಕಡೆಗಳಲ್ಲಿ ೩೦ ನೋಂದಣಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ವಿವಿಐಪಿ ಮತ್ತು ವಿಐಪಿಗಳಿಗೆ ಊಟಕ್ಕೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು.

ಸಮ್ಮೇಳನ ನಡೆಯುವ ಜಾಗದ ಒಳಗೆ ಮತ್ತು ಹೊರಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲೂ ವಿದ್ಯುತ್ ತೊಂದರೆಯಾಗದಂತೆ ಎಚ್ಚರ ವಹಿಸಿರುವುದಾಗಿ ಹೇಳಿದ ಪಿ.ಎಂ.ನರೇಂದ್ರಸ್ವಾಮಿ ಅವರು, ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮೂರು ಬೋರ್‌ವೆಲ್‌ಗಳಿಂದ ನೀರನ್ನು ಪಡೆಯಲಾಗುತ್ತಿದೆ. ಸುಮಾರು ೫.೮ ಕಿ.ಮೀ.ವರೆಗೆ ಪೈಪ್‌ಲೈನ್ ಅಳವಡಿಸಿ ಓವರ್‌ಹೆಡ್ ಟ್ಯಾಂಕ್‌ಗೆ ನೀರು ತುಂಬಿಸಲಾಗುವುದು. ಮೂರು ಕಡೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಶುದ್ಧಿಯಾದ ನೀರನ್ನು ಪರೀಕ್ಷಿಸಿ ಜನರಿಗೆ ಕುಡಿಯಲು ನೀಡಲಾಗುವುದು. ಕಚ್ಚಾ ನೀರನ್ನು ಶೌಚಾಲಯಗಳಿಗೆ ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಲಕ್ಷಾಂತರ ಜನರು ಸೇವಿಸುವ ಆಹಾರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ ಮಿಮ್ಸ್‌ನ ೧೦ ಮಂದಿ ತಜ್ಞರನ್ನು ನೇಮಿಸಿಕೊಂಡು ಆಹಾರ ಗುಣಮಟ್ಟ ಪರಿಶೀಲನೆ ಮಾಡಲಾಗುವುದು. ಮೂರು ದಿನಗಳು ತಯಾರಾಗುವ ಆಹಾರದ ಗುಣಮಟ್ಟವನ್ನು ಪರೀಕ್ಷೆಗೊಳಪಡಿಸಿ ಜನರಿಗೆ ನೀಡಲಾಗುವುದು ಎಂದು ನುಡಿದರು.

ವಿವಿಐಪಿಗೆ ೧೦, ವಿಐಪಿಗೆ ೧೦, ಸಾರ್ವಜನಿಕರಿಗೆ ೫೦, ಸಮಾನಾಂತರ ವೇದಿಕೆ ಬಳಿ ೧೦, ಮಳಿಗೆಗಳ ಬಳಿ ೧೦ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ೧೦ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ಶೌಚ ನೀರು ಮತ್ತು ಕೈ ತೊಳೆಯುವ ನೀರು ಜನರು ಓಡಾಡುವ ಸ್ಥಳಗಳ ಬಳಿ ಹರಿಯದಂತೆ ಪ್ರತ್ಯೇಕ ಮಾರ್ಗದಲ್ಲಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಪಾರ್ಕಿಂಗ್‌ಗಾಗಿ ೨೪ ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಸತ್ವ ಗ್ರೂಪ್ ಬಳಿಯೂ ೨೫ ಎಕರೆಯನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಬಸ್ ವ್ಯವಸ್ಥೆಯನ್ನು ಮಂಡ್ಯ ನಗರದ ಬಸ್ ನಿಲ್ದಾಣ, ಸಿಲ್ವರ್ ಜ್ಯೂಬಿಲಿ ಪಾರ್ಕ್, ಷುಗರ್ ಫ್ಯಾಕ್ಟರಿ ವೃತ್ತದಿಂದ ಕಲ್ಪಿಸಲಾಗಿದೆ. ಸಮ್ಮೇಳನಕ್ಕೆ ಜನರು ಬರಲು ಅನುಕೂಲವಾಗುವಂತೆ ಪ್ರತಿಯೊಂದು ಗ್ರಾಪಂಗೆ ಒಂದೊಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಬರುವವರಿಗೆ ಕಿಟ್‌ವೊಂದನ್ನು ಸಿದ್ಧಪಡಿಸಲಾಗುತ್ತಿದ್ದು, ಒಂದು ನೆಲಹಾಸು, ಸಮ್ಮೇಳನಾಧ್ಯಕ್ಷರರ ಭಾಷಣ ಪ್ರತಿ, ಆಹ್ವಾನ ಪತ್ರಿಕೆ, ಲೆದರ್ ಬ್ಯಾಗ್, ಅರ್ಧ ಕೆಜಿ ಸಕ್ಕರೆ, ಬೆಲ್ಲ ನೀಡಲಾಗುವುದಲ್ಲದೆ, ವಸತಿ ಕಿಟ್‌ನಲ್ಲಿ ದಿಂಬು, ಹೊದಿಕೆ, ಟೂತ್‌ಪೇಸ್ಟ್, ಸೋಪು ನೀಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇತರರಿದ್ದರು.

Share this article