ಕನ್ನಡಪ್ರಭ ವಾರ್ತೆ ಚಾಮರಾಜನಗರ ಚಾಮರಾಜನಗರ ನಗರಸಭೆಯು ೨೦೨೩-೨೪ರಲ್ಲಿ ಡೇ ನಲ್ಮ್ ಅಭಿಮಾನದ ಉಪ ಘಟಕದಲ್ಲಿ ನಗರದ ವಸತಿ ರಹಿತರಿಗೆ ಆಶ್ರಯ ನೀಡುವಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿರುವುದನ್ನು ಪ್ರಶಂಸಿಸಿ ರಾಜ್ಯ ಸರ್ಕಾರ ಮಹಿಳಾ ದಿನಾಚರಣೆ ನಿಮಿತ್ತ ನಗರಸಭೆ ಪೌರಾಯುಕ್ತ ರಾಮದಾಸ್, ಸಂಯೋಜಕ ವೆಂಕಟನಾಯಕ, ಅಮ್ಜತ್ ಪಾಷಾ ಅವರಿಗೆ ಪ್ರಶಸ್ತಿ ಹಾಗೂ ಫಲಕ ನೀಡಿ ಅಭಿನಂದಿಸಿದೆ.
ರಾಜ್ಯ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯು ಆಯೋಜನೆ ಮಾಡಿದ್ದ ೨೦೨೩-೨೪ನೇ ಸಾಲಿನ ರಾಜ್ಯ ಮಟ್ಟದ ನಗರ ವಸತಿ ರಹಿತರಿಗೆ ಅಶ್ರಯ ನೀಡುವಲ್ಲಿ ಉತ್ತಮ ಸೇವೆಯನ್ನು ನೀಡಿರುವ ನಗರಸಭೆಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಚಾ.ನಗರ ನಗರಸಭೆಗೆ ನೀಡಿ ಗೌರವಿಸಿದೆ.ನಗರಸಭೆ ವ್ಯಾಪ್ತಿಯಲ್ಲಿರುವ ವಸತಿ ರಹಿತರಿಗೆ ಪುರ್ನವಸತಿ ಕಲ್ಪಿಸುವಲ್ಲಿ ಡೇ ನಲ್ಮೆ ಯೋಜನೆಯಡಿಯಲ್ಲಿ ನಗರವಸತಿ ರಹಿತ ಆಶ್ರಯ ಕೇಂದ್ರವನ್ನು ವರ್ತಕರ ಭವನದ ಪಕ್ಕದ ಮೂಡಲು ಧ್ವನಿಯ ಸಂಸ್ಥೆಯ ಮೂಲಕ ಸ್ಥಾಪಿಸಿ, ನಗರದಲ್ಲಿರುವ ಬಿಕ್ಷುಕರು, ವಸತಿ ರಹಿತ ಕೂಲಿ ಕಾರ್ಮಿಕರು, ಬೀದಿ ಬದಿಯಲ್ಲಿದ್ದ ಅನಾಥರನ್ನು ಗಮನಿಸಿ, ಅವರನ್ನು ಕೇಂದ್ರಕ್ಕೆ ದಾಖಲು ಮಾಡಿ ಉಚಿತವಾಗಿ ಊಟ ವಸತಿ ನೀಡುವ ಮೂಲಕ ನಗರಸಭೆಯಲ್ಲಿ ವಸತಿ ರಹಿತರಿಗೆ ಸೌಲಭ್ಯವನ್ನು ಕಲ್ಪಿಸಿದ ಕೀರ್ತಿ ಚಾನಗರ ನಗರಸಭೆಗೆ ದೊರೆತಿದೆ. ನಗರಸಭೆ ವತಿಯಿಂದ ನಿರ್ವಹಣೆಯಾಗುತ್ತಿರುವ ಈ ವಸತಿ ಕೇಂದ್ರದಲ್ಲಿ ೧೪ ಮಹಿಳೆಯರು, ೯ ಮಂದಿ ಪುರುಷರು ಸೇರಿ ೨೩ ಮಂದಿ ಆಶ್ರಯ ಪಡೆಯುವ ಜೊತೆಗೆ ಗುಣಮಟ್ಟ ಅಹಾರ, ಆರೋಗ್ಯ ತಪಾಸಣೆ, ಮತ್ತು ಶುಚಿತ್ವವನ್ನು ಕೇಂದ್ರ ಕಾಪಾಡಿಕೊಂಡು ಬಂದಿತ್ತು. ಈ ವಸತಿ ರಹಿತರ ಆರೈಕೆ ಕೇಂದ್ರಕ್ಕೆ ನ್ಯಾಯಾಧೀಶರು, ಜಿಲ್ಲಾಧಿಕಾರಿ, ಸ್ಥಳೀಯ ಸಂಸ್ಥೆಗಳ ಯೋಜನೆ ನಿರ್ದೇಶಕರು, ಭೇಟಿ ನೀಡಿ, ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೆಲ್ಲವನ್ನು ಗಮನಿಸಿದ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ಹಾಗೂ ಕೌಶಲ್ಯಾಭಿವೃದ್ದಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯು ೨೦೨೩-೨೪ನೇ ಸಾಲಿನ ಉತ್ತಮ ಕಾರ್ಯನಿರ್ವಹಣೆ ಪ್ರಶಸ್ತಿಯನ್ನು ಮಹಿಳಾ ದಿನಾಚರಣೆಯಂದು ನೀಡಿ ಅಭಿನಂದಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಕಾರ್ಯದರ್ಶಿ ಉಮಾ ಮಹದೇವನ್, ಕೌಶಲ್ಯ ಅಭಿವೃದ್ದಿ ಅಭಿಯಾನದ ನಿರ್ದೇಶಕಿ ಶ್ರೀವಿದ್ಯಾ, ಮೊದಲಾದವರು ಇದ್ದರು.