ಹಾನಗಲ್ಲ: ವಾಣಿಜ್ಯ, ವ್ಯಾಪಾರೋದ್ಯಮ ಸೇರಿದಂತೆ ಎಲ್ಲ ಕಚೇರಿಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕೆಂಬ ಸರಕಾರದ ನಿಯಮವನ್ನು ಪಾಲಿಸದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು.
ಶುಕ್ರವಾರ ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಕನ್ನಡ ರಾಜ್ಯೋತ್ಸವನ್ನು ಸರಳ ಹಾಗೂ ಅರ್ಥಪೂರ್ಣ ಆಚರಣೆ ಮಾಡಲು ಎಲ್ಲರೂ ಸಹಕರಿಸಬೇಕು. ಎಂದಿನಂತೆ ಧ್ವಜಾರೋಹಣ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡಾಭಿಮಾನದೊಂದಿಗೆ, ಸಾಹಿತಿ ಕಲಾವಿದರು, ಸಾರ್ವಜನಿಕರು, ಅಧಿಕಾರಿಗಳು ಶಾಲಾ ಮಕ್ಕಳನ್ನೊಳಗೊಂಡು ಆಚರಿಸಲಾಗುವುದು. ದೀಪಾವಳಿ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಇದೆಯಾದರೂ ರಾಜ್ಯೋತ್ಸವ ಆಚರಣೆ ಕಡ್ಡಾಯ. ಎಲ್ಲ ಶಾಲೆ ಕಾಲೇಜು ಸರಕಾರಿ ಕಚೇರಿಗಳಲ್ಲಿ ಆಚರಣೆ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕಿನಲ್ಲಿ ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧೆಡೆ ಕನ್ನಡ ನಾಮಫಲಕವಿಲ್ಲದ ಅಂಗಡಿಗಳು ಕಚೇರಿಗಳಿಗೆ ಸೂಚನೆ ನೀಡಿ ಕನ್ನಡದಲ್ಲಿ ನಾಮಫಲಕ ಹಾಕುವಂತಾಗಬೇಕು ಎಂಬ ಸಲಹೆಗೆ ಉತ್ತರಿಸಿದ ಅವರು, ಈಗಾಗಲೇ ಅಂತಹ ಸೂಚನೆ ನೀಡಲಾಗಿದೆ. ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ಅವರು ಕೂಡಲೇ ಹಾನಗಲ್ಲ ಪಟ್ಟಣದಲ್ಲಿ ಈ ಬಗ್ಗೆ ಪರಿಶೀಲಿಸಿ ಸೂಚನೆ ನೀಡಬೇಕು. ನಿಯಮ ಪಾಲಿಸದಿದ್ದರೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು. ಅಲ್ಲದೆ ರಾಜ್ಯೋತ್ಸವದ ಅಂಗವಾಗಿ ಸಾಹಿತಿ ಕಲಾವಿದರಿಗೆ ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮ, ಶಾಲಾ ಕಾಲೇಜುಗಳಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ನವೆಂಬರ್ ತಿಂಗಳ ಪೂರ್ತಿ ನಡೆಸಸಲು ಅವಕಾಶವಿದೆ. ಅದಕ್ಕೆ ಎಲ್ಲರ ಸಹಕಾರವಿರಲಿ ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಾಜಿ ಅಧ್ಯಕ್ಷ ಮಾರುತಿ ಶಿಡ್ಲಾಪುರ, ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ನಗರ ಅಧ್ಯಕ್ಷ ವಿಶ್ವನಾಥ ಬೋಂದಾಡೆ, ಶಂಕರ ಪೂಜಾರ, ಎಚ್.ಟಿ. ಕೋಣನಕೊಪ್ಪ, ವಿವಿಧ ಇಲಾಖೆಯ ಅಧಿಕಾರಿಗಳಾದ ಗಾಂಗ ಹಿರೇಮಠ, ಚಂದ್ರಶೇಖರ ನೆಗಳೂರು, ವಾಯ್.ಕೆ. ಜಗದೀಶ, ಮಂಜುನಾಥ ಬಣಕಾರ, ಬಿ.ಎನ್.ಸಂಗೂರ, ಅರವಿಂದ ಸುಗಂಧಿ, ಶ್ರೀನಿವಾಸ ದೀಕ್ಷಿತ್ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.