ಗಬ್ಬುನಾರುತ್ತಿರುವ ಕೊಂಡ್ಲಹಳ್ಳಿ ಕೋನಸಾಗರ ರಸ್ತೆ

KannadaprabhaNewsNetwork | Published : Apr 5, 2024 1:04 AM

ಸಾರಾಂಶ

ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದ ಕೋನಸಾಗರ ರಸ್ತೆ ಬದಿಯು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಾ ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದರೂ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿದರು.

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು

ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದ ಕೋನಸಾಗರ ರಸ್ತೆ ಬದಿಯು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಾ ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದರೂ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿದರು.ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಕೊಂಡ್ಲಹಳ್ಳಿ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ನಿತ್ಯ ಸಾವಿರಾರು ಜನರು ದೂರ ದೂರಿನಿಂದ ಗ್ರಾಮಕ್ಕೆ ಆಗಮಿಸುತ್ತಾರೆ. ಹೀಗಿದ್ದರೂ ಕೋನಸಾಗರ ಮಾರ್ಗದಲ್ಲಿರುವ ಬಸ್ ನಿಲ್ದಾಣದ ರಸ್ತೆ ಪಕ್ಕದಲ್ಲಿ ಪ್ಲಾಸ್ಟಿಕ್, ಪೇಪರ್, ಖಾಲಿ ಬಾಟಲಿಗಳು ಸೇರಿದಂತೆ ರಾಶಿ ತ್ಯಾಜ್ಯ ತುಂಬಿದೆ. ತ್ಯಾಜ್ಯ ತುಂಬಿರುವ ಸ್ಥಳದಲ್ಲಿ ವಿವಿಧ ಬಗೆಯ ನೂರಾರು ಅಂಗಡಿ ಮಳಿಗೆಗಳು ಅಂಟಿಕೊಂಡಿದ್ದರೂ ಸ್ವಚ್ಛತೆ ಇಲ್ಲದಾಗಿದೆ. ರಸ್ತೆಯ ಬದಿಯಲ್ಲಿ ತ್ಯಾಜ್ಯ ವಸ್ತುಗಳು ತುಂಬಿದ್ದು ಗ್ರಾಮಕ್ಕೆ ಆಗಮಿಸುವ ಪ್ರಯಾಣಿಕರನ್ನು ಗಬ್ಬು ವಾಸನೆ ಸ್ವಾಗತಿಸುತ್ತಿದ್ದರೂ ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.

ಸುತ್ತಲಿನ ಅಂಗಡಿ ಮಳಿಗೆಗಳ ತ್ಯಾಜ್ಯ ಸಂಗ್ರಹದಿಂದಾಗಿ ಸ್ಥಳವು ತಿಪ್ಪೇ ಗುಂಡಿಯಂತಾಗಿದೆ. ನಿತ್ಯ ನೂರಾರು ವಾಹನಗಳು ಸಾಗುತ್ತಿರುವ ಕೋನಸಾಗರ ಮಾರ್ಗದ ರಸ್ತೆ ಬದಿಯಲ್ಲಿ ತುಂಬಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ಪಂಚಾಯಿತಿ ಮುಂದಾಗುತ್ತಿಲ್ಲ. ಪರಿಣಾಮವಾಗಿ ಸ್ಥಳದಲ್ಲಿ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಎನ್ನುವ ದೂರುಗಳು ವ್ಯಾಪಕವಾಗಿವೆ. ಬಸ್ ನಿಲ್ದಾಣದಲ್ಲಿ ಸೂಕ್ತ ಶೌಚಾಲಯವಿಲ್ಲದೆ ಗ್ರಾಮಕ್ಕೆ ಆಗಮಿಸುವ ಪ್ರಯಾಣಿಕರಿಗೆ ತ್ಯಾಜ್ಯ ತುಂಬಿರುವ ಸ್ಥಳವು ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಾಟಾಗಿದ್ದು ಇದರಿಂದಾಗಿ ದುರ್ನಾತ ಬೀರುತ್ತಿದ್ದು ದಾರಿ ಹೋಕರು ಮೂಗು ಮುಚ್ಚಿಕೊಂಡು ಸಾಗುತ್ತಿದ್ದು ಸ್ವಚ್ಛತೆಗೂ ಪಂಚಾಯಿತಿಗೂ ಸಂಬಂದವೇ ಇಲ್ಲ ಎನ್ನುವಂತಾಗಿದೆ. ಸ್ವಚ್ಚತೆ ಮಾಡುವಂತೆ ಅನೇಕ ಬಾರಿ ಪಂಚಾಯಿತಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯವಾಗಿ ಕೇಳಿ ಬರುತ್ತಿದೆ.

ಕಳೆದೆರಡು ವಾರಗಳಿಂದ ಬಿಸಲಿನ ತಾಪಮಾನ ಏರಿಕೆಯಾಗುತ್ತಿದೆ. ಸಾಂಕ್ರಾಮಿಕ ಕಾಯಿಲೆಗಳು ಹರಡುವ ಮುನ್ನಾ ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಸ್ಥಳದಲ್ಲಿ ನೈರ್ಮಲ್ಯವನ್ನು ಕಾಪಾಡಬೇಕೆನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

Share this article