ಕನ್ನಡಪ್ರಭ ವಾರ್ತೆ ಯಾದಗಿರಿ
ನಾಳೆ (ಫೆ.16) ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಬಡಜನರ ಗುಳೇ ತಪ್ಪಿಸಿ, ಬಡವರ ಬದುಕು ಹಸನಾಗಿಸುವಂತಹ ಯೋಜನೆಗಳು ಸಿಗುವವೇ? ಶುದ್ಧ ಕುಡಿಯುವ ನೀರು, ಶಿಕ್ಷಣ, ಆಸರೆ, ಸೂಕ್ತ ವೈದ್ಯಕೀಯ ವ್ಯವಸ್ಥೆಗಳ ಕಲ್ಪಿಸುವ ಯೋಜನೆಗಳ ಘೋಷಿಸುವ ಮೂಲಕ ಇಂತಹ ಮುಂತಾದವು ಇಲ್ಲಿನ ಬಡಜನರಿಗೆ ವರವಾಗಬಹುದೇ ಅನ್ನೋ ನಿರೀಕ್ಷೆ ಇಲ್ಲಿನವರದ್ದು.ಕಳೆದ ಡಿಸೆಂಬರ್ (2023) ಕೊನೆಯ ವಾರದಲ್ಲಿ ಜಿಲ್ಲೆಯಾಗಿ 13 ವಸಂತಗಳನ್ನು ಕಂಡ ಯಾದಗಿರಿ ಜಿಲ್ಲೆ ಕೇಂದ್ರದ ನೀತಿ ಆಯೋಗದ ವರದಿಯಂತೆ, ದೇಶಗಳಲ್ಲಿ ಹಿಂದುಳಿದ 112 ಜಿಲ್ಲೆಗಳ ಪೈಕಿ ಇದೂ ಒಂದು. ಹೀಗಾಗಿ, ಕೇಂದ್ರ ಸರ್ಕಾರದ ಇದನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಘೋಷಿಸಿ, ಜನಜೀವನ ಅಭಿವೃದ್ಧಿಗೆ ಹತ್ತು ಹಲವಾರು ಯೋಜನೆಗಳ ರೂಪಿಸಿದೆ.
ಹಾಗೆಯೇ, ರಾಜ್ಯ ಬಜೆಟ್‌ನಲ್ಲಿಯೂ ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ಹತ್ತು ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಘೋಷಿಸುತ್ತದೆಯೇ? ಈ ಮೂಲಕ ಮಾದರಿ ಜಿಲ್ಲೆಗೆ ಇಂತಹ ಯೋಜನೆಗಳು ನಾಂದಿಯಾಗಬಹುದೇ ಎಂಬ ಕಾತುರ ಇಲ್ಲಿನವರದ್ದು.ಭೂಸ್ವಾಧೀನ : ಕಂಪನಿಗಳೂ ಇಲ್ಲ, ಉದ್ಯೋಗವೂ ಇಲ್ಲ: ಇಲ್ಲಿನ ಸೈದಾಪುರ-ಬಾಡಿಯಾಳ ಪ್ರದೇಶದಲ್ಲಿ ಕಳೆದೊಂದು ದಶಕದ ಹಿಂದೆಯೇ ಸುಮಾರು 3 ಸಾವಿರ ಎಕರೆಯಷ್ಟು ಪ್ರದೇಶವನ್ನು ಕೈಗಾರಿಕೆ ಪ್ರದೇಶಕ್ಕೆಂದು ಸ್ವಾಧೀನ ಪಡಿಸಿಕೊಂಡಿತ್ತಾದರೂ, ಬೆರಳಣಿಕೆಯಷ್ಟು ಕಾರ್ಖಾನೆಗಳು ಕಾಣದಿರುವುದು ದುರದೃಷ್ಟಕರ.
ಅದಲ್ಲದೆ, ಮತ್ತೇ ಫಾರ್ಮಾ (ಔಷಧಿ) ಹಬ್ ಗೆಂದು ಮತ್ತೇ 3300 ಎಕರೆ ಪ್ರದೇಶದ ಸ್ವಾಧೀನ ಇಲ್ಲಿನ ರೈತರ ಜೀವವನ್ನೇ ಹಿಂಡಿ ಹಿಪ್ಪೆ ಮಾಡಿದಂತಿದೆ. ಮೊದಲಿನ ಭೂಮಿಯಲ್ಲೇ ಕೈಗಾರಿಕೆಗಳಿಲ್ಲ, ಈಗ ಮತ್ತೇ 3300 ಎಕರೆ ಭೂಮಿ ಸ್ವಾಧೀನಕ್ಕೆ ಆದೇಶದಿಂದಾಗಿ ಭೂಮಿಯೂ ಇಲ್ಲ, ಕೆಲಸವೂ ಇಲ್ಲದಂತಾದ ರೈತರು ದುಡಿಯಲು ಮಹಾನಗರಗಳಗಳತ್ತ ಮುಖ ಮಾಡಿದ್ದಾರೆ. ಭೂಮಿ ನೀಡಿದ ರೈತರು ಬದುಕುವುದೂ ಕಷ್ಟವಾಗಿ ಗುಳೇ ಹೋಗುವುದು ಅನಿವಾರ್ಯವಾಗಿದ್ದು ದಿಟ.ಇನ್ನು, ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಿಸುವ ಯೋಜನೆಗಳ ಘೋಷಣೆಗಳು ಕಾಗದದಲ್ಲಷ್ಟೇ ಕಂಡು, ವಾಸ್ತವದಲ್ಲಿ ಅಲ್ಲಿ ಹನಿ ನೀರು ತಲುಪದೇ ಇರುವುದರಿಂದ ಇಲ್ಲಿನ ರೈತರ ಬವಣೆ ಹೇಳತೀರದು. ಸರ್ಕಾರಿ ದಾಖಲೆಗಳಲ್ಲಿ ಮಾತ್ರ ನೀರಾವರಿ ಯೋಜನೆ ವ್ಯಾಪ್ತಿಯ ರೈತರೆಂದು ಗುರುತಿಸಲಾಗುತ್ತಾದರೂ, ಹನಿ ನೀರಿಗಾಗಿ ಅವರ ಪರದಾಟ ತಪ್ಪಿದ್ದಲ್ಲ. ಒಣಬೇಸಾಯವೇ ಅವರಿಗೆ ಗತಿ. ಇದಕ್ಕೆ ಶಾಶ್ವತವಾದ ಯೋಜನೆಗಳು ಪ್ರಾಮಾಣಿಕವಾಗಿ ರೂಪುಗೊಂಡರೆ ಕಾಲುವೆ ಕೊನೆ ಭಾಗದ ರೈತರಿಗೆ ನೆಮ್ಮದಿ ಮೂಡಿಸಬಹುದು. ಬ್ಯಾರೇಜ್ಗಳ ನಿರ್ಮಾಣ, ಕೆರೆಗಳ ತುಂಬುವ ಯೋಜನೆಯಿಂದ ಭೂಮಿಗೂ ನೀರುಣಿಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಈ ಬಜೆಟ್ಟಿನಲ್ಲಿ ಪ್ಯಾಕೇಜ್ ಅಥವಾ ಅನುದಾನದ ನಿರೀಕ್ಷೆ ಇಲ್ಲಿನವರದ್ದು.
ಜೀವಜಲಕ್ಕಾಗಿ ಜೀವ ತೆತ್ತವರ ಊರಿದು: ಜೀವಜಲಕ್ಕಾಗಿ ಪರದಾಡಿ ಜೀವ ತೆತ್ತವರ ಜಿಲ್ಲೆಯಿದು, ಶುದ್ಧ ಕುಡಿಯುವ ನೀರು ಇಲ್ಲಿನ ಜನರಿಗೆ ಮರೀಚಿಕೆ. ಜಿಲ್ಲಾ ಕೇಂದ್ರದ ಜನರೇ ಕಲುಷಿತ ನೀರು ಕುಡಿಯುತ್ತಿರುವದನ್ನು ಖುದ್ದು ಜಿಲ್ಲಾ ನ್ಯಾಯಾಧೀಶರೇ ಪರಿಶೀಲಿಸಿ, ಆಘಾತ ವ್ಯಕ್ತಪಡಿಸಿದ್ದ ಊರಿದು. ಗುರುಮಠಕಲ್, ಹುಣಸಗಿ, ಸುರಪುರ ಭಾಗದಲ್ಲಿ ಗಲೀಜು ನೀರು ಕುಡಿದು ಪ್ರಾಣ ಕಳೆದುಕೊಂಡವರಿದ್ದಾರೆ.ಮೃತಪಟ್ಟವರಿಗೆ ಸರ್ಕಾರ ನಂತರದಲ್ಲಿ ನೀಡುವ ಪರಿಹಾರಕ್ಕಿಂತ, ಇಂತಹ ಪ್ರಮಾದಗಳು ಮರುಕಳಿಸದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಬಿಳಿಯಾನೆಯಂತಾಗಿರುವ ಆರ್‌ಓ ಪ್ಲಾಂಟುಗಳು ತುಕ್ಕು ಹಿಡಿದು, ಮೂಲೆ ಸೇರಿವೆ. ಶುದ್ಧ ಕುಡಿಯುವ ನೀರಿಗೆ ಹೊಸ ಯೋಜನೆಗಳು ರೂಪುಗೊಂಡು, ಜೀವ ಉಳಿಸುವ ಕೆಲಸ ಈ ಬಜೆಟ್ಟಿನಲ್ಲಿ ಆಗುತ್ತದೆಯೇ ಅನ್ನೋ ನಿರೀಕ್ಷೆಯಿದೆ.
ನೂತನ ತಾಲೂಕುಗಳಿಗೆ ಬೇಕಿದೆ ಕಾಯಕಲ್ಪ: ಜಿಲ್ಲೆಯಲ್ಲಿ ಘೋಷಣೆಯಾಗಿರುವ ನೂತನ ತಾಲೂಕು ಕೇಂದ್ರಗಳಿಗೆ ಸರ್ಕಾರಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿ, ತಾಲೂಕು ಕಚೇರಿಗಳಿಗೆ ಕಾಯಕಲ್ಪ ನೀಡಬೇಕಿದೆ. ಅದ್ಯಾವುದೋ ಒತ್ತಡಕ್ಕೆ ಮಣಿದೋ, ಪ್ರತಿಷ್ಠೆಗೆ ಬಿದ್ದು ಹೊಸ ತಾಲೂಕು ಘೋಷಣೆ ಮಾಡಿದರೆ ಸಾಲದು, ಇಲ್ಲಿನ ನಿರೀಕ್ಷೆಗಳಿಗೆ ತಕ್ಕಂತೆ ಆಡಳಿತ ಕೆಲಸಗಳು ಚುರುಕುಗೊಂಡರೆ, ಜನರಲ್ಲಿ ನಂಬಿಕೆ ಮೂಡಿಸಿ ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು. ಆದರಿಲ್ಲಾಗಿರುವುದು ಘೋಷಣೆ ಮಾತ್ರ, ಒಂದೆರೆಡು ಸವಲತ್ತುಗಳನ್ನು ನೀಡಿ, ಅಲ್ಲಿನ ವ್ಯವಸ್ಥೆಯನ್ನೇ ಮಾಡದಿದ್ದರೆ ಸುಧಾರಣೆ ಹೇಗೆ ಸಾಧ್ಯ ಅಂತಾರೆ ವಡಗೇರಾ, ಹುಣಸಗಿ, ಗುರುಮಠಕಲ್ ತಾಲೂಕಿನ ಜನ.ಟ್ಯಾಕ್ಸಿಗಷ್ಟೇ ಪ್ರವಾಸೋದ್ಯಮ ಇಲಾಖೆ: ಟ್ಯಾಕ್ಸಿ ಯೋಜನೆಗೆ ಮಾತ್ರ ಮೀಸಲಾಗಿರುವಂತಹ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ, ಜಿಲ್ಲೆಯ ಅನೇಕ ಪ್ರವಾಸಿ ತಾಣಗಳ ಬಗ್ಗೆ ಗಮನ ಹರಿಸದಿರುವುದು ದುರದೃಷ್ಟಕರ. ರಾಜ್ಯದಲ್ಲಿ ಅತಿ ದೊಡ್ಡದಾಗ ಬೋನಾಳ ಪಕ್ಷಿಧಾಮ, ಯಾದಗಿರಿ ಕೋಟೆ, ಶಹಾಪುರ ಬುದ್ಧ ಮಲಗಿದ ಬೆಟ್ಟ, ಶಿರವಾಳ ಗುಂಪು ದೇವಾಲಯಗಳು ಮುಂತಾದವುಗಳ ಬಗ್ಗೆ ಕೇವಲ ಕಾಟಾಚಾರಕ್ಕೆಂಬಂತೆ ಆಗದೆ, ಘೋಷಣೆಯಾದ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಪ್ರವಾಸೀ ತಾಣಗಳ ಅಭಿವೃದ್ಧಿ ಜೊತೆಗೆ ಅದನ್ನೇ ನಂಬಿದವರ ಬದುಕು, ಹೊಸ ಉದ್ಯೋಗ ಸೃಷ್ಟಿಗೆ ಅದು ಸಹಕಾರಿಯಾಗಬಲ್ಲದು.
ಯಾದಗಿರಿ ಬೆಟ್ಟ ಸೇರಿದಂತೆ ಮೈಲಾಪುರ ಮೈಲಾರಲಿಂಗೇಶ್ವರ ಗುಡ್ಡವನ್ನು ಅಭಿವೃದ್ಧಿಪಡಿಸಿ, ಮೈಲಾಪುರ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆ ಆಗಬೇಕಿದೆ. ರೋಪ್‌ವೇ ಬೆಟ್ಟದ ಸಮಗ್ರ ಅಭಿವೃದ್ಧಿಗೆ ನಿರೀಕ್ಷೆ ಹೆಚ್ಚಾಗಿದೆ. ಶಹಾಪುರದ ಐಸಿಹಾಸಿಕ ರಾಷ್ಟ್ರಕೂಟರ 12ನೇ ಶತಮಾನದ ಶಿರವಾಳ ಮತ್ತು ಏವೂರು ಗುಂಪು ದೇಗುಲಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಒತ್ತು ನೀಡಬೇಕಿದೆ. ಶಹಾಪುರ ಐತಿಹಾಸಿ ದಿಗ್ಗಿ ಅಗಸಿ ರಕ್ಷಣೆಗೆ ಆದ್ಯತೆ ಬೇಕಿದೆ.ಶೈಕ್ಷಣಿಕ: ಶೈಕ್ಷಣಿಕ ಅಭಿವೃದ್ಧಿಗೆ ಜಿಲ್ಲೆಗೆ ಹೊಸ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಸರಕಾರಿ ಎಂಜಿನನೀಯರಿಂಗ್ ಕಾಲೇಜು, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಘೋಷಿಸಬೇಕಿದೆ. ಮೆಡಿಕಲ್ ಕಾಲೇಜು ಈಗಾಗಲೇ ಕಾರ್ಯರೂಪಕ್ಕೆ ಬಂದಿದ್ದು, ಅಲ್ಲಿ ಟೀಚಿಂಗ್ ಸ್ಟಾಫ್ ಸೇರಿದಂತೆ ಅನೇಕ ಹುದ್ದೆಗಳ ಭರ್ತಿಗೆ ಕ್ರಮವಾಗಬೇಕಿದೆ. ಬಜೆಟ್‌ನಲ್ಲಿ ಜನರ ನಿರೀಕ್ಷೆಗಳುಸುರಪುರ ತಾಲೂಕಿನ ದೇವತ್ಕಲ್ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಸುರಪುರಕ್ಕೆ ತಮ್ಮ ಬಜೆಟ್‌ನಲ್ಲಿ ಆದ್ಯತೆ ನೀಡುತ್ತಾರೆ ಎಂದು ತಿಳಿಸಿದ್ದರು. ಅದರಂತೆ ಈ ಬಾರಿಯಾದರೂ ಆದ್ಯತೆ ನೀಡುತ್ತಾರೆಯೇ ಇಲ್ಲವೇ ಎಂಬದುನ್ನು ನೋಡಬೇಕಿದೆ
- ಮಲ್ಲಿಕಾರ್ಜುನ ಕ್ರಾತಿ, ಹಿರಿಯ ದಲಿತ ಮುಖಂಡ.ರಾಜ್ಯದಲ್ಲಿ ಯಾದಗಿರಿ ಹಿಂದುಳಿದ ಜಿಲ್ಲೆಯಾಗಿದ್ದು, ಚಿಕ್ಕ ಕೈಗಾರಿಕೆಗಳು ಸ್ಥಾಪಿಸಿಸಂಪನ್ಮೂಲರ ಆದ್ಯತೆ ನೀಡಬೇಕು. ಆರ್ಥಿಕ ಸಂಫನ್ಮೂಲಗಳ ಮಿತವ್ಯಯ ಬಳಕೆ, ರಾಜಕೀಯ ವ್ಯಕ್ತಿಗಳ ನಿಷ್ಪಕ್ಷಪಾತ ಸರ್ವಾಧಿಕಾರ ಆಡಳಿತ ವರ್ತನೆಯೊಂದಿಗೆ ಬಲಹೀನ ವರ್ಗದವರ ಏಳ್ಗೆಗೆ ಒತ್ತು ನೀಡಬೇಕು. ಕೃಷ್ಣಾ ನದಿ ಹತ್ತಿರದಲ್ಲಿದ್ದು ವಿಶೇಷವಾಗಿ ಸಕ್ಕರೆ ಸ್ಥಾಪಿಸಿದರೆ ದುಡಿಯುವ ಕೈಗಳಿಗೆ ಮತ್ತು ಯುವಕರಿಗೆ ಉದ್ಯೋಗ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಯಾದಗಿರಿ ಮತ್ತು ಸುರಪುರಕ್ಕೆ ಆದ್ಯತೆ ನೀಡಬೇಕಿದೆ.- ಬಾಲರಾಜ್ ಸರಾಫ್, ಅರ್ಥಶಾಸ್ತ್ರ ಉಪನ್ಯಾಸಕರು, ಸುರಪುರ.
ಯಾದಗಿರಿ ಜಿಲ್ಲೆ ಮತ್ತು ಸುರಪುರ ತಾಲೂಕಿನಲ್ಲಿ ಆರೋಗ್ಯ, ಶಿಕ್ಷಣ, ಅರಣ್ಯ, ಆರ್ಥಿಕವಾಗಿ ಜನತೆ ಹಿಂದುಳಿದಿದ್ದಾರೆ. ಇದರಿಂದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಜಿಲ್ಲಾಮಟ್ಟದ ಸೌಲಭ್ಯವುಳ್ಳ ಆಸ್ಪತ್ರೆ ಸ್ಥಾಪಿಸಬೇಕು. ಸರಕಾರಿ ಬಿಇಡಿ ಕಾಲೇಜನ್ನು ಸ್ಥಾಪಿಸಬೇಕಿದೆ. ಬೇವಿನಮರಗಳನ್ನು ಕಡಿಯದಂತೆ ನಿಷೇಧ ಹೇರಬೇಕು. ಅರಣ್ಯ ಬೆಳೆಸಲು ಯೋಜನೆಗಳನ್ನು ರೂಪಿಸಬೇಕಿದೆ. - ಹನುಮಂತ್ರಾಯ ಮಡಿವಾಳ, ಪ್ರಗತಿಪರ ಚಿಂತಕರು, ಸುರಪುರ.ಹುಣಸಗಿ ಪಟ್ಟಣಕ್ಕೆ ಬಸ್ ಡಿಪೋ, ಹೊಸ ಬಸ್ ನಿಲ್ದಾಣ, ಯಾದಗಿರಿಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ನೂತನ ತಾಲೂಕುಗಳಿಗೆ ಮಿನಿ ವಿಧಾನಸೌಧದ ಕಟ್ಟಡ ಮತ್ತು ಅಗತ್ಯ ಸೌಲಭ್ಯಕ್ಕೆ ಅನುದಾನ ನೀಡಬೇಕು. ಶಹಾಪುರ ಪಟ್ಟಣದ ಹತ್ತಿರ ಬುದ್ಧ ಮಲಗಿರುವ ಬೆಟ್ಟ ಅಭಿವೃದ್ಧಿಗೆ ಅನುದಾನ. ಬೋನಾಳ ಪಕ್ಷಿಧಾಮಕ್ಕೆ ಪ್ರತ್ಯೆಕ ನಿಗಮ ರಚನೆ ಸಣ್ಣ ನೀರಾವರಿಗೆ ಉತ್ತೇಜನ ನೀಡಬೇಕು. ಸರ್ಕಾರಿ ಶಾಲೆಗಳ ಜೀರ್ಣೋದ್ಧಾರ ಮಾಡಬೇಕು.- ಮಹೇಶ ಸ್ಥಾವರಮಠ, ಸುರಪುರ ಮಂಡಲ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಹುಣಸಗಿ.
ರೈತರ ಬೆಳೆದ ಬೆಳೆಗೆ ಸೂಕ್ತ ದರ ಬರುವವರೆಗೆ ಶೇಖರಿಸಿಡಲು ಉಗ್ರಾಣ ಬೇಕಿದೆ. ಮೆಣಿಸಿನಕಾಯಿ ಬೆಳೆಗಳು ಕಾಯ್ದಿರಿಸಲು ಶೀಥಲೀಕರಣ ಘಟಕ ಸ್ಥಾಪನೆಯಾಗಬೇಕು. ಕೃಷ್ಣಾ ಅಚ್ಚುಕಟ್ಟು ಪ್ರದೇಶಗೊಳಪಟ್ಟಿರುವ ಜಿಲ್ಲೆಯಲ್ಲಿ ಹತ್ತಿ ಬೆಳೆ ಸಾಕಷ್ಟು ಬೆಳೆಯುತ್ತಿರುವದರಿಂದ ಜಿಲ್ಲೆಯಲ್ಲಿ ಹತ್ತಿ ಕಾರ್ಖಾನೆ ಮತ್ತು ಅದೇ ಅರಳೆಯಿಂದ ಸಿದ್ಧ ಉಡಪು ತಯಾರಿಸುವು ಗಾರ್ಮೆಂಟ್ಸ್ ಫ್ಯಾಕ್ಟರಿ ನಿರ್ಮಾಣ ಮಾಡಿದರೆ ಯವಕರು ಯವತಿಯರಿಗೆ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಬಹುದು. ಈ ಹಿಂದೆ, ರಾಜ್ಯ ಸರಕಾರದ ಕಿಸಾನ್ ಸಮ್ಮಾನ ಯೋಜನೆಯ ನಾಲ್ಕು ಸಾವಿರ ರೂಪಾಯಿಗಳನ್ನು ರಾಜ್ಯದ ರೈತರ ಖಾತೆಗೆ ಜಮ ಮಾಡಬೇಕು. - ಅಶೋಕ ಮಲ್ಲಾಬಾದಿ, ರಾಜ್ಯ ರೈತ ಕೃಷಿ ಪ್ರಶಸ್ತಿ ವಿಜೇತರು.