ಧಾರವಾಡ:
ಆಟೋ ರಿಕ್ಷಾ ಚಾಲಕರಿಗೆ ಶಕ್ತಿ ಯೋಜನೆಯಿಂದ ಆಗುತ್ತಿರುವ ತೊಂದರೆ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸೋಮವಾರ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.ಶಕ್ತಿ ಯೋಜನೆಯಿಂದ ದುಡಿಮೆ ತುಂಬ ಕಡಿಮೆಯಾಗಿದೆ. ಈ ಯೋಜನೆ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರಿಕ್ಷಾ ಚಾಲಕರ ಜೀವನ ನಿರ್ವಹಣೆಯು ಕಷ್ಟದಾಯಕವಾಗಿದೆ. ಜತೆಗೆ ಕಳೆದ 3 ತಿಂಗಳಿನಿಂದ ಸತತವಾಗಿ ಮಳೆಯಿಂದ ರಸ್ತೆಗಳು ಗುಂಡಿಗಳಾಂತಾಗಿವೆ. ಪ್ರಾಣ ಕೈಯಲ್ಲಿ ಹಿಡಿದು ಆಟೋ ನಡೆಸುವಂತಹ ಸ್ಥಿತಿ ಉಂಟಾಗಿದೆ. ಇದರೊಂದಿಗೆ ರಸ್ತೆ ಮಧ್ಯೆದಲ್ಲಿ ಬಿಡಾಡಿ ದನಗಳು ಮಲಗುತ್ತಿದ್ದು ಯಾವುದೇ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಟಿಒ ಕಚೇರಿಯಲ್ಲಿ ಆಟೋ ರಿಕ್ಷಾ ಪರಮೀಟ್ ಅವಧಿ ಮುಗಿದ ನಂತರ ಒಂದು ತಿಂಗಳು ತಡವಾದರೆ ಅದಕ್ಕೆ ₹ 50 ದಂಡ ವಿಧಿಸುತ್ತಿದ್ದು, ಅದನ್ನು ಕೈ ಬಿಡಬೇಕು, ಸತ್ಯ ಮೌಲ್ಯಮಾಪನ ಇಲಾಖೆಯಲ್ಲಿ ಬೇರ್ ಮೀಟರ್‌ಗೆ ತಡವಾಗಿ ಶೀಲ್ ಮಾಡಿದರೆ ₹ 750 ದಂಡ ವಿಧಿಸುತ್ತಿದ್ದು, ಅದನ್ನು ಕೈ ಬಿಡಬೇಕು, ಧಾರವಾಡದಲ್ಲಿ ಅಳವಡಿಸಿರುವ ಅವೈಜ್ಞಾನಿಕ ರಸ್ತೆ ತಡೆ ತೆರವುಗೊಳಿಸಬೇಕೆಂದು ಆಗ್ರಹಿಸಿದರು.ಆಟೋ ಚಾಲಕರಿಗೆ ಪ್ರತ್ಯೇಕ ಕಾಲನಿ, ಆಟೋ ಚಾಲಕರಿಗೆ ಚಾಲನಾ ಪರವಾನಗಿ ಪ್ರಮಾಣ ಪತ್ರ ಪಡೆಯುವಾಗ ಆಟೋ ರಿಕ್ಷಾ ಬದಲಾಗಿ ಕಾರು ನಡೆಸಲು ಆರ್‌ಟಿಒ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ, ಆದರೆ, ಆಟೋ ರಿಕ್ಷಾ ಚಾಲಕರಿಗೆ ಕಾರ ಚಲಾಯಿಸಲು ಬರುವುದಿಲ್ಲ ಎಂಬುದು ಸೇರಿದಂತೆ ಹಲವು ವಿಷಯಗಳು ಕುರಿತು ಆಟೋ ಚಾಲಕರು ಗಮನ ಸೆಳೆದರು.
ಸಂಘದ ಅಧ್ಯಕ್ಷ ಜೀವನ ಹುತ್ಕರಿ ನೇತೃತ್ವ ವಹಿಸಿದ್ದರು. ವಿ.ಬಿ. ಸಂಜೀವಪ್ಪನವರ, ಲಕ್ಷ್ಮಣ ಜಮನಾಳ, ಗೌಸ ಕಿತ್ತೂರ, ಸುರೇಶ ರಾಠೋಡ, ಬಸವರಾಜ ಕೊಳಣ್ಣವರ, ಪ್ರಾನ್ಸಿಸ್ ಸಕ್ತಿ, ಪ್ರಕಾಶ ಗಡಾದ, ಅಮ್ಜದ ನವಲೂರ, ರಾಜೇಶ ಕಮ್ಮಾರ, ಸಾಯಿರಾಮ ಕಾಳೆ, ರಾಘವೇಂದ್ರ, ಬಡಿಗೇರ ಇದ್ದರು.