ಸೆ.1ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಆಯೋಜನೆ: ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್

KannadaprabhaNewsNetwork | Updated : Aug 25 2024, 02:01 AM IST

ಸಾರಾಂಶ

ಕಳೆದ 10 ವರ್ಷಗಳಿಂದ ಜಿಲ್ಲಾದ್ಯಂತ ಹಲವು ನೃತ್ಯ ಯುವಜನರಿಗೆ ತರಬೇತಿ ಹಾಗೂ ರೆಬೆಲ್ ಡ್ಯಾನ್ಸ್ ವಿದ್ಯಾರ್ಥಿಗಳಿಂದ ವಿವಿಧ ಶೋಗಳಲ್ಲಿ ಪ್ರದರ್ಶನ ನೀಡಲಾಗಿದೆ. ನಾಡಹಬ್ಬ ದಸರಾ ಯುವ ಸಂಭ್ರಮ ಮತ್ತು ಯುವ ದಸರಾದಲ್ಲಿ ಪ್ರತಿ ವರ್ಷವೂ ಕಾರ್‍ಯಕ್ರಮ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೆಬೆಲ್ ಡ್ಯಾನ್ಸ್ ಗ್ರೂಪ್ ವತಿಯಿಂದ ಸೆ.1 ರಂದು ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಜಿಲ್ಲಾದ್ಯಂತ ಹಲವು ನೃತ್ಯ ಯುವಜನರಿಗೆ ತರಬೇತಿ ಹಾಗೂ ರೆಬೆಲ್ ಡ್ಯಾನ್ಸ್ ವಿದ್ಯಾರ್ಥಿಗಳಿಂದ ವಿವಿಧ ಶೋಗಳಲ್ಲಿ ಪ್ರದರ್ಶನ ನೀಡಲಾಗಿದೆ. ನಾಡಹಬ್ಬ ದಸರಾ ಯುವ ಸಂಭ್ರಮ ಮತ್ತು ಯುವ ದಸರಾದಲ್ಲಿ ಪ್ರತಿ ವರ್ಷವೂ ಕಾರ್‍ಯಕ್ರಮ ನೀಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಂಸ್ಕೃತಿಕ, ಬೌದ್ಧಿಕವಾಗಿ ವಿವಿಧ ಕಾರ್‍ಯಕ್ರಮಗಳನ್ನು ನೀಡಿರುವ ಪ್ರತಿಭಾವಂತ ಯುವಜನರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಸಂಸ್ಥೆ ಚೊಚ್ಚಲವಾಗಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ರೆಬೆಲ್ ಕಪ್ ನೃತ್ಯ ವೈಭವ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, ಕಾಂತಾರ ಸಿನಿಮಾದ ನಟಿ ಸಪ್ತಮಿಗೌಡ, ನೃತ್ಯ ಸಂಯೋಜಕ ಮೋಹನ್ ಭಾಗವಹಿಸುವರು ಎಂದರು.

ಶಾಸಕರಾದ ಪಿ. ರವಿಕುಮಾರ್, ಕೆ.ಎಂ. ಉದಯ್, ಪಿ.ಎಂ. ನರೇಂದ್ರಸ್ವಾಮಿ, ಮಧು ಜಿ.ಮಾದೇಗೌಡ, ಜೆಡಿಎಸ್ ಮುಖಂಡ ರಾಮಚಂದ್ರು, ಮಾಜಿ ಶಾಸಕರಾದ ಡಾ.ಕೆ. ಅನ್ನದಾನಿ, ಡಿ.ಸಿ. ತಮ್ಮಣ್ಣ, ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ, ಬಿಜೆಪಿ ಮುಖಂಡ ಅಶೋಕ್‌ ಜಯರಾಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಫಿಟ್‌ನೆಸ್ 11ನ ಮಾಲೀಕ ರೋಹಿತ್ ಭಾಗವಹಿಸುವರು ಎಂದು ತಿಳಿಸಿದರು.

ಸ್ಪರ್ಧೆ ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ವಿಜೇತರಿಗೆ 10,15,25 ಸಾವಿರ ರು. ಹಾಗೂ ಹಿರಿಯರ ವಿಭಾಗದಲ್ಲಿ 3 ಮತ್ತು 2 ಸಾವಿರ ಬಹುಮಾನ ಸೇರಿದಂತೆ ಒಟ್ಟು 1.50 ಲಕ್ಷ ರು. ಮೊತ್ತದ ಬಹುಮಾನಗಳನ್ನು ನೀಡಲಾಗುವುದು. ಕಿರಿಯರಿಗೆ 1 ಸಾವಿರ ಮತ್ತು 2500 ರು. ಪ್ರವೇಶ ಧನ ನಿಗದಿಪಡಿಸಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ತಂಡಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಆಯ್ಕೆ ಮಾಡಿ ಸ್ಪರ್ಧೆಗೆ ನಿಯೋಜಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗ್ರೂಪ್‌ನ ಸಂಸ್ಥಾಪಕ ಅರ್ಜುನ್, ಮುಖಂಡರಾದ ಗೋವಿಂದ್, ರೋಹಿತ್, ಪ್ರದೀಪ್, ರಾಮ್ ಇದ್ದರು.

Share this article