ನಿಂತಿ ಸಂಹಿತೆ ಜಾರಿ ಕಟ್ಟುನಿಟ್ಟಾಗಿ ಪಾಲಿಸಿ - ಡಾ:ಕುಮಾರ್

KannadaprabhaNewsNetwork | Published : Mar 17, 2024 1:47 AM

ಸಾರಾಂಶ

ಚೆಕ್ ಪೋಸ್ಟಗಳ ಸಿದ್ಧತೆ ಪ್ರಾರಂಭವಾಗಿದೆ. ಸಿಸಿಟಿವಿ ಅಳವಡಿಕೆ ಸೇರಿದಂತೆ ಮೂಲ ಸೌಲಭ್ಯ ವ್ಯವಸ್ಥೆ ಕಲ್ಪಿಸಬೇಕು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿವಿಧ ರೀತಿಯ ಪರವಾನಗಿ ಪಡೆಯಲು ಸಿಂಗಲ್ ವಿಂಡೋ ಸ್ಥಾಪನೆಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ಸ್ಥಾಪಿಸಿ ನಿಗಧಿತ ಸಮಯದಲ್ಲಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದ ಜಾರಿ ಮಾಡಲಾಗಿದೆ. ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಎಸ್ಎಸ್ಟಿ, ಎಫ್ಎಸ್ಟಿ ತಂಡಗಳು ಕಾರ್ಯೊನ್ಮುಖರಾಗಿ ಜಿಲ್ಲೆಯಲ್ಲಿ ನಡೆಯುವ ರಾಜಕೀಯ ಪ್ರಚಾರ, ಸಭೆ, ಸಮಾರಂಭ ರ್‍ಯಾಲಿಗಳಲ್ಲಿ ಭಾಗವಹಿಸಿ ವರದಿಗಳನ್ನು ಸಲ್ಲಿಸಬೇಕು ಎಂದರು.

ಸರ್ಕಾರಿ ಕಟ್ಟಡ, ಸಾರ್ವಜನಿಕ ಸ್ಥಳಗಳ ಮೇಲೆ ಇರುವ ರಾಜಕೀಯ ವ್ಯಕ್ತಿಗಳು ಬಳಸಿ, ಪ್ರಚಾರ ಮಾಡಿರುವ ಜಾಹೀರಾತು ಫಲಕ, ಪ್ಲೆಕ್ಸ್ , ಪೋಸ್ಟರ್ ಗಳನ್ನು ಕೂಡಲೇ ಸ್ಥಳೀಯ ಸಂಸ್ಥೆಗಳು ತೆರವುಗೊಳಿಸಬೇಕು. ಸರ್ಕಾರದ ಎಲ್ಲಾ ವೆಬ್ ಸೈಟ್ ಗಳಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು ತೆರವುಗೊಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಎನ್.ಐ.ಸಿ ಅಧಿಕಾರಿಗಳು ಪರಿಶೀಲಸಬೇಕು ಎಂದರು.

ಚೆಕ್ ಪೋಸ್ಟಗಳ ಸಿದ್ಧತೆ ಪ್ರಾರಂಭವಾಗಿದೆ. ಸಿಸಿಟಿವಿ ಅಳವಡಿಕೆ ಸೇರಿದಂತೆ ಮೂಲ ಸೌಲಭ್ಯ ವ್ಯವಸ್ಥೆ ಕಲ್ಪಿಸಬೇಕು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿವಿಧ ರೀತಿಯ ಪರವಾನಗಿ ಪಡೆಯಲು ಸಿಂಗಲ್ ವಿಂಡೋ ಸ್ಥಾಪನೆಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ಸ್ಥಾಪಿಸಿ ನಿಗಧಿತ ಸಮಯದಲ್ಲಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ದೂರು ನಿರ್ವಾಹಣಾ ಕೋಶದ ನಿರ್ವಹಣೆ ವ್ಯವಸ್ಥಿತವಾಗಿ ನಡೆಯಬೇಕು ಎಂದರು.

85 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಕಲ್ಪಿಸಲು ಫಾರಂ 12 ಡಿ ನಮೂನೆಯನ್ನು ಪಡೆಯಬೇಕಿದೆ. 85 ವರ್ಷ ಮೇಲ್ಪಟ್ಟ ಮತದಾರರ ವಿವರ ಪಡೆದು ಅವರ ಮನೆಗೆ ಭೇಟಿ ಮಾಡಿ 12 ಡಿ ನಮೂನೆ ಸಿದ್ಧಪಡಿಸಿಕೊಳ್ಳಬೇಕು. ಇದರೊಂದಿಗೆ ಅಗತ್ಯ ಸೇವಾ ವಲಯದ ಮತದಾರರ ವಿವರವನ್ನು ಸಹ ಸಿದ್ಧಪಡಿಸಿಕೊಳ್ಳಿ ಎಂದರು.

ತಾಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಸಭೆ ನಡೆಸಿ ಅವರಿಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬೇಕು. ಯಾವುದೇ ದೂರುಗಳು ಬಂದಲ್ಲಿ ತಕ್ಷಣ ವಿಲೇವಾರಿ ಮಾಡಬೇಕು ಎಂದು ಎಚ್ಚರಿಕೆ‌ ನೀಡಿದರು.

ಈ ವೇಳೆ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಗಳು, ರ್‍ಯಾಂಪ್ ಸೇರಿ ಎಲ್ಲಾ ಮೂಲ ವ್ಯವಸ್ಥೆಗಳು ಇರುವ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳು ಪರಿಶೀಲಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ವಿಧಾನಸಭಾ ಕ್ಷೇತ್ರವಾರು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ವಹಿಸಿ ದಾಳಿಗಳನ್ನು ಹೆಚ್ಚು ನಡೆಸಿ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ಉಪವಿಭಾಗಾಧಿಕಾರಿ ಮಹೇಶ್, ಮುಡಾ ಆಯುಕ್ತ ಲೋಕನಾಥ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this article