ಮಂಜುನಾಥ ಕೆ.ಎಂ
ಆಧುನಿಕತೆ ವಿಧಾನಗಳನ್ನು ಬಳಸಿಕೊಂಡು ಪುಸ್ತಕ ಪ್ರಚಾರ ಮಾಡಬೇಕು. ಪ್ರಚಾರದಿಂದ ದೂರ ಉಳಿದರೆ ಒಳ್ಳೆಯ ಪುಸ್ತಕಗಳು ಮೂಲೆಗುಂಪಾಗುತ್ತವೆ ಎಂದು ಖ್ಯಾತ ಲೇಖಕ ವಸುಧೇಂದ್ರ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆಯಲ್ಲಿ ಶುಕ್ರವಾರ "ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು "ಕುರಿತ ಗೋಷ್ಠಿಯಲ್ಲಿ ಭವಿಷ್ಯದ ಕನ್ನಡ ಪುಸ್ತಕೋದ್ಯಮ ಕುರಿತು ಮಾತನಾಡಿದರು.ಕನ್ನಡದಲ್ಲಿ ವರ್ಷಕ್ಕೆ ಸುಮಾರು ಹತ್ತು ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ. ಹೀಗಿರುವಾಗ ಒಳ್ಳೆಯ ಪುಸ್ತಕ ಓದುಗನಿಗೆ ಮುಟ್ಟಿಸಲು ಹೇಗೆ ಸಾಧ್ಯ? ಅನಿವಾರ್ಯವಾಗಿ ಪುಸ್ತಕ ಪ್ರಚಾರದ ವಿನೂತನ ಮಾರ್ಗ ಕಂಡುಕೊಳ್ಳಬೇಕಾಗಿದೆ. ಪುಸ್ತಕ ಕುರಿತು ವಿನೂತನವಾಗಿ ಪ್ರಚಾರ ಮಾಡಿ ಓದುಗರನ್ನು ಮುಟ್ಟಬೇಕಾಗಿದೆ. ಇದು ಪ್ರಕಾಶಕರಿಗೆ ದೊಡ್ಡ ಸವಾಲಾಗಿದೆ. ಅನೇಕ ಸವಾಲುಗಳ ನಡುವೆಯೂ ಪ್ರಕಾಶಕರು ಪುಸ್ತಕೋದ್ಯಮ ಉಳಿವಿಗೆ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ ಎಂದರು.
ಇದೇ ವೇಳೆ ಪುಸ್ತಕ ಖರೀದಿಗೆ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಸ್ತಾಪಿಸಿದ ಲೇಖಕ ವಸುಧೇಂದ್ರ ಅವರು, ಪುಸ್ತಕಗಳು ರಾಜಕಾರಣಿಗಳಿಗೆ ಮತ ಬ್ಯಾಂಕ್ ಅಲ್ಲ. ಹೀಗಾಗಿಯೇ ಈ ಉದ್ಯಮದ ಬಗೆಗೆ ರಾಜಕೀಯ ನಾಯಕರಿಗೆ ಆಸಕ್ತಿಗಳಿಲ್ಲ ಎಂದರು.
ಕನ್ನಡ ಪುಸ್ತಕಗಳು ಹಾಗೂ ಓದುಗ ಬಳಗ ಕುರಿತು ಮಾತನಾಡಿದ ಲೇಖಕಿ ಅಕ್ಷತಾ ಹುಂಚದಕಟ್ಟೆ, ರಾಜ್ಯ ಸರ್ಕಾರ ಓದುವ ಸಂಸ್ಕೃತಿಯನ್ನು ಮೂಲ ಅವಶ್ಯಕತೆ ಎಂದು ಪರಿಗಣಿಸಬೇಕು. ಪುಸ್ತಕ ಸಂಸ್ಕೃತಿ ಬೆಳೆಯಲು ಸರ್ಕಾರ ಗಮನ ಹರಿಸಬೇಕು. ಈ ಹಿಂದಿನಿಂದಲೂ ಪುಸ್ತಕ ಓದುಗರ ಸಂಖ್ಯೆ ಹೆಚ್ಚಿಸುವ ಕಾಳಜಿಗಳ ಕಾರ್ಯಗಳು ನಡೆಯುತ್ತಲೇ ಬಂದಿವೆ. ಅರಿವಿನ ಪ್ರಜ್ಞೆ ವಿಸ್ತರಿಸುವ ಪುಸ್ತಕಗಳು ಕನ್ನಡ ಭಾಷೆಯನ್ನೂ ಉಳಿಸುವ ಕೆಲಸ ಮಾಡುತ್ತಿವೆ. ಅರಿವಿನ ಪ್ರಜ್ಞೆ ವಿಸ್ತರಿಸುವ ಕೆಲಸದಲ್ಲಿ ಲೇಖಕರು, ಶಿಕ್ಷಣ ಸಂಸ್ಥೆಗಳು, ಪ್ರಕಾಶಕರು ಹಾಗೂ ಸರ್ಕಾರಗಳ ಪಾತ್ರವೂ ದೊಡ್ಡದಿದೆ ಎಂದು ತಿಳಿಸಿದರು.
ಅದೆಷ್ಟೇ ತಂತ್ರಜ್ಞಾನ ಬಂದರೂ ಮುದ್ರಣ ಉದ್ಯಮ ಬೇರೆ ಬೇರೆ ಆಯಾಮಗಳಲ್ಲಿ ಬೆಳವಣಿಗೆ ಕಂಡುಕೊಳ್ಳುತ್ತಿದೆ. ಆದರೆ, ಕಾಗದದ ಬೆಲೆ ತೀವ್ರ ಏರಿಕೆ ಕಂಡುಕೊಂಡಿದ್ದರಿಂದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಪ್ರಕಾಶಕರು ತಮ್ಮದೇ ಆದ ನೆಟ್‌ವರ್ಕ್ ಮೂಲಕ ಪುಸ್ತಕ ಮಾರಿಕೊಳ್ಳುತ್ತಾರೆ. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಮುದ್ರಣೋದ್ಯಮದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಸಬ್ಸಿಡಿ ನೀಡಬೇಕು ಎಂದು ಅಶೋಕ್ ಕುಮಾರ್ ಅವರು ಮನವಿ ಮಾಡಿದರು.
ಸಪ್ನಬುಕ್ ಹೌಸ್‌ನ ದೊಡ್ಡೇಗೌಡ ಅವರು ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಗದುಗಿನ ವಿದ್ಯಾನಿಧಿ ಪ್ರಕಾಶನದ ಜಯದೇವ ಮೆಣಸಗಿ ಅವರು, ಆಗಾಗ್ಗೆ ಬದಲಾಗುತ್ತಿರುವ ಸರ್ಕಾರಿ ಶಾಲೆಯಗಳ ಪಠ್ಯಕ್ರಮಗಳು, ರಾಜ್ಯ ಶಿಕ್ಷಣ ನೀತಿಯ ಗೊಂದಲ, ವಿದ್ಯಾರ್ಥಿಗಳು ಪುಸ್ತಕಗಳನ್ನು ಖರೀದಿಸದಿರುವುದು, ಕೊಳ್ಳುವವರ ಸಂಖ್ಯೆಯಲ್ಲಾಗಿರುವ ಇಳಿಮುಖ, ಓದುಗರ ಹೊಸ ತಂತ್ರಜ್ಞಾನದ ಒಲವು ಪುಸ್ತಕೋದ್ಯಮ ಪ್ರಗತಿಗೆ ಕುತ್ತು ತಂದಿದೆ ಎಂದು ಹೇಳಿದರು. ವಿವೇಕಾನಂದ ಪಾಟೀಲ್, ಯ.ಚಿ.ದೊಡ್ಡಯ್ಯ ಹಾಗೂ ಎಲ್.ಕೃಷ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು.