ರಾಜ್ಯ ಸರ್ಕಾರ ಅಭಿವೃದ್ಧಿ ಮಾಡಲು ವಿಫಲ: ಎನ್.ಎಸ್. ಹೆಗಡೆ

KannadaprabhaNewsNetwork |  
Published : Mar 02, 2024, 01:48 AM IST
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಶಾಸಕರ ನಿಧಿ ಬಿಡುಗಡೆ ಮಾಡಿಲ್ಲ. ಸಚಿವರನ್ನು ಕೇಳಿದರೆ ಮುಖ್ಯಮಂತ್ರಿಯತ್ತ ಬೊಟ್ಟು ಮಾಡುತ್ತಾರೆ. ರಾಜ್ಯದಲ್ಲಿ ಬರಗಾಲವಿದ್ದರೂ ಹಲವು ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಆರೋಪಿಸಿದರು.

ಕಾರವಾರ: ರಾಜ್ಯದಲ್ಲಿ ೮ ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡಲು ವಿಫಲವಾಗಿದೆ. ಯಾವ ಕೆಲಸಕ್ಕೂ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಬೋಗಸ್ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ನಿಧಿ ಬಿಡುಗಡೆ ಮಾಡಿಲ್ಲ. ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಸಚಿವರನ್ನು ಕೇಳಿದರೆ ಮುಖ್ಯಮಂತ್ರಿಯತ್ತ ಬೊಟ್ಟು ಮಾಡುತ್ತಾರೆ. ರಾಜ್ಯದಲ್ಲಿ ಬರಗಾಲವಿದ್ದರೂ ಹಲವು ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಮಂಡ್ಯದಲ್ಲಿ ಹನುಮ ಧ್ವಜ ಇಳಿಸುವುದು, ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ಮಾಡುತ್ತಿದೆ. ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ ಕೂಗಿದರೂ ಕಾನೂನು ಕ್ರಮವಹಿಸದೇ ಒಲೈಕೆ ರಾಜಕಾರಣಿ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಕಾರವಾರ ಒಳಗೊಂಡು ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಹಿಂದಿನ ಸರ್ಕಾರದಲ್ಲಿ ನಡೆದ ಕಾಮಗಾರಿ ಬಿಲ್ ಬಾಕಿ ಇರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿ, ಹಿಂದೆ ನಮ್ಮ ಬಿಜೆಪಿ ಸರ್ಕಾರವಿದ್ದಾಗ ಅಭಿವೃದ್ಧಿ ಕಾಮಗಾರಿ ಮಾಡಿದ್ದೇವೆ. ಚುನಾವಣೆ ಘೋಷಣೆಯಾದ ಕಾರಣ ಅನುದಾನ ಬಿಡುಗಡೆ ಆಗದಿರಬಹುದು. ಹಣ ಬಿಡುಗಡೆ ಮಾಡುವುದು ಹೊಸ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಪಕ್ಷದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಅಸಮಾಧಾನ ಇರುವ ಬಗ್ಗೆ ಕೇಳಿದಾಗ, ಹಿಂದೆ ವೆಂಕಟೇಶ ನಾಯ್ಕ ಜಿಲ್ಲಾಧ್ಯಕ್ಷರಿದ್ದಾಗ, ತಾವು ಜಿಲ್ಲಾಧ್ಯಕ್ಷರಾದ ಬಳಿಕವೂ ಎಲ್ಲ ನಿರ್ಧಾರ ತೆಗೆದುಕೊಳ್ಳುವಾಗ ಅವರನ್ನು ಕೇಳಿದ್ದೇವೆ. ಪಕ್ಷದ ಸಭೆಗಳಿಗೆ ಆಹ್ವಾನಿಸಿದ್ದೇವೆ. ಗೌರವಯುತವಾಗಿ ನಡೆಸಿಕೊಂಡಿದ್ದೇವೆ. ಆದರೆ ಅವರಿಗೆ ಏಕೆ ಅಸಮಾಧಾನವಿದೆ ಎಂಬುದು ತಿಳಿದಿಲ್ಲ. ಸಂಸದರು, ಶಾಸಕರು, ಮಾಜಿ ಶಾಸಕರು, ಮುಖಂಡರು ನಮಗೆ ಸಹಕಾರ ಕೊಟ್ಟಿದ್ದಾರೆ. ಎಲ್ಲರ ಸಲಹೆ-ಸೂಚನೆ ಪಡೆದು ಪದಾಧಿಕಾರಿಗಳ ನೇಮಕಾತಿ ಮಾಡಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಲಾಗಿದೆ. ಸಿದ್ದಾಪುರದಲ್ಲಿ ಕೆಲವು ಮುಖಂಡರಿಗೆ ಇರುವ ಅಸಮಾಧಾನ ಸರಿಯಾಗುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅಭಿಪ್ರಾಯಿಸಿದರು.

ಜಗದೀಶ ನಾಯಕ ಮೊಗಟಾ, ಗೋವಿಂದ ನಾಯ್ಕ, ಪ್ರೇಮಕುಮಾರ ನಾಯ್ಕ, ಸಂಜಯ ಸಾಳುಂಕೆ, ನಾಗೇಶ ಕುರ್ಡೇಕರ ಮೊದಲಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ