ಮುಂಡರಗಿಯಲ್ಲಿ ಕೈಗಾರಿಕಾ ವಸಾಹತು ಪ್ರಾರಂಭಿಸಿ

KannadaprabhaNewsNetwork | Published : Aug 17, 2024 12:49 AM

ಸಾರಾಂಶ

ಮನುಷ್ಯ ತನ್ನ ನಿತ್ಯದ ಜಂಜಡದಲ್ಲಿ, ಕೆಲಸದ ಒತ್ತಡದಲ್ಲಿ ಸ್ವಲ್ಪ ಖುಷಿಯಾಗಿ ಇರಬೇಕೆಂದರೆ ಆಗಾಗ ಒಂದಿಷ್ಟು ಮನೋರಂಜನೆ ಅವಶ್ಯ

ಮುಂಡರಗಿ: ಸರ್ಕಾರದಿಂದ ಕೈಗಾರಿಕೆ ಯೋಜನೆಗಳಿಗೆ ಅನೇಕ ರೀತಿಯ ಧನಸಹಾಯ ದೊರೆಯಲಿದ್ದು, ಇಲ್ಲಿನ ಶ್ರೀಮಂತರು ಮನಸ್ಸು ಮಾಡಿ ಹೊಸ ಹೊಸ ಯೋಜನೆ ರೂಪಿಸಿ, ಉದ್ಯೋಗ ಸೃಷ್ಟಿಸಲು ಮುಂದೆ ಬರಬೇಕು. ಇಲ್ಲೊಂದು ಉತ್ತಮ ಕೈಗಾರಿಕಾ ವಸಾಹತು ಪ್ರಾರಂಭಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ರವೀಂದ್ರ ಹಾಗೂ ಶ್ರೀನಿವಾಸ ಉಪ್ಪಿನಬೆಟಗೇರಿ ಸಹೋದರರು ಪ್ರಾರಂಭಿಸಿದ ಛೋಟು ಮಹಾರಾಜ್ ಶ್ರೀಸಿನೆಮಾಸ್ ಚಲನಚಿತ್ರ ಮಂದಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕಾ ವಸಾಹತು ಸ್ಥಾಪಿಸಿದರೆ ಹೆಚ್ಚಿನ ಅಭಿವೃದ್ಧಿಯಾಗುವ ಜತೆಗೆ ಇಡೀ ಮುಂಡರಗಿ ಅಭಿವೃದ್ಧಿಯಾಗುವ ಮೂಲಕ ನಮ್ಮ ಎಲ್ಲ ನಿರೀಕ್ಷೆ ಈಡೇರುತ್ತದೆ. ಮುಂಡರಗಿ ಮತ್ತು ಶಿರಹಟ್ಟಿ ಭಾಗಗಳಲ್ಲಿ ಏನಿದೆ ಎಂದು ಕೇಳುವ ಪ್ರಶ್ನೆಯೇ ಇಲ್ಲ. ಇಲ್ಲಿ ಬಿಳಿ ಮಣ್ಣು, ಕರಿಮಣ್ಣು, ಕೆಂಪು ಮಣ್ಣು, ಹಳದಿ ಮಣ್ಣು, ಕರಿ ಕಲ್ಲು, ಮೃದು ಕಲ್ಲು, ಗ್ರಾನೈಟ್ ಮಾದರಿಯ ಕಲ್ಲು ಎಲ್ಲವೂ ಇದೆ. ಕೃಷಿ ಕ್ಷೇತ್ರದಲ್ಲಿ ಮುಂಡರಗಿಯಲ್ಲಿ ಆದಂತಹ ಹೊಸ ಪ್ರಯೋಗ ಎಲ್ಲಿಯೂ ಆಗಿಲ್ಲ. ಗೋಡಂಬಿ, ವಿವಿಧ ಹಣ್ಣು ಹಂಪಲು, ಕಬ್ಬು, ಬತ್ತ ಬೆಳೆಯುುವ ಜತೆಗೆ ಇತ್ತೀಚಿಗೆ ಅಡಕೆ ಬೆಳೆದು ಯಶಸ್ಸು ಕಂಡಿದ್ದಾರೆ. ಎಲ್ಲ ಬೆಳೆ ಬೆಳೆಯಲು ತುಂಗಭದ್ರೆ ಆಸರೆಯಾಗಿದ್ದಾಳೆ. ಮುಂಡರಗಿಯಲ್ಲಿ ಛೋಟು ಮಹಾರಾಜ್ ಚಿತ್ರಮಂದಿರ ತಲೆ ಎತ್ತಲು ಕಾರಣೀಕರ್ತರಾದ ರವೀಂದ್ರ ಹಾಗೂ ಶ್ರೀನಿವಾಸ ಉಪ್ಪಿನಬೆಟಗೇರಿ ಸಹೋದರರಿಗೆ ಅಭಿನಂದಿಸುವೆ. ಅದು ಉತ್ತಮವಾಗಿ ನಡೆಯುವಂತಾಗಲಿ ಎಂದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಮನುಷ್ಯ ತನ್ನ ನಿತ್ಯದ ಜಂಜಡದಲ್ಲಿ, ಕೆಲಸದ ಒತ್ತಡದಲ್ಲಿ ಸ್ವಲ್ಪ ಖುಷಿಯಾಗಿ ಇರಬೇಕೆಂದರೆ ಆಗಾಗ ಒಂದಿಷ್ಟು ಮನೋರಂಜನೆ ಅವಶ್ಯ. ಅಂತಹ ಮನೋರಂಜನೆ ಕೊಡುವಲ್ಲಿ ಹಿಂದಿನಿಂದಲೂ ಪ್ರಮುಖ ಪಾತ್ರವಹಿಸಿಕೊಂಡು ಬಂದಿದ್ದು, ನಾಟಕ, ದೊಡ್ಡಾಟ, ಸಿನಿಮಾ ಈ ಹಲವಾರು ಕಲೆಗಳು ನಮಗೆ ಮನರಂಜನೆ ಕೊಡುತ್ತಿದ್ದವು. ಕಾಲ ಬದಲಾದಂತೆ ಸಾಫ್ಟ್‌ವೇರ್‌ ಜಗತ್ತು ಮುನ್ನಡೆದಂತೆ ಇಂದು ನಮ್ಮ ಮೊಬೈಲ್‌ಗಳಲ್ಲಿಯೇ ದಿನಕ್ಕೆ 10 ಸಿನಿಮಾಗಳು ಬರುತ್ತವೆ. ಸಿನಿಮಾಗಳನ್ನು ಮೊಬೈಲ್‌ನಲ್ಲಿಯೂ ನೋಡಬಹುದು, ಚಿತ್ರಮಂದಿರದಲ್ಲಿಯೂ ನೋಡಬಹುದು. ಆದರೆ ಚಿತ್ರಮಂದಿರದಲ್ಲಿ ನೋಡುವ ಮಜಾ ಮೊಬೈಲ್‌ನಲ್ಲಿ ನೋಡುವಾಗ ಸಿಗುವುದಿಲ್ಲ. ಚಿತ್ರಮಂದಿರದಲ್ಲಿ ಬಂದು ನೋಡುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ನೆಮ್ಮದಿ ಉಂಟಾಗುತ್ತದೆ ಎಂದರು.

ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಸಿನಿಮಾದಲ್ಲಿ ಮತ್ತು ಮನುಷ್ಯನಲ್ಲಿ ಎರಡು ತರಹದ ಶಕ್ತಿಗಳು ಇರುತ್ತವೆ. ಒಂದು ಆಧ್ಯಾತ್ಮಿಕ ಶಕ್ತಿ ಮತ್ತೊಂದು ದೈತ್ಯ ಶಕ್ತಿ. ಯಾವ ಶಕ್ತಿಯ ಕಡೆಗೆ ನಮ್ಮ ಮನಸ್ಸು ವಾಲುತ್ತದೆಯೋ ಆ ದಿಸೆಯಲ್ಲಿ ನಮ್ಮ ವ್ಯಕ್ತಿತ್ವ, ಮನುಷ್ಯ ರೂಪಗೊಳ್ಳುತ್ತಾನೆ. ಹಿಂದಿನ ಬಂಗಾರದ ಮನುಷ್ಯ, ಭೂತಯ್ಯನಮಗ ಅಯ್ಯು ಚಲನಚಿತ್ರಕ್ಕೂ ಇಂದಿನ ಚಲನಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಸಿನಿಮಾ ನೋಡುವ ಮೂಲಕ ಅದರಲ್ಲಿನ ಒಳ್ಳೆತನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂಡರಗಿಯಲ್ಲಿ ರವೀಂದ್ರ ಉಪ್ಪಿನ ಬೆಟಗೇರಿ ಸಹೋದರರು ಪ್ರಾರಂಭಿಸಿದ ಚಿತ್ರಮಂದಿರಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.

ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ಜಿ.ಎಸ್. ಪಾಟೀಲ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಎಂ.ಆರ್. ಪಾಟೀಲ, ಎಂ.ಎಸ್. ಕರಿಗೌಡ್ರ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಕವಿತಾ ಉಳ್ಳಾಗಡ್ಡಿ, ಚಲನಚಿತ್ರ ಮಂದಿರದ ಮಾಲೀಕರಾದ ರವೀಂದ್ರ ಉಪ್ಪಿನಬೆಟಗೇರಿ, ಶ್ರೀನಿವಾಸ ಉಪ್ಪಿನಬೆಟಗೇರಿ, ಭೀಮಸಿಂಗ್ ರಾಠೋಡ ಉಪಸ್ಥಿತರಿದ್ದರು. ರವೀಂದ್ರ ಉಪ್ಪಿನಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಗೌಡ ಪಾಟೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share this article