ಕನ್ನಡಪ್ರಭ ಪ್ರಕಟಿಸಿದ್ದ ಪಟ್ಟಿ 100% ನಿಜವಾಯ್ತು! ಕೊನೆಗೂ 34 ಶಾಸಕರಿಗೆ ನಿಗಮ-ಮಂಡಳಿ ಹುದ್ದೆ

KannadaprabhaNewsNetwork | Updated : Jan 27 2024, 11:44 AM IST

ಸಾರಾಂಶ

ರಾಜ್ಯ ಸರ್ಕಾರವು ಕೊನೆಗೂ 34 ಮಂದಿ ಕಾಂಗ್ರೆಸ್‌ ಶಾಸಕರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರವು ಕೊನೆಗೂ 34 ಮಂದಿ ಕಾಂಗ್ರೆಸ್‌ ಶಾಸಕರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. 

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನಿಗಮ-ಮಂಡಳಿಗೆ ಮೊದಲ ಪಟ್ಟಿಯಲ್ಲಿ ನೇಮಕಗೊಂಡ ಅಷ್ಟೂ ಮಂದಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಮಾಡಲಾಗಿದೆ.

ಜತೆಗೆ ಹಾನಗಲ್‌ ಶಾಸಕ ಶ್ರೀನಿವಾಸ ಮಾನೆ ಅವರನ್ನು ಉಪ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಅಧಿಕೃತ ಆದೇಶ ಪ್ರಕಟವಾಗುವುದು ಬಾಕಿಯಿದೆ.

ಪಟ್ಟಿ ಬಿಡುಗಡೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಪೇಕ್ಷೆಯಂತೆ ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮ-ಮಂಡಳಿ ಸಿಕ್ಕಂತಾಗಿದ್ದು, ಯಾವುದೇ ಕ್ಷಣದಲ್ಲೂ ಕಾರ್ಯಕರ್ತರ ಪಟ್ಟಿಯೂ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಿಜವಾಯ್ತು ‘ಕನ್ನಡಪ್ರಭ’ ವರದಿ: ಶ್ರೀನಿವಾಸ ಮಾನೆ ಅವರನ್ನು ಉಪ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಹಾಗೂ 34 ಮಂದಿ ಶಾಸಕರನ್ನು ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಜ.19ರಂದೇ ಶಾಸಕರ ಹೆಸರು ಸಹಿತ ‘ಕನ್ನಡಪ್ರಭ’ ಪತ್ರಿಕೆಯು ವರದಿ ಮಾಡಿತ್ತು. 

ಈ ಪೈಕಿ ಕನ್ನಡಪ್ರಭ ಹೆಸರು ಸಮೇತ ಪ್ರಕಟಿಸಿದ್ದ 34 ಮಂದಿ ಶಾಸಕರಲ್ಲಿ 33 ಮಂದಿಗೆ ನಿಗಮ-ಮಂಡಳಿ ಹುದ್ದೆ ದೊರೆತಿದೆ.

ಕನ್ನಡಪ್ರಭ ಪ್ರಕಟಿಸಿದ್ದ ಪಟ್ಟಿಯಲ್ಲಿ ಇದ್ದ 35ನೇಯ ಹೆಸರಾಗಿದ್ದ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಅಧ್ಯಕ್ಷ ಹುದ್ದೆ ದೊರೆಯಲಿದೆ ಎಂದು ಪ್ರಕಟಿಸಲಾಗಿತ್ತು. 

ಅದರಂತೆಯೇ ನರೇಂದ್ರಸ್ವಾಮಿ ಅವರ ಹೆಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜ.26ರ ನಡಾವಳಿ ಆದೇಶದಲ್ಲಿ ಇದೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಅಂತಿಮ ಆದೇಶದಲ್ಲಿ ತಡೆ ಹಿಡಿಯಲಾಗಿದೆ.

ಇವರ ಬದಲಿಗೆ ಹೊಸದಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರನ್ನಾಗಿ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಅವರನ್ನು ನೇಮಿಸಲಾಗಿದೆ. ತ

ನ್ಮೂಲಕ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ದೊರೆತಂತಾಗಿದೆ.

2 ವರ್ಷಗಳಿಗೆ ಸೀಮಿತ: ಈ ಮೊದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದಂತೆ ಎರಡು ವರ್ಷಗಳಿಗೆ ಸೀಮಿತವಾಗಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಇಷ್ಟು ಮಂದಿಗೆ ನಿಗಮ-ಮಂಡಳಿ ಅಧ್ಯಕ್ಷರಿಗೆ ಮೊದಲ ಬಾರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಿದ್ದು, ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷೆ ಹೊಂದಿದ್ದ ಎಲ್ಲರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಲಾಗಿದೆ.

ಇನ್ನು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾದ ಎಲ್ಲರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಗೆದ್ದವರೇ ಇದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರ ಹಿರಿತನ, ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು ನೇಮಕ ಮಾಡಲಾಗಿದೆ. 

ಜತೆಗೆ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಆದ್ಯತೆ ನೀಡುವ ಮೂಲಕ ಜಿಲ್ಲಾವಾರು ಹಾಗೂ ಜಾತಿವಾರು ಪ್ರಾತಿನಿಧ್ಯ ನೀಡಲಾಗಿದೆ.

ಎಲ್ಲಾ ಜಾತಿಗಳಿಗೂ ಆದ್ಯತೆ: ನಿಗಮ-ಮಂಡಳಿ ನೇಮಕದ ವೇಳೆಯೂ ಜಾತಿವಾರು ಆದ್ಯತೆ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ.

34 ಮಂದಿ ಪೈಕಿ 9 ಮಂದಿ ಲಿಂಗಾಯತರು, 7 ಮಂದಿ ಒಕ್ಕಲಿಗರು, ಪರಿಶಿಷ್ಟ ವರ್ಗಕ್ಕೆ (ಎಸ್ಟಿ) 6, ಪರಿಶಿಷ್ಟ ಜಾತಿಗೆ 4, ಅಲ್ಪಸಂಖ್ಯಾತರಿಗೆ ಎರಡು ಅಧ್ಯಕ್ಷ ಸ್ಥಾನ ನೀಡಲಾಗಿದೆ. ಉಳಿದಂತೆ ಕುರುಬ ಸಮುದಾಯಕ್ಕೆ 3, ಉಪ್ಪಾರ 1, ಈಡಿಗ 1, ಮೊಗವೀರ 1 ಸೇರಿ ಹಿಂದುಳಿದ ವರ್ಗಕ್ಕೆ 6 ಸ್ಥಾನ ನೀಡಲಾಗಿದೆ.

ಪರಿಷತ್‌ ಸದಸ್ಯರ ನಿರ್ಲಕ್ಷ್ಯ: ಒಬ್ಬರಿಗೂ ಸ್ಥಾನವಿಲ್ಲ: 34 ಮಂದಿ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಒಬ್ಬರೂ ವಿಧಾನಪರಿಷತ್‌ ಸದಸ್ಯರಿಗೆ ಅವಕಾಶ ನೀಡಿಲ್ಲ. ಇದು ವಿಧಾನ ಪರಿಷತ್‌ ಸದಸ್ಯರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದ್ದು, ವಿಧಾನಪರಿಷತ್‌ ಶಾಸಕರಿಗೆ ಕಾಂಗ್ರೆಸ್‌ ಪಕ್ಷ ಪ್ರಾತಿನಿಧ್ಯತೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸಚಿವ ಸಂಪುಟ ರಚನೆ ವೇಳೆಯೂ ಒಬ್ಬರೂ ಪರಿಷತ್‌ ಸದಸ್ಯರಿಗೆ ಅವಕಾಶ ನೀಡಲಿಲ್ಲ. ಸಚಿವ ಎನ್.ಎಸ್‌. ಬೋಸರಾಜು ಅವರು ಮೇಲ್ಮನೆಯನ್ನು ಪ್ರತಿನಿಧಿಸುತ್ತಿದ್ದರೂ ಸಚಿವ ಸ್ಥಾನ ನೀಡುವಾಗ ಅವರು ಪರಿಷತ್‌ ಸದಸ್ಯರಾಗಿರಲಿಲ್ಲ. 

ಮೊದಲು ಸಚಿವ ಸ್ಥಾನ ನೀಡಿ ಜೂ.30 ರಂದು ನಡೆದ ವಿಧಾನಪರಿಷತ್‌ ಉಪ ಚುನಾವಣೆಯಲ್ಲಿ ಅವರು ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು. ಜತೆಗೆ ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೆ ತಲಾ 25 ಕೋಟಿ ರು. ವಿಶೇಷ ಅನುದಾನ ಪ್ರಕಟಿಸಲಾಗಿದೆ. 

ಈ ಅನುದಾನವನ್ನೂ ಕಾಂಗ್ರೆಸ್‌ ಪರಿಷತ್‌ ಸದಸ್ಯರಿಗೆ ನೀಡಿಲ್ಲ. ಹೀಗಾಗಿ ಪಕ್ಷವು ಪರಿಷತ್‌ ಸದಸ್ಯರನ್ನು ಕಡೆಗಣಿಸಿದೆ ಎಂಬ ಅಸಮಾಧಾನ ತೀವ್ರಗೊಂಡಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ತಡೆ: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರನ್ನು ನೇಮಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜ.26ರ (ಶುಕ್ರವಾರ) ನಡಾವಳಿಯಲ್ಲಿ ಸ್ಪಷ್ಟಪಡಿಸಿ ಈ ಬಗ್ಗೆ ಆದೇಶ ಹೊರಡಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದ್ದರು.

ಮಂಡಳಿಯ ಅಧ್ಯಕ್ಷ ಸ್ಥಾನ ಮೂರು ವರ್ಷದ ಅವಧಿಯದ್ದು. ಹೀಗಾಗಿ ಪ್ರತ್ಯೇಕವಾಗಿ ಆದೇಶ ಹೊರಡಿಸಲು ತೀರ್ಮಾನಿಸಲಾಯಿತು. ಈ ಮಧ್ಯೆ ಮಂಡಳಿ ಅಧ್ಯಕ್ಷರ ನೇಮಕದ ಬಗ್ಗೆ ಮಾನದಂಡಗಳನ್ನು ನಿಗದಿಪಡಿಸುವ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವುದರಿಂದ ನೇಮಕ ಆದೇಶ ತಡೆ ಹಿಡಿಯಲಾಗಿದೆ.

ಮೊದಲ ಬಾರಿಗೆ ಡಿಸಿಎಂಗೂ ರಾಜಕೀಯ ಕಾರ್ಯದರ್ಶಿ!
ಮುಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿ ನೇಮಕ ಸಂಪ್ರದಾಯ ತುಂಬಾ ವರ್ಷಗಳಿಂದ ಇದೆ. ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಗಳಿಗೂ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಲಾಗಿದೆ. ಈ ಹುದ್ದೆ ಹಾನಗಲ್‌ ಶಾಸಕ ಶ್ರೀನಿವಾಸ ಮಾನೆಗೆ ದೊರಕಿದೆ.

ಐದು ಮಂದಿ ವಲಸಿಗ ಶಾಸಕರಿಗೆ ಮಣೆ: ನಿಗಮ-ಮಂಡಳಿ ನೇಮಕದ ವೇಳೆ ಜೆಡಿಎಸ್‌ನ ಮೂರು ಹಾಗೂ ಬಿಜೆಪಿಯ ಇಬ್ಬರು ಸೇರಿ ಐದು ಮಂದಿ ವಲಸಿಗ ಶಾಸಕರಿಗೆ ಮಣೆ ಹಾಕಲಾಗಿದೆ. ಅಷ್ಟೂ ಮಂದಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ಅದು ಕಾಂಗ್ರೆಸ್ಸಿನ ಕಿರಿಯ ಶಾಸಕರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ.

ಜೆಡಿಎಸ್‌ನಿಂದ ಮೂರು ಬಾರಿ ಹಾಗೂ ಕಾಂಗ್ರೆಸ್‌ನಿಂದ ಇದೇ ಮೊದಲ ಬಾರಿಗೆ ಶಾಸಕರಾಗಿರುವ ಕೆ.ಎಂ. ಶಿವಲಿಂಗೇಗೌಡ, ಒಂದು ಬಾರಿ ಪಕ್ಷೇತರ, ಮೂರು ಬಾರಿ ಜೆಡಿಎಸ್‌ ಹಾಗೂ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಶಾಸಕರಾಗಿರುವ ಗುಬ್ಬಿ ಶ್ರೀನಿವಾಸ್‌ 

2013ರಲ್ಲಿ ಬಿಜೆಪಿ ಶಾಸಕರಾಗಿದ್ದು 2019ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿ ಸೋತಿದ್ದ ರಾಜು ಕಾಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಶಾಸಕರಾಗಿದ್ದಾರೆ.

ಇನ್ನು ಮೊದಲು ಬಿಜೆಪಿ, ಬಳಿಕ ಮೂರು ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಎಚ್.ಸಿ. ಬಾಲಕೃಷ್ಣ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶರತ್‌ ಬಚ್ಚೇಗೌಡ 2019ರ ಉಪ ಚುನಾವಣೆಯಲ್ಲಿ ಪಕ್ಷೇತರವಾಗಿ ಗೆದ್ದಿದ್ದರು. 

ಇದೀಗ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ.ಎ.ಬಿ. ರಮೇಶ್‌ (ರಮೇಶ್‌ ಬಂಡಿಸಿದ್ದೇಗೌಡ) ಅವರು ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಬಳಿಕ ಪಕ್ಷ ತೊರೆದು ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿದ್ದರು. ಇಷ್ಟೂ ಮಂದಿಗೆ ಅವಕಾಶ ದೊರೆತಿದೆ.

Share this article