ಎಂಎಂ ಹಿಲ್ಸ್‌ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ

KannadaprabhaNewsNetwork |  
Published : Sep 20, 2025, 01:00 AM ISTUpdated : Sep 20, 2025, 10:01 AM IST
male mahadeshwara temple mm hills

ಸಾರಾಂಶ

ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯ ಎಂದು ಘೋಷಿಸುವ ಸಂಬಂಧ ಸುಪ್ರೀಂಕೋರ್ಟ್‌ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದ ಬೆನ್ನಲ್ಲೇ ಇದೀಗ ಅದಕ್ಕೆ ಬೇಕಾಗುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.

ಗಿರೀಶ್‌ ಗರಗ

 ಬೆಂಗಳೂರು :  ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯ ಎಂದು ಘೋಷಿಸುವ ಸಂಬಂಧ ಸುಪ್ರೀಂಕೋರ್ಟ್‌ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದ ಬೆನ್ನಲ್ಲೇ ಇದೀಗ ಅದಕ್ಕೆ ಬೇಕಾಗುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. 

ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳ ಅಸಹಜ ಸಾವು ಪ್ರಕರಣದ ನಂತರ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿ ಮಾಡುವ ಕುರಿತ ಆಗ್ರಹ ಹೆಚ್ಚುತ್ತಲಿದೆ. ಅದಕ್ಕೆ ಪೂರಕವಾಗಿ 5 ಹುಲಿಗಳ ಸಾವಿನ ಕುರಿತು ತನಿಖೆಗೆ ಸುಪ್ರೀಂಕೋರ್ಟ್‌ ನೇಮಿಸಿದ್ದ ಸಿಇಸಿ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವು ಹುಲಿ ಸಂರಕ್ಷಿತಾರಣ್ಯವಾಗಲು ಪ್ರಶಸ್ತವಾಗಿದೆ ಎಂದು ವರದಿ ನೀಡಿದೆ.

ಈ ವರದಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತನ್ನ ಚಟುವಟಿಕೆಯನ್ನು ಚುರುಕುಗೊಳಿಸಿದ್ದು, ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ ಶೀಘ್ರದಲ್ಲಿ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದೆ.

2017-18ರಲ್ಲೇ ಪ್ರಸ್ತಾವನೆ:

ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿಸುವ ಸಂಬಂಧ ರಾಜ್ಯ ಸರ್ಕಾರ 2017-18ರಲ್ಲಿಯೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದಾದ ನಂತರ 2019ರಲ್ಲಿ ರಾಜ್ಯ ವನ್ಯಜೀವಿ ಮಂಡಳಿಯೂ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿಸಲು ಅನುಮೋದನೆ ನೀಡಿತ್ತು. ಆದರೆ, ವನ್ಯಜೀವಿಧಾಮದಲ್ಲಿರುವ ಗ್ರಾಮಗಳು, ವಸತಿ ಪ್ರದೇಶಗಳ ವಿವರ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರಾಧಿಕಾರ ಸೂಚಿಸಿತ್ತು. ಅದರ ಆಧಾರದಲ್ಲಿ ಅರಣ್ಯ ಇಲಾಖೆ ಪರಿಷ್ಕೃತ ಪ್ರಸ್ತಾವನೆ ಕಳುಹಿಸಿತ್ತು. ಆದರೆ, ಅನಂತರ ಯಾವುದೇ ಪ್ರಕ್ರಿಯೆಗಳೂ ನಡೆದಿರಲಿಲ್ಲ. ಅಲ್ಲದೆ, ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಕೂಡ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವನ್ನಾಗಿ ಘೋಷಿಸುವುದಕ್ಕೆ ಬೇಕಾಗುವ ಎಲ್ಲ ಪ್ರಕ್ರಿಯೆ ನಡೆಸುವಂತೆಯೂ ಸೂಚನೆ ನೀಡಿದ್ದರು.

ಇದೀಗ ಅರಣ್ಯ ಇಲಾಖೆ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿಸಲು ಸಿದ್ಧತೆ ಆರಂಭಿಸಿದೆ. ಹುಲಿ ಸಂರಕ್ಷಿತಾರಣ್ಯವನ್ನಾಗಿ ಮಾಡುವುದಕ್ಕೂ ಮುನ್ನ ಸ್ಥಳೀಯ ನಿವಾಸಿಗಳ ಮತ್ತು ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಬೇಕಿದೆ. ಅದಕ್ಕಾಗಿ ಶೀಘ್ರದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಹಾಗೂ ಆ ಭಾಗದ ಶಾಸಕರು ಮತ್ತು ಸಂಸದರು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳೊಂದಿಗೂ ಸಭೆ ನಡೆಸಲು ನಿರ್ಧರಿಸಲಾಗಿದೆ.

ಈ ಚರ್ಚೆ ನಂತರ ಹುಲಿ ಸಂರಕ್ಷಿತಾರಣ್ಯವನ್ನಾಗಿಸಲು ಇರುವ ಸಾಧಕ-ಬಾಧಕಗಳ ಕುರಿತು ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆದು ಆ ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಅಲ್ಲದೆ, ಅವಶ್ಯವಿದ್ದರೆ ಸಚಿವ ಸಂಪುಟದಲ್ಲೂ ವಿಷಯ ಮಂಡಿಸಿ ಅನುಮೋದನೆ ಪಡೆಯುವುದು ಇಲಾಖೆ ಅಧಿಕಾರಿಗಳ ಯೋಜನೆಯಾಗಿದೆ.

ಶೀಘ್ರದಲ್ಲೇ ಸಭೆ

ಸುಪ್ರೀಂಕೋರ್ಟ್‌ ನಿಯೋಜಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸಿನ ಬಗ್ಗೆ ತಿಳಿದಿದೆ. ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯ ಗ್ರಾಮಸ್ಥರು, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುವುದು.

ಪಿ.ಸಿ.ರೇ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ