ಕನ್ನಡಪ್ರಭ ವಾರ್ತೆ ಕಾರ್ಕಳ
ಗ್ಯಾರಂಟಿಗಳಿಂದ ಕರ್ನಾಟಕ ರಾಜ್ಯ ಇಂದು ದಿವಾಳಿ ಅಂಚಿನಲ್ಲಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನವಿಲ್ಲ, ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ರದ್ದು ಮಾಡಿದೆ, ಮದ್ಯಕ್ಕೆ ದರ ಏರಿಸಿ ಒಂದು ಕೈಯಿಂದ ಕಿತ್ತುಕೊಂಡು ಗ್ಯಾರಂಟಿಗಳ ಮೂಲಕ ಕೊಡುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಶಾಸಕ, ರಾಜ್ಯ ಬಿಜೆಪಿ ಚುನಾವಣಾ ಸಂಚಾಲಕ ವಿ.ಸುನಿಲ್ ಕುಮಾರ್ ಟೀಕಿಸಿದರು.ಅವರು ಶುಕ್ರವಾರ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರಿಗೆ, ಬಾಂಬ್ ಸ್ಫೋಟ ನಡೆಸುವ ಭಯೋತ್ಪಾದಕರನ್ನು ಸಮರ್ಥನೆ ಮಾಡುವವರಿಗೆ ಮತ ನೀಡಬೇಕಾ? ರಾಮನೇ ಇಲ್ಲವೆಂದು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಪಕ್ಷ, ರಾಮ ಮಂದಿರದ ಉದ್ಘಾಟನೆಗೆ ಹೋಗಲ್ಲವೆಂದ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಜರಾಯಿ ಇಲಾಖೆಯಲ್ಲಿದ್ದಾಗ ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ದೇವಾಲಯಗಳಿಗೆ ಅನುದಾನ ನೀಡಲಾಗಿದೆ. ಪಂಚಾಯಿತಿ ಸದಸ್ಯರ ಗೌರವ ಸಹಾಯಧನ ಏರಿಕೆ ಸೇರಿದಂತೆ ನೂರಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಮಾತನಾಡಿ, ಚುನಾವಣೆ ಬಳಿಕ ರಾಜ್ಯ ಸರ್ಕಾರವು ಗ್ಯಾರಂಟಿ ಅನುದಾನಗಳನ್ನು ನಿಲ್ಲಿಸಿದರೆ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡುತ್ತೇವೆ ಎಂದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.ಬೋಳ ಪ್ರಭಾಕರ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿದರು.ಚುನಾವಣಾ ಪ್ರಭಾರಿ ಶ್ಯಾಮಲಾ ಕುಂದರ್, ರಾಘವೇಂದ್ರ ಕಿಣಿ, ಬಿಜೆಪಿ ಮುಖಂಡರಾದ ಎಂ.ಕೆ. ವಿಜಯ ಕುಮಾರ್, ಮಣಿ ರಾಜ ಶೆಟ್ಟಿ, ಉದಯ ಎಸ್. ಕೋಟ್ಯಾನ್, ಬೋಳ ಜಯರಾಮ ಸಾಲ್ಯಾನ್, ಜಿಲ್ಲಾ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯರಾದ ವಿಜೇಂದ್ರ ಕಿಣಿ, ಸುಂದರ ದೀಪ ಪ್ರಜ್ವಲನೆ ಮಾಡಿದರು. ಸುಮನಾ ಪ್ರಾರ್ಥಿಸಿದರು. ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಸಾಲ್ಯಾನ್ ವಂದಿಸಿದರು.