ಚಿತ್ರದುರ್ಗದಲ್ಲಿ 2 ದಿನಗಳ ರಾಜ್ಯಮಟ್ಟದ ಬಯಲಾಟ ಪ್ರದರ್ಶನ

KannadaprabhaNewsNetwork |  
Published : Jul 17, 2025, 12:30 AM IST
ಫೋಟೋ 16ಎಚ್‌ಎಸ್‌ಡಿ5: ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಬಯಲಾಟ ಅಕಾಡೆಮಿಯ ಕಾರ್ಯಕ್ರಮಗಳ ಕುರಿತು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್   ಪತ್ರಿಕಾಗೋಷ್ಠಿ ಯಲ್ಲಿ  ಮಾತನಾಡಿದರು. | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ಕಾರ್ಯಕ್ರಮಗಳ ಕುರಿತು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಐತಿಹಾಸಿಕ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮುಂಬರುವ ಆಗಸ್ಟ್ ಮೊದಲ ವಾರದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಬಯಲಾಟ ಪ್ರದರ್ಶನ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಬಯಲಾಟ ಅಕಾಡೆಮಿಯ ಕಾರ್ಯಕ್ರಮಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗದಲ್ಲಿ ಈಗಲೂ ಬಯಲಾಟ ಆಡುವುದು ಚಾಲ್ತಿಯಲ್ಲಿದೆ. ಜಿಲ್ಲೆಯಲ್ಲಿ ಕರಿಭಂಟನ ಕಾಳಗ, ಕರಿಭಂಟನ ಕಥೆ ಬಯಲಾಟ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ ಪ್ರದರ್ಶಿಸುವ ಬಯಲಾಟದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುವುದು ವಿಶೇಷವಾಗಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಬಯಲಾಟ ಕಲೆಯ ಮಹತ್ವ ಕುರಿತು ವಿದ್ವಾಂಸರಿಂದ ಚಿಂತನ-ಮಂಥನ ವಿಚಾರ ಸಂಕಿರಣ, ಮೂಲ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕಲಾ ತಂಡಗಳಿಂದ ಹಾಡುಗಾರಿಕೆ ಮತ್ತು ಬಯಲಾಟ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

*ಪುನರುಜ್ಜೀನವನ ಹಾಗೂ ಪ್ರೋತ್ಸಾಹಕ್ಕೆ ಕ್ರಿಯಾ ಯೋಜನೆ: ರಾಜ್ಯದ 21 ಜಿಲ್ಲೆಗಳಲ್ಲಿ ಬಯಲಾಟ ಕಲೆ ಅಸ್ತಿತ್ವದಲ್ಲಿದೆ. ಬಯಲಾಟದ ಜತೆಗೆ ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟದ ಪ್ರಕಾರಗಳು ಬಯಲಾಟದ ಜೊತೆಯಲ್ಲಿಯೇ ಇವೆ. ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧನಾಟ ಎಂಬ ಪ್ರಕಾರಗಳು ಇವೆ. ಇಂದಿಗೂ ಈ ಕಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿವೆ. ಆದರೆ ಈ ಕಲೆಗಳ ಬಗ್ಗೆ ವಿದ್ಯಾವಂತರು ಹಾಗೂ ನಗರ ಜನರಿಗೆ ಹೆಚ್ಚು ಪರಿಚಯವಿಲ್ಲ. ಇಂದಿನ ಪೀಳಿಗೆಯವರಿಗೆ ಬಯಲಾಟದ ಕುರಿತು ಆಸಕ್ತಿ ಮೂಡವಂತೆ ಕಾರ್ಯಕ್ರಮಗಳನ್ನು ರೂಪಿಸಲು ಅಕಾಡೆಮಿ ರೂಪಿಸಲು ಚಿಂತಿಸಿದೆ ಎಂದರು.

*ಕಲಾವಿದರ ಮಾಹಿತಿ ಸಂಗ್ರಹ: ಪ್ರತಿ ಜಿಲ್ಲೆಯಲ್ಲೂ ಬಯಲಾಟಕ್ಕೆ ಸಂಬಂದಿಸಿದಂತೆ ವಾದ್ಯಗಾರರು, ಕಥೆಗಾರರು, ಬಣ್ಣಗಾರರು, ವೇಷ ಮಾಡುವವರು ಸೇರಿ ಸಾವಿರಾರು ಕಲಾವಿದರು ಇದ್ದಾರೆ. ಜೀವನ ಪೂರ್ತಿ ಕಲೆಗಾಗಿ ದುಡಿದ ಇವರ ಕುರಿತಂತೆ ಅಕ್ಷರ ಮಾಧ್ಯಮದಲ್ಲಿ ಮಾಹಿತಿ ದೊರಕುವುದಿಲ್ಲ. ಮುಂದಿನ ತಲೆಮಾರಿಗೆ ಇವರ ಕೊಡುಗೆ ತಿಳಿಸಲು ದಾಖಲೀಕರಣ ಅಗತ್ಯ. ಈ ಹಿನ್ನಲೆಯಲ್ಲಿ ಕಲಾವಿದರ ಸಾಧನೆಗಳ ಕುರಿತು ಮಾಹಿತಿ ಸಂಗ್ರಹ ಕೆಲಸಕ್ಕೆ ಅಕಾಡೆಮಿ ಮುಂದಾಗಿದೆ ಆಗಸ್ಟ್ ತಿಂಗಳಿಂದ ಮಾಹಿತಿ ಸಂಗ್ರಹ ಆರಂಭವಾಗಲಿದೆ ಎಂದರು.

*ಹಸ್ತಪ್ರತಿಗಳಿಗೆ ಡಿಜಿಟಲ್ ರೂಪ: ಬಯಲಾಟ ಗ್ರಾಮೀಣ ಜನರು ಹುಟ್ಟು ಹಾಕಿದ ಜಾನಪದ ಕಲೆ. ಪ್ರತಿ ಜಿಲ್ಲೆಯಲ್ಲೂ ಬಯಲಾಟದ ವಿಭಿನ್ನ ರೂಪಗಳನ್ನು ಕಾಣಬಹುದು. ಬಯಲಾಟ ಕವಿಗಳು ಆಯಾ ಪ್ರದೇಶದ ಜನರು ಆಸಕ್ತಿಗಳಿಗನುಗುಣವಾಗಿ ಬಯಲಾಟ ಕಥೆಗಳನ್ನು ಮೌಖಿಕ ಮತ್ತು ಲಿಖಿತ ರೂಪದಲ್ಲಿ ರಚಿಸಿದ್ದಾರೆ. ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಕಂಬೋಜ ರಾಜ ಕಥೆ, ಬಳ್ಳಾರಿ ಜಿಲ್ಲೆಯಲ್ಲಿ ದ್ರೌಪದಿ ವಸ್ತಾçಪರಣ, ಚಿತ್ರದುರ್ಗ ಜಿಲ್ಲೆಯಲ್ಲಿ ಕರಿಭಂಟನ ಕಥೆ ಬಹಳ ಪ್ರಸಿದ್ಧಿ ಪಡೆದಿವೆ. ರಾಮಾಯಣದ ಕಥಾ ಭಾಗಗಳನ್ನು ಆಯ್ಕೆ ಮಾಡಿಕೊಂಡು ಬಯಲಾಟ ಪ್ರದರ್ಶಿಸಲಾಗುತ್ತದೆ. ಈ ಕಥೆಗಳನ್ನು ಆಯಾ ಕಲಾವಿದರೇ, ಹಸ್ತ ಪ್ರತಿಗಳನ್ನು ಮಾಡಿಕೊಂಡು ಅಮೂಲ್ಯ ಆಸ್ತಿಯಂತೆ ಸಂರಕ್ಷಿಸಿದ್ದಾರೆ. ಈ ಎಲ್ಲಾ ಈ ಕಥೆಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಇವುಗಳಿಗೆ ಡಿಜಿಟಲ್ ರೂಪ ನೀಡಿ ಬಯಲಾಟ ಅಕಾಡೆಮಿ ವೆಬ್‌ಸೈಟ್‌ನಲ್ಲಿ ಹಾಕಲಾಗುವುದು ಎಂದರು.

*ಕಲಾವಿದರು ಹಾಗೂ ಸಂಶೋಧನೆ ಪುರಸ್ಕಾರ: ಅಕಾಡೆಮಿಯಿಂದ ಪ್ರತಿ ವರ್ಷ ಹಿರಿಯ ಬಯಲಾಟ ಕಲಾವಿದರು ಹಾಗೂ ವಿದ್ವಾಂಸರ ಜೀವಮಾನ ಸಾಧನೆಯನ್ನು ಪರಿಗಣಿಸಿ, ಐವರಿಗೆ ಗೌರವ ಪ್ರಶಸ್ತಿ ನೀಡಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿ ರೂ.50 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ಕಲಾವಿದರು ಮತ್ತು ವಿದ್ವಾಂಸರಲ್ಲಿ ಹತ್ತು ಜನರಿಗೆ ವಾರ್ಷಿಕ ಪ್ರಶಸ್ತಿ ಕೊಡಲಾಗುತ್ತದೆ. ಇದು 25 ಸಾವಿರ ರು. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಬಯಲಾಟ ಸಾಹಿತ್ಯ, ಸಂಶೋಧನೆ, ಸಂಪಾದಿತ ಕೃತಿಗಳಲ್ಲಿ ಯಾವುದಾದರೂ ಒಂದು ಕೃತಿಗೆ ರೂ.25 ಸಾವಿರ ನಗದು ಬಹುಮಾನ ನೀಡಲಾಗುವುದು. 58 ವರ್ಷ ತುಂಬಿದ ಬಯಲಾಟ ಕಲಾವಿದರಿಗೆ ಮಾಶಾಸನ ನೀಡಲಾಗುತ್ತಿದೆ ಎಂದರು.

*ಹೊರ ರಾಜ್ಯಗಳಲ್ಲಿ ಬಯಲಾಟ ಪ್ರದರ್ಶನ:

ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹೊರ ರಾಜ್ಯದ ಜಿಲ್ಲೆಗಳಲ್ಲಿಯೂ ಬಯಲಾಟವನ್ನು ಹೋಲುವ ಜನಪದ ರಂಗ ಕಲೆಗಳಿವೆ. ಈ ರಾಜ್ಯಗಳ ಜೊತೆ ಪರಸ್ಪರ ಸೌಹಾರ್ದ ಸಂಬಂಧ ಬೆಳೆಸಲು ಬಯಲಾಟ ಪ್ರದರ್ಶನ ಏರ್ಪಡಿಸುವುದು. ಜೊತೆಗೆ ರಾಷ್ಟçದ ಬೇರೆ ಬೇರೆ ಸಾಂಸ್ಕೃತಿಕ ಕೇಂದ್ರಗಳಲ್ಲಿಯೂ ಆಯ್ದ ತಂಡಗಳಿಂದ ಬಯಲಾಟ ಪ್ರದರ್ಶನಕ್ಕೆ ಅವಕಾಶ ಪಡೆದುಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಈ ವೇಳೆ ನಿವೃತ್ತ ಪ್ರಾಧ್ಯಾಪಕ ಡಾ.ಮೈಲಹಳ್ಳಿ ರೇವಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಸಮದಪ್ಪ, ಕರ್ನಾಟಕ ಬಯಲಾಟ ಅಕಾಡೆಮಿಯ ಮಂಜುನಾಥ ಹಡಪದ ಇದ್ದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ