ಜನರ ಆಶೋತ್ತರಕ್ಕೆ ಸ್ಪಂದಿಸದ ರಾಜ್ಯ ಬಜೆಟ್‌: ಕೆ.ಎಸ್.ಶಿವಕುಮಾರಪ್ಪ

KannadaprabhaNewsNetwork | Published : Feb 18, 2024 1:32 AM

ಸಾರಾಂಶ

ಮೇಕೆದಾಟು ಯೋಜನೆ ಆರಂಭಿಸುವುದಾಗಿ ಹೋರಾಡಿದ್ದ ಕಾಂಗ್ರೆಸ್ ತನ್ನ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿಲ್ಲ. ಮೇಕೆದಾಟು ಜಾರಿಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ಸಿಗರು ಈಗ ಅಧಿಕಾರದಲ್ಲಿದ್ದರೂ ಬಜೆಟ್‌ನಲ್ಲೇಕೆ ಘೋಷಿಸಿಲ್ಲ. ಚಿಕಿತ್ಸಾ ಕೇಂದ್ರ, ಕಲ್ಕೋಸ್ಕೋಪಿ ಚಿಕಿತ್ಸಾ ಉಪಕರಣ ಖರೀದಿ ಬಿಟ್ಟರೆ, ಜಿಲ್ಲೆಗೆ ಸಿದ್ದರಾಮ್ಯಯ ಸರ್ಕಾರ ಬಜೆಟ್‌ನಲ್ಲಿ ದೊಡ್ಡ ಸೊನ್ನೆ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅನುದಾನ ತರಲು ಸಿಎಂ ಮೇಲೆ ಒತ್ತಡ ಹೇರಲಿ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಜನತೆ ಬಹು ನಿರೀಕ್ಷೆ ಹೊಂದಿದ್ದ ರಾಜ್ಯ ಬಜೆಟ್‌ನಲ್ಲಿ ಜನರ ಆಶೋತ್ತರಕ್ಕೆ ಸ್ಪಂದಿಸದೇ, ಬೇಡಿಕೆಗಳ ಈಡೇರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಬಜೆಟ್ 3,71,383 ಕೋಟಿ ಗಾತ್ರವಿದ್ದು, ಈ ಪೈಕಿ ಶೇ.14ರಷ್ಟು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಿಗದಿಪಡಿಸಿದ್ದು, ತಮ್ಮ ನೆಲೆ ಭದ್ರಪಡಿಸಿಕೊಳ್ಳಲು ಮೈಸೂರು ಜಿಲ್ಲೆಗೆ ಯೋಜನೆ ಘೋಷಿಸಿ ಇತರೆ ಜಿಲ್ಲೆಗಳನ್ನೇ ಕಡೆಗಣಿಸಿದ್ದಾರೆ ಎಂದರು.

ಮೇಕೆದಾಟು ಯೋಜನೆ ಆರಂಭಿಸುವುದಾಗಿ ಹೋರಾಡಿದ್ದ ಕಾಂಗ್ರೆಸ್ ತನ್ನ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿಲ್ಲ. ಮೇಕೆದಾಟು ಜಾರಿಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ಸಿಗರು ಈಗ ಅಧಿಕಾರದಲ್ಲಿದ್ದರೂ ಬಜೆಟ್‌ನಲ್ಲೇಕೆ ಘೋಷಿಸಿಲ್ಲ. ಚಿಕಿತ್ಸಾ ಕೇಂದ್ರ, ಕಲ್ಕೋಸ್ಕೋಪಿ ಚಿಕಿತ್ಸಾ ಉಪಕರಣ ಖರೀದಿ ಬಿಟ್ಟರೆ, ಜಿಲ್ಲೆಗೆ ಸಿದ್ದರಾಮ್ಯಯ ಸರ್ಕಾರ ಬಜೆಟ್‌ನಲ್ಲಿ ದೊಡ್ಡ ಸೊನ್ನೆ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅನುದಾನ ತರಲು ಸಿಎಂ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದ ಪಾಲನ್ನು ಘೋಷಿಸುವ ಕೆಲಸ ಸಿದ್ದರಾಮಯ್ಯ ಮಾಡಿಲ್ಲ. ನೀರಾವರಿ ಯೋಜನೆಗಳ ಆರ್ಥಿಕ ಸಂಪನ್ಮೂಲಗಳ ವಿವರಗಳ ನೀಡಿಲ್ಲ. ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಕಾಂಗ್ರೆಸ್ಸಿನವರು ಆಮ್ ಆದ್ಮಿ ಪಕ್ಷದ ಯೋಜನೆಗಳನ್ನೇ ಕದ್ದು ಗ್ಯಾರಂಟಿ ಯೋಜನೆಗಳ ಮಾಡಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನೇ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಈ ಬಾರಿ 27,353 ಕೋಟಿ ರು. ರಾಜಸ್ವ ಕೊರತೆ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗೆ ಹಣ ಕೊಡಲು ಸಾಧ್ಯವಾಗದೇ ಮುದ್ರಾಂಕ ಶುಲ್ಕ, ವಾಹನ ನೋಂದಣಿ ಶುಲ್ಕ ಹೆಚ್ಚಿಸಲಾಗಿದೆ. ಅದೇ ರೀತಿ ಅಬಕಾರಿ ಮೇಲಿನ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಒಟ್ಟಾರೆ, ಇದೊಂದು ಸಾಲದ ಬಜೆಟ್ ಆಗಿದೆ. ಮೈಸೂರು ಜಿಲ್ಲೆಗೆ 2 ಸಾವಿರ ಕೋಟಿ ಮೀಸಲಿಟ್ಟ ಸಿದ್ದರಾಮಯ್ಯ ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳ ಜನರು ಏನು ಮಾಡಬೇಕೆಂಬುದಕ್ಕೆ ಮೊದಲು ಉತ್ತರಿಸಲಿ ಎಂದು ತಾಕೀತು ಮಾಡಿದರು.

ಎಂದು ಶಿವಕುಮಾರಪ್ಪ ದೂರಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್.ಅರುಣಕುಮಾರ ಮಾತನಾಡಿ, ರೈತರು ಕಣ್ಣೀರು ಹಾಕದೇ, ಖುಷಿಯಿಂದ ಕೃಷಿಯಲ್ಲಿ ತೊಡಗುವಂತಹ ವಾತಾವರಣ ಕಲ್ಪಿಸಿ ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಬೇಕು. ರೈತರಿಗೆ ಉಚಿತವಾಗಿ ಬೀಜ, ಗೊಬ್ಬರ, ಸೌಲಭ್ಯ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಅನ್ನದಾತ ರೈತರಿಗೆ ತೊಂದರೆ ಕೊಡುವ ಕೆಲಸ ಯಾರೂ ಮಾಡಬಾರದು ಎಂದರು.

ಆಮ್ ಆದ್ಮಿ ಪಕ್ಷದ ಮುಖಂಡರಾದ ಬಸವರಾಜ ಕೆ.ಹಲಸಬಾಳು, ಧರ್ಮಾನಾಯ್ಕ, ಮಹಮ್ಮದ್ ಯೂಸೂಫ್ ಇತರರಿದ್ದರು.

ದಾವಣಗೆರೆ ಜಿಡಿಪಿ ಹೆಚ್ಚಳಕ್ಕೆ ಕಾರ್ಯಕ್ರಮವಿಲ್ಲ

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಡಿಪಿಯಲ್ಲಿ ದಾವಣಗೆರೆ ಜಿಲ್ಲೆ 18ನೇ ಸ್ಥಾನದಲ್ಲಿದೆ. ನೆರೆಯ ಚಿತ್ರದುರ್ಗ, ಶಿವಮೊಗ್ಗಕ್ಕಿಂತಲೂ ಕೆಳಗಿದ್ದೇವೆ. ಈ ಜಿಲ್ಲೆಯೂ ಜಿಡಿಪಿಯಲ್ಲಿ ಹೆಚ್ಚಳವಾಗಲು ಪೂರಕವಾಗಿ ಯೋಜನೆ, ಕಾರ್ಯಕ್ರಮ ನೀಡಬೇಕಲ್ಲವೇ? ದಾವಣಗೆರೆಯ ಜವಳಿ ಪಾರ್ಕ್‌ಗೆ ಉತ್ತೇಜನ ನೀಡುವ ಕೆಲಸ ಆಗಿಲ್ಲ. ಫುಡ್‌ ಕೋರ್ಟ್ ಸ್ಥಾಪನೆ ಪ್ರಸ್ತಾಪವಿಲ್ಲ. ಕುಡಿಯುವ ನೀರು, ಮೂಲಸೌಕರ್ಯ, ಏತ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡದ ಬಜೆಟ್ ಇದು. ಲೋಕಸಭೆ ಚುನಾವಣೆಗೆ ಓಲೈಕೆ ರಾಜಕಾರಣದ ಬಜೆಟ್ ಇದಷ್ಟೇ.

ಕೆ.ಎಸ್.ಶಿವಕುಮಾರಪ್ಪ, ಆಪ್‌ ಜಿಲ್ಲಾಧ್ಯಕ್ಷ

Share this article