ಬೆಂಗಳೂರು : ಕೇಂದ್ರ ಸರ್ಕಾರ ದೇಶಾದ್ಯಂತ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ನಡೆಸಲು ಉದ್ದೇಶಿಸಿರುವುದರಿಂದ ರಾಜ್ಯದಲ್ಲಿ ಮತ್ತೊಂದು ಜಾತಿಗಣತಿ ನಡೆಸುವುದು ಅನಗತ್ಯ. ರಾಜ್ಯ ಸರ್ಕಾರ ತನ್ನ ನಿರ್ಧಾರ ಕೈಬಿಟ್ಟು ಸಾಂವಿಧಾನಿಕ ಮಾನ್ಯತೆ ಇರುವ ಕೇಂದ್ರದ ಸಮಗ್ರ ಮತ್ತು ಐತಿಹಾಸಿಕ ಗಣತಿಗೆ ಸಹಕಾರ ನೀಡಬೇಕೆಂದು ಜಾತಿ ಗಣತಿ ಕುರಿತು ನಡೆದ ದುಂಡು ಮೇಜಿನ ಸಭೆ ಒಮ್ಮತದ ನಿರ್ಣಯ ಕೈಗೊಂಡಿದೆ.
ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಜಾತಿಗಣತಿ ಹಿನ್ನೆಲೆ-ಮುನ್ನಲೆ’ ಕುರಿತ ದುಂಡುಮೇಜಿನ ಸಭೆಯಲ್ಲಿ ತಜ್ಞರು, ರಾಜಕಾರಣಿಗಳು, ವಿಚಾರವಂತರು ಒಮ್ಮತದಿಂದ ಈ ನಿರ್ಣಯ ತೆಗೆದುಕೊಂಡರು.
ಸಂಸದ ಪಿ.ಸಿ. ಮೋಹನ್, ಶಾಸಕರಾದ ಸುನೀಲ್ ಕುಮಾರ್, ರವಿಕುಮಾರ್, ಕೇಶವಪ್ರಸಾದ್, ವಿಶ್ರಾಂತ ಕುಲಪತಿಗಳಾದ ಡಾ.ಕೆ.ಆರ್.ವೇಣುಗೋಪಾಲ್, ಡಾ.ದಯಾನಂದ ಅಗಸರ, ವೇದಿಕೆ ಸಂಚಾಲಕರೂ ಆದ ಡಾ.ವಿಷ್ಣುಕಾಂತ ಚಟಪಲ್ಲಿ ಸೇರಿ ವಿವಿಧ ಕ್ಷೇತ್ರದ 44 ಸದಸ್ಯರು ತಮ್ಮ ಅಭಿಪ್ರಾಯ, ಸಲಹೆ ವ್ಯಕ್ತಪಡಿಸಿದರು. ಅಂತಿಮವಾಗಿ ಶಾಸಕ ಸುನೀಲ್ ಕುಮಾರ್ ಸಭೆಯ ನಿರ್ಣಯಗಳನ್ನು ತಿಳಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಹತ್ತು ವರ್ಷಗಳ ಹಳೆಯ ಸಮೀಕ್ಷೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದರಿಂದ ರಾಜ್ಯ ಸರ್ಕಾರ ಹೊಸ ಸಮೀಕ್ಷೆಯ ನಿರ್ಧಾರ ಮಾಡಿದೆ. ಆದರೆ, ಕೇಂದ್ರ ಸರ್ಕಾರವೂ ಐತಿಹಾಸಿಕ ಜನಗಣತಿ ಜತೆಗೆ ಜಾತಿ ಗಣತಿಯನ್ನೂ ಮಾಡುವುದಾಗಿ ಘೋಷಿಸಿದೆ. ಕೇಂದ್ರ ಸಮೀಕ್ಷೆ 32 ಮಾನದಂಡಗಳನ್ನು ಒಳಗೊಂಡು ಹೆಚ್ಚು ಸಮಗ್ರ ಹಾಗೂ ಸಾಂವಿಧಾನಿಕ ಮಾನ್ಯತೆಯಿಂದ ಕೂಡಿರುತ್ತದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಜಾತಿಗಣತಿ ಮಾಡುವುದು ಅಪ್ರಸ್ತುತ ಎಂದರು.
ಸುನೀಲ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಬಿಸಿ ಬಗ್ಗೆ ಕಾಳಜಿ ಇಲ್ಲ. ಬದ್ಧತೆ ಇದ್ದಿದ್ದರೇ 10 ವರ್ಷಗಳಿಂದ ಜಾತಿ ಗಣತಿ ಇಟ್ಟುಕೊಂಡು ಕಾಲಹರಣ ಮಾಡುತ್ತಿರಲಿಲ್ಲ. ಸರ್ಕಾರ ಬಂದು 14 ತಿಂಗಳ ಬಳಿಕ ಸಚಿವ ಸಂಪುಟದ ಮುಂದೆ ತಂದರು. ಕೊನೆಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು 165 ಕೋಟಿ ಖರ್ಚು ಮಾಡಿದ್ದ ಸಮೀಕ್ಷೆಯನ್ನು ಕಸದ ಬುಟ್ಟಿಗೆ ಎಸೆದು ಹೊಸ ಜಾತಿಗಣತಿ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದರು.
ವಿಶ್ರಾಂತ ಕುಲಪತಿ ಡಾ.ವಿಷ್ಣುಕಾಂತ ಚಟಪಲ್ಲಿ ಅವರು, ಕೇಂದ್ರ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮಾತ್ರವಲ್ಲ, ಸಾಂಸ್ಕೃತಿಕ ಸಂಗತಿಗಳೂ ಸಮೀಕ್ಷೆಯಲ್ಲಿ ದಾಖಲಿಸುತ್ತಿರುವುದು ಸ್ವಾಗತಾರ್ಹ. 13 ಸಾವಿರ ಕೋಟಿ ರು. ವೆಚ್ಚದಲ್ಲಿ ಸಮೀಕ್ಷೆ ನಡೆಸಲಿದ್ದು, ದೇಶದ ಎಲ್ಲ ರಾಜ್ಯಗಳಲ್ಲಿ ನಡೆಯುವ ಐತಿಹಾಸಿಕ ಬೃಹತ್ ಯೋಜನೆಯಾಗಿದೆ. ಆದರಿಂದ ರಾಜ್ಯ ಸರ್ಕಾರ ಅವಸರಕ್ಕೆ ಇನ್ನೊಂದು ಗಣತಿಗೆ ಕೈ ಹಾಕುವುದು ಬೇಡ ಎಂದರು.
ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರ ಈ ಬಾರಿ ಜಾತಿ ಸಮೀಕ್ಷೆಗೆ ಶಿಕ್ಷಕರನ್ನು ಬಳಸುವುದಿಲ್ಲ ಹೊರಗುತ್ತಿಗೆ ನೀಡುವುದಾಗಿ ಹೇಳಿದೆ. ಇದರಿಂದ ಇಂತಹ ಸಮೀಕ್ಷೆ ಎಷ್ಟು ಸಮರ್ಪಕ, ಸಮಂಜಸವೋ ತಿಳಿಯದು. ಕೇಂದ್ರದ ಜನಗಣತಿಗೆ ಸಹಕಾರ ನೀಡಿ ಒಕ್ಕೂಟ ವ್ಯವಸ್ಥೆ ಬಲಪಡಿಸಬೇಕು. ಕೇಂದ್ರ ಸರ್ಕಾರ ಜಾತಿಜನಗಣತಿ ನಡೆಸಿ ಅದರ ಆಧಾರದಲ್ಲಿ ಒಳ ಮೀಸಲಾತಿ ಅಳವಡಿಸಬೇಕು. ಜೊತೆಗೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿಯಲ್ಲೂ ಜಾತಿವಾರು ಮೀಸಲಾತಿ ನೀಡಬೆಕು. ಇಲ್ಲದಿದ್ದರೆ ಮಹಿಳಾ ಮೀಸಲಾತಿ ಹಾಲಿ ರಾಜಕಾರಣಿಗಳ ಕುಟುಂಬ, ಕೆಲವೇ ಸಮುದಾಯಗಳ ಮಹಿಳೆಯರಷ್ಟೇ ರಾಜಕಾರಣದಲ್ಲಿ ಅವಕಾಶವಾಗಲಿದೆ ಎಂದರು.