ಸಂತ್ರಸ್ತರ ಹೋರಾಟಕ್ಕೆ ಪತ್ರಕರ್ತರ ಸಂಘದ ಬಲ

KannadaprabhaNewsNetwork | Published : Dec 8, 2024 1:19 AM

ಸಾರಾಂಶ

ಏಷ್ಯಾಖಂಡದಲ್ಲಿಯೇ ಬೃಹತ್ ನೀರಾವರಿ ಯೋಜನೆ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭಗೊಂಡು ದೀರ್ಘಕಾಲವಾದರೂ ಇದುವರೆಗೂ ಪೂರ್ಣಗೊಳ್ಳದಿರುವುದು ದುರಂತ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ, ಸರದಿ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕವು ಬೇಷರತ್ ಬೆಂಬಲ ನೀಡಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿತು.

ಜಿಲ್ಲಾಡಳಿತ ಮುಂಭಾಗದಲ್ಲಿ ಆರಂಭಗೊಂಡಿರುವ ಹೋರಾಟದ ಐದನೇ ದಿನವಾದ ಶನಿವಾರ ನಡೆದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಬಂಜನ, ಏಷ್ಯಾಖಂಡದಲ್ಲಿಯೇ ಬೃಹತ್ ನೀರಾವರಿ ಯೋಜನೆ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭಗೊಂಡು ದೀರ್ಘಕಾಲವಾದರೂ ಇದುವರೆಗೂ ಪೂರ್ಣಗೊಳ್ಳದಿರುವುದು ದುರಂತವೇ ಸರಿ. ಪಕ್ಷಾತೀತ, ಜ್ಯಾತ್ಯಾತೀತವಾಗಿ ಜಿಲ್ಲೆಯ ಯಾವುದೇ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಬೆಂಬಲಿಸುತ್ತದೆ. ನ್ಯಾಯಯುತವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟಕ್ಕೆ ಸ್ಪಂದಿಸಿ ಸರ್ಕಾರವು ಎಚ್ಚೆತ್ತುಕೊಂಡು ಅಗತ್ಯ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಈಶ್ವರ ಶೆಟ್ಟರ ಮಾತನಾಡಿ, ಇಡೀ ದೇಶದಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಸರ್ಕಾರಗಳನ್ನು ಹೊರತುಪಡಿಸಿ ಬಹುತೇಕ ಸರ್ಕಾರಗಳು ನೆಪ ಮಾತ್ರಕ್ಕೆ ಯೋಜನೆಗಳನ್ನು ಮಾಡಿದರೆ, ನೆರೆಯ ಆಂಧ್ರ ಪ್ರದೇಶ ಸರ್ಕಾರವು ಆಣೆಕಟ್ಟಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ನ್ಯಾಯಬದ್ಧವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗುತ್ತಿಲ್ಲ. ಸುಪ್ರೀಂ ಕೋರ್ಟ್‌ ಮತ್ತು ಕೃಷ್ಣಾ ನ್ಯಾಯಾಧೀಕರಣ ತೀರ್ಪು ನಮ್ಮ ಪರವಾಗಿದ್ದರೂ ಕೂಡಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಇಚ್ಛಾಶಕ್ತಿ ಕೊರತೆಯೋ ಅಥವಾ ನಮ್ಮನ್ನಾಳುವ ಸರ್ಕಾರದ ನಿರ್ಲಕ್ಷ್ಯತನದ ನೋವು ನಮ್ಮನ್ನು ಕಾಡುತ್ತಿದೆ ಎಂದರು.

ಮತ್ತೊಮ್ಮೆ ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಹೋರಾಟ ಆರಂಭಗೊಂಡಿದೆ. ಈ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದ್ದು, ಈ ಹೋರಾಟಕ್ಕೆ ಪತ್ರಕರ್ತರ ಸಂಘವು ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು.

ಹಿರಿಯ ಪತ್ರಕರ್ತರಾದ ಚಂದ್ರಶೇಖರ ಜಿಗಜಿನ್ನಿ, ಉಮೇಶ ಪೂಜಾರಿ, ಸುಭಾಷ ಹೊದ್ಲೂರ, ರವಿರಾಜ ಗಲಗಲಿ, ವಿಠಲ ಬಲಕುಂದಿ, ಪ್ರಕಾಶ ಜಿಗಜಿನ್ನಿ, ರವಿ ಹಳ್ಳೂರ, ರವಿ ಮೂಕಿ, ಸುಧೀರ ಕಲಕೇರಿ, ಅಭಯ ಮನಗೊಳಿ, ಗುರುಚಿದಾನಂದ ಹಿರೇಮಠ, ವಿರೇಶ ಹಿರೇಮಠ, ವಿವೇಕಾನಂದ ಗರಸಂಗಿ, ಪ್ರಕಾಶ ಗುಳೇದಗುಡ್ಡ, ಜಗದೀಶ ಗಾಣಿಗೇರ, ಗುರು ಹಿರೇಮಠ, ಸಿದ್ದು ದುತ್ತರಗಾವಿ, ನಿಜಗುಣಿ ಮಠಪತಿ, ತಿಪ್ಪಣ್ಣ ಚಲವಾದಿ, ವೀರೇಶ ನಾಲತವಾಡ, ಮಂಜು ತಳವಾರ, ಮಲ್ಲಿಕಾರ್ಜುನ ಹೊಸಮನಿ, ಸಂತೋಷ ದೇಶಪಾಂಡೆ, ಚನಬಸು ಚಲವಾದಿ, ಮುರಗೇಶ ಹಳ್ಳಿ, ಕಿರಣಕುಮಾರ, ನೀಲನಾಯಕ, ಅಲ್ತಾಫ್ ಧಾರವಾಡ, ಶಬ್ಬೀರ ಬಿಜಾಪುರ, ಸಮೀರ್ ರಾಫು ಗರ, ಸುಭಾಷ ರಾಠೋಡ ಹಾಗೂಪದಾಧಿಕಾರಿಗಳು, ಪತ್ರಿಕಾ ಕ್ಯಾಮೆರಾಮನ್‌ಗಳು ಹೋರಾಟದಲ್ಲಿ ಭಾಗವಹಿಸಿದ್ದರು.

Share this article