ಅತಿವೃಷ್ಟಿಯಿಂದ ಹಾನಿಯಾದ ಕೆರೆಗಳಿಗೆ ರಾಜ್ಯ ಸರ್ಕಾರದಿಂದ ‘ಅವಕೃಪೆ’..!

KannadaprabhaNewsNetwork |  
Published : Jan 05, 2024, 01:45 AM IST
೪ಕೆಎಂಎನ್‌ಡಿ -9-10ಅತಿವೃಷ್ಠಿಯಿಂದ ಹಾನಿಗೊಳಗಾಗಿ ಪುನಶ್ಚೇತನ ಕಾಣದ ಲೋಕನಹಳ್ಳಿ ಮತ್ತು ಮಾವಿನಕಟ್ಟೆ ಕೊಪ್ಪಲು ಗ್ರಾಮ ವ್ಯಾಪ್ತಿಯ ಕೆರೆಗಳು. | Kannada Prabha

ಸಾರಾಂಶ

ಅತಿವೃಷ್ಟಿಯಿಂದ ಹಾನಿಗೊಳಗಾದ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೆರೆಗಳು ಸರ್ಕಾರದ ಅವಕೃಪೆಗೆ ಪಾತ್ರವಾಗಿದ್ದು ಪುನರ್ ನಿರ್ಮಾಣಕ್ಕಾಗಿ ಎದುರುನೋಡುತ್ತಿವೆ. ಅಲ್ಲದೇ, ಹೋಬಳಿಯಲ್ಲಿ ಕುಡಿಯುವ ನೀರಿಗೂ ಅಭಾವ ಹೆಚ್ಚಾಗಿದ್ದು, ಉದ್ಯೋಗವನ್ನರಸಿ ಬೆಂಗಳೂರು, ಪುಣೆ, ಮುಂಬೈಗೆ ವಲಸೆ ಹೊರಟ್ಟಿದ್ದಾರೆ ಜನರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಎರಡು ವರ್ಷದ ಹಿಂದೆ ಅತಿವೃಷ್ಟಿಯಿಂದ ಹಾನಿಗೊಳಗಾದ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೆರೆಗಳು ಸರ್ಕಾರದ ಅವಕೃಪೆಗೆ ಪಾತ್ರವಾಗಿದ್ದು ಪುನರ್ ನಿರ್ಮಾಣಕ್ಕಾಗಿ ಎದುರುನೋಡುತ್ತಿವೆ.

ಸಂತೇಬಾಚಹಳ್ಳಿ ಹೋಬಳಿ ತಾಲೂಕಿನ ಅತ್ಯಂತ ಬರಪೀಡಿತ ಪ್ರದೇಶ. ಈ ಹೋಬಳಿಯಲ್ಲಿ ಕುಡಿಯುವ ನೀರಿಗೂ ಅಭಾವವಿದ್ದು ಇಲ್ಲಿನ ಸಾವಿರಾರು ಯುವಕರು ಉದ್ಯೋಗವನ್ನರಸಿ ದೂರದ ಮುಂಬೈ, ಪುಣೆ ಮತ್ತು ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗಿದ್ದಾರೆ.

೨೦೨೧ರಲ್ಲಿ ಬಿದ್ದ ಮಹಾಮಳೆಗೆ ಸಂತೇಬಾಚಹಳ್ಳಿ ಹೋಬಳಿಯ ಸಂತೇಬಾಚಹಳ್ಳಿ, ದೊಡ್ಡಕ್ಯಾತನಹಳ್ಳಿ, ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು, ಅಘಲಯ ಮುಂತಾದ ಕೆರೆಗಳು ಒಡೆದು ಅಪಾರ ಹಾನಿ ಉಂಟಾಗಿತ್ತು. ಅಂದು ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಒಂದಷ್ಟು ಅನುದಾನ ತಂದು ಸಂತೇಬಾಚಹಳ್ಳಿ ಮತ್ತು ದೊಡ್ಡಕ್ಯಾತನಹಳ್ಳಿ ಕೆರೆಗಳನ್ನು ಪುನರ್ ನಿರ್ಮಿಸುವಲ್ಲಿ ಯಶಸ್ವಿಯಾದರು. ಆದರೆ, ಒಡೆದ ಎಲ್ಲ ಕೆರೆಗಳ ಮರು ನಿರ್ಮಾಣದಲ್ಲಿ ಮಾಜಿ ಸಚಿವರು ವಿಫಲರಾದರು. ಇದರ ಪರಿಣಾಮ ತಾಲೂಕಿನ ಲೋಕನಹಳ್ಳಿ ಕೆರೆ, ಮಾವಿನಕಟ್ಟೆ ಕೊಪ್ಪಲು ಕೆರೆಗಳು, ಅಘಲಯ ಕೆರೆ ಕೋಡಿ ರಸ್ತೆ ಸೇರಿದಂತೆ ಹಲವು ರಸ್ತೆ ಮತ್ತು ಸೇತುವೆಗಳು ಪುನರ್ ನಿರ್ಮಾಣಕ್ಕೆ ಕಾಯುತ್ತಿವೆ.

ಒಡೆದು ಹೋಗಿರುವ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆ ಬಯಲಿನ ತೆಂಗು ಮತ್ತಿತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೆರೆ ಪ್ರದೇಶದ ರೈತರು ಸಂಕಷ್ಠಕ್ಕೆ ಸಿಲುಕಿದ್ದು ಅವರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಿ ತಕ್ಷಣವೇ ಒಡೆದು ಹೋಗಿರುವ ಕೆರೆಗಳನ್ನು ಪುನರ್ ನಿರ್ಮಿಸಿ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡುವುದು ಅಗತ್ಯ, ಅನಿವಾರ್ಯವಾಗಿದೆ.ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದರೆ ಒಡೆದು ಹೋದ ಕೆರೆಗಳ ಪುನರ್ ನಿರ್ಮಾಣ ಅಸಾಧ್ಯವಾಗಿರಲಿಲ್ಲ. ಯಾವುದೇ ಹಾನಿಗೀಡಾಗದೆ ಚೆನ್ನಾಗಿದ್ದ ಹೊಸಹೊಳಲು ಕೆರೆ, ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆ, ಸಿಂಧಘಟ್ಟ ಕೆರೆ, ಹರಳಹಳ್ಳಿ ಕೆರೆ, ಕುಪ್ಪಹಳ್ಳಿ ಮತ್ತು ವಡ್ಡರಹಳ್ಳಿ ಕೆರೆಗಳಿಗೆ ಹತ್ತಾರು ಕೋಟಿ ಅನುದಾನ ಹಾಕಿದ ಮಾಜಿ ಸಚಿವರು ಒಡೆದು ಹೋದ ಕೆರೆಗಳತ್ತ ಒಮ್ಮೆ ತಿರುಗಿ ನೋಡಿದ್ದರೆ ಸಂತೇಬಾಚಹಳ್ಳಿ ಹೋಬಳಿಯ ರೈತರು ಇಂದಿನ ಸಂಕಷ್ಠಕ್ಕೆ ಒಳಗಾಗುತ್ತಿರಲಿಲ್ಲ.- ಕಾರಿಗನಹಳ್ಳಿ ಪುಟ್ಟೇಗೌಡ, ರೈತಮುಖಂಡ ಹಿಂದಿನ ಶಾಸಕರ ಅಭಿವೃದ್ಧಿ ವೈಫಲ್ಯದಿಂದ ಸಂತೇಬಾಚಹಳ್ಳಿ ಹೋಬಳಿಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೇತ್ರದ ಶಾಸಕನಾಗಿ ನಾನೂ ಕೂಡ ಒಡೆದು ಹೋದ ಕೆರೆಗಳು ಮತ್ತು ತಾಲೂಕಿನಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದೇನೆ. ಒಡೆದು ಹೋಗಿರುವ ಲೋಕನಹಳ್ಳಿ ಮತ್ತು ಮಾವಿನಕಟ್ಟೆ ಕೊಪ್ಪಲು ಕೆರೆಗಳು ಜಿಪಂ ವ್ಯಾಪ್ತಿಗೆ ಸೇರಿದ್ದು ಪುನರ್ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ ವಹಿಸಲಾಗಿದೆ. ಇದರ ಅಂದಾಜು ವೆಚ್ಚ ತಯಾರಿಸಿ ತಾಲೂಕಿನ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ.

- ಎಚ್.ಟಿ.ಮಂಜು, ಶಾಸಕರು, ಕೆ.ಆರ್.ಪೇಟೆ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...