- ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005, ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾ.ಮಹಾವೀರ ಮ. ಕರೆಣ್ಣವರ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಗಾಂಜಾ, ಅಫೀಮು, ಬ್ರೌನ್ ಶುಗರ್, ಕೊಕೇನ್, ನಿಕೋಟಿನ್‌ನಂತಹ ಮಾದಕ ವಸ್ತುಗಳಿಗೆ ವಿದ್ಯಾರ್ಥಿ, ಯುವಜನರು, ಹದಿಹರೆಯದವರೇ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿದ್ದಾರೆ. ಇಂತಹವರು ಸಮಾಜಘಾತುಕ ವ್ಯಕ್ತಿಗಳಾಗಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು.ಇಲ್ಲಿನ ಬಾಷಾ ನಗರದ ನಗರ ಆರೋಗ್ಯ ಕೇಂದ್ರದ ಪ್ರಸೂತಿ ವಿಭಾಗದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಹಮ್ಮಿಕೊಂಡಿದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005 ಮತ್ತು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕವಾಗಿ ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಣೆಯಂತಹ ಪ್ರಕರಣ ಕಂಡುಬಂದಲ್ಲಿ ಆಲಸ್ಯ ಮಾಡದೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು. ಮಾದಕ ವ್ಯಸನಗಳಿಗೆ ದಾಸರಾದರೆ ದೈಹಿಕ ಮತ್ತು ಮಾನಸಿಕವಾಗಿ ಗಾಢ ದುಷ್ಪರಿಣಾಮ ಬೀರುತ್ತದೆ. ಪುರುಷತ್ವ ಮತ್ತು ಲೈಂಗಿಕ ಶಕ್ತಿ ಕುಂದಿಸುತ್ತದೆ. ಮಾದಕ ವ್ಯಸನಗಳಿಂದ ವಿವಿಧ ರೀತಿ ಕೃತ್ಯಗಳಲ್ಲಿ ಭಾಗಿಯಾಗಿ, ಶಿಕ್ಷೆಗೆ ಗುರಿಯಾಗುವುದಲ್ಲದೇ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ವ್ಯಸನಮುಕ್ತರಾಗಿ ಸಮಾಜದಲ್ಲಿ ಮೌಲ್ಯಯುತ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉನ್ನತ ಮಟ್ಟದ ವ್ಯಕ್ತಿಗಳಾಗಿ ಬಾಳಬೇಕು. ಈ ನಿಟ್ಟಿನಲ್ಲಿ ತಮ್ಮಗಳ ಸಹಕಾರ ಅತ್ಯಗತ್ಯ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005ರಲ್ಲಿ ಜಾರಿ ಮಾಡಿದ್ದು, ಕೇವಲ ದೈಹಿಕ ಹಿಂಸೆಗೆ ಸೀಮಿತಗೊಳಿಸದೇ, ಲೈಂಗಿಕ, ಮೌಖಿಕ, ಭಾವನಾತ್ಮಕ, ಆರ್ಥಿಕ, ಮತ್ತು ಮಾನಸಿಕ ಹಿಂಸೆ ಸಹ ಒಳಗೊಂಡಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡುವುದು, ಮನೆಯಿಂದ ಹೊರ ಹಾಕುವುದು ಇವೆಲ್ಲವೂ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಕಾಯ್ದೆ ಮೂಲಕ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಭದ್ರತೆ ಒದಗಿಸಲಾಗುತ್ತದೆ ಎಂದು ಹೇಳಿದರು.
ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದಂತಹ ದೈಹಿಕ ಮತ್ತು ಮಾನಸಿಕ ಹಿಂಸೆ, ಕಿರುಕುಳ ನೀಡಿದಲ್ಲಿ ಹತ್ತಿರದ ಸಖಿ ಒನ್ ಸ್ಟಾಪ್ ಸೆಂಟರ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಪರ್ಕಿಸಿ, ಸಲಹೆ- ಸೂಚನೆ ಪಡೆಯಬಹುದು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲು 40 ವಕೀಲರಿದ್ದಾರೆ. ಈ ಅವಕಾಶವನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು. ಎಂದರು.ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳ ಕುರಿತು ಮಾಹಿತಿ ನೀಡಲು 15100 ಸಹಾಯವಾಣಿ ಸಂಖ್ಯೆ ಸ್ಥಾಪಿಸಲಾಗಿದೆ. ಕರೆ ಮಾಡಿ ಸೂಕ್ತ ಕಾನೂನು ಸಲಹೆ ಪಡೆಯಬಹುದು. ಸಮಾಜದಲ್ಲಿ ಹಿಂದುಳಿದ ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ತರಲು ಕಂಕಣಬದ್ಧರಾಗಿ ಕಾರ್ಯನಿರ್ವಹಿಸಬೇಕು. ಈ ಎರಡೂ ಕಾಯ್ದೆಗಳು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನ್ಯಾಯಾಧೀಶರು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ ಪಟ್ಟಿಗೆ, ಸಖಿ ಕೇಂದ್ರದ ಕಾನೂನು ಸಲಹೆಗಾರರಾದ ತಂಜಿಮ್ ಕೌಸರಿ, ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಎನ್.ರೇಖಾ, ನೆರಳು ಬೀಡಿ ಕಾರ್ಮಿಕ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ಸದಸ್ಯೆ ಸಬ್ರಿನ್ ತಾಜ್, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು. ನೆರಳು ಬೀಡಿ ಕಾರ್ಮಿಕ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಸಂವಿಧಾನ ಪೀಠಿಕೆ ವಾಚಿಸಿದರು.- - -
-22ಕೆಡಿವಿಜಿ7.ಜೆಪಿಜಿ:ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ ಪಟ್ಟಿಗೆ, ಸಖಿ ಕೇಂದ್ರದ ಕಾನೂನು ಸಲಹೆಗಾರರಾದ ತಂಜಿಮ್ ಕೌಸರಿ ಇತರರಿದ್ದರು.