ರಾಜ್ಯ ಸರ್ಕಾರದ ಜಾತಿ ಗಣತಿ ವರದಿ ಅವೈಜ್ಞಾನಿಕ: ಜಗದೀಶ ಶೆಟ್ಟರ್

KannadaprabhaNewsNetwork |  
Published : Mar 04, 2024, 01:17 AM ISTUpdated : Mar 04, 2024, 01:49 PM IST
ಮಹನಿಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಸಮಾಜ ದೊಡ್ಡದು. ಬಹಳಷ್ಟು ಒಳಪಂಗಡಗಳಿದ್ದು, ಒಗ್ಗೂಡಿಸುವ ಕೆಲಸ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯ ಸರ್ಕಾರ ಈಚೆಗೆ ಸ್ವೀಕರಿಸಿದ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ. ಅದರಿಂದ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಅನ್ಯಾಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ರಾಜ್ಯ ಶಿವಶಿಂಪಿ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಶಿವಶಿಂಪಿ ಸಂಘದಿಂದ ಇಲ್ಲಿಯ ಆನಂದನಗರ ರಸ್ತೆಯ ಶಿವಪುತ್ರಸ್ವಾಮಿ ಮಠದ ಅಭಿನವ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಶಿವಶಿಂಪಿ ಸಂಭ್ರಮ ಹಾಗೂ ಶಿವಶಿಂಪಿ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

8 ವರ್ಷದ ಹಿಂದೆ ಸಮೀಕ್ಷೆ ನಡೆಸಲು ಸೂಚಿಸಲಾಗಿತ್ತು. ಈಗ ಸಮಾಜದಲ್ಲಿ ಇನ್ನಷ್ಟು ಬೆಳವಣಿಗೆ ಆಗಿರುವುದನ್ನು ಪರಿಗಣಿಸಿಲ್ಲ. ಕೇಂದ್ರ ಸರ್ಕಾರದ ಹಿಂದುಳಿದ ವರ್ಗದ ಆಯೋಗದ ಪಟ್ಟಿಯಲ್ಲಿಯೂ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳು ಸೇರಿಸಬೇಕು. ಇದರಿಂದ ನಮಗೆ ಬಹಳಷ್ಟು ಅನುಕೂಲವಾಗಲಿದೆ. ಈ ಕುರಿತು ಸರ್ಕಾರ ಚಿಂತಿಸಲಿ ಎಂದರು.

ವೀರಶೈವ ಲಿಂಗಾಯತ ಸಮಾಜ ದೊಡ್ಡದು. ಬಹಳಷ್ಟು ಒಳಪಂಗಡಗಳಿದ್ದು, ಒಗ್ಗೂಡಿಸುವ ಕೆಲಸ ಆಗಬೇಕು. ಒಗ್ಗಟ್ಟಾದರೆ ಸಮಾವೇಶ ನಡೆಸಿ ಹಿಂದುಳಿದವರನ್ನು ಗುರುತಿಸುವ, ಮಾರ್ಗದರ್ಶನ ನಡೆಸುವ ಕೆಲಸ ಸುಲಭವಾಗಲಿದೆ. ನಮ್ಮ ಶಕ್ತಿ ಪ್ರದರ್ಶನಕ್ಕೆ ಸಂಘಟನೆ ಅತ್ಯಗತ್ಯ. ಇನ್ನಷ್ಟು ಸೌಲಭ್ಯ ಹಾಗೂ ಮೀಸಲಾತಿ ಕೇಳಲು ಸುಲಭವಾಗಲಿದೆ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಮಾತನಾಡಿ, ಮಾನವೀಯ ಮೌಲ್ಯವನ್ನು ಈ ಸಮಾಜ ಹೊಂದಿದೆ. ಪ್ರಾಮಾಣಿಕ, ಪರಿಶ್ರಮ ಜೀವಿಗಳು. ನಾವು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬೆಳೆಯಬೇಕು. ವೀರಶೈವ ಲಿಂಗಾಯತ ಮಹಾಸಭಾಕ್ಕೆ ಒಳಪಂಗಡಗಳ ಅಧ್ಯಕ್ಷರನ್ನು ಉಪಾಧ್ಯಕ್ಷರನ್ನಾಗಿ ಮಾಡಲು ಪ್ರಸ್ತಾವನೆ ಇಟ್ಟಿದ್ದೇವೆ. ನಮ್ಮ ಸಮಾಜದಿಂದಲೂ ಸಮೀಕ್ಷೆ ನಡೆಸಲಾಗುವುದು ಎಂದರು.

ಸಾನಿಧ್ಯ ವಹಿಸಿದ್ದ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಹಿರಿಯರ ಹೆಸರು ಮಕ್ಕಳಿಗೆ ಇಡಬೇಕು. ವಿದ್ಯಾವಂತರ ಮಕ್ಕಳು ಅಯೋಗ್ಯರಾಗುತ್ತಿದ್ದಾರೆ. 

ಮಕ್ಕಳ ಕಡೆ ಲಕ್ಷ್ಯ ವಹಿಸಬೇಕು. ಬಂದ ದೇಣಿಗೆಯನ್ನು ಸಮಾಜಕ್ಕೆ ಸ್ಥಾಯಿ ನಿಧಿ ಸ್ಥಾಪಿಸಿ ಪ್ರಶಸ್ತಿ ಕೊಡಬೇಕು. ಮುಂದೊಂದು ದಿನ ಪ್ರಧಾನಿಯಂಥವರು ಬಂದು ಪ್ರಶಸ್ತಿ ಸ್ವೀಕರಿಸುವಂತಾಗಬೇಕು ಎಂದರು.

ಸಮಾಜದ ಅಧ್ಯಕ್ಷ ಡಾ. ಪ್ರಭಾಕರ ಶಿವಶಿಂಪಿ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಜಿಲ್ಲೆ ಅಧ್ಯಕ್ಷ ಶರಣಪ್ಪ ಚಟ್ಟೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಗಂಜಿ, ಪ್ರಸಾದ ಕರನಂದಿ, ಇಷ್ಟಲಿಂಗಪ್ಪ ಮಿರ್ಜಿ, ಸಂತೋಷ ಬಾಳಿಕಾಯಿ, ನಾಗರಾಜ ಕುಬಸದ ಸೇರಿದಂತೆ ಹಲವರಿದ್ದರು.

ಇಬ್ಬರಿಗೆ ಶಿವಶಿಂಪಿ ಸಿರಿ ಪ್ರಶಸ್ತ ಪ್ರದಾನ: ಸಮಾರಂಭದಲ್ಲಿ ಗಂಗಾವತಿ ಸಿಲ್ಕ್‌ ಪ್ಯಾಲೇಸ್ ಮಾಲೀಕ ಆನಂದ ಕಮತಗಿ ಹಾಗೂ ವಾರಾಣಸಿಯ ಡಿಐಜಿ ಡಾ. ಚನ್ನಪ್ಪ ಶಿವಶಿಂಪಿ ಅವರಿಗೆ ಶಿವಶಿಂಪಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ದಾನಿಗಳು ಹಾಗೂ ಹಿರಿಯರನ್ನು ಗೌರವಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ