ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಯಲು ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ: ನಹೀದಾ ಜಮ್‌ಜಮ್

KannadaprabhaNewsNetwork | Published : Mar 19, 2024 12:46 AM

ಸಾರಾಂಶ

186 ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,25,470 ಪುರುಷರು, 1,26,665 ಮಹಿಳೆಯರು, 23 ಇತರೆ ಸೇರಿದಂತೆ ಒಟ್ಟು 2,52,158 ಮತದಾರರಿದ್ದಾರೆ. ಪಟ್ಟಣದಲ್ಲಿ 30 ಬೂತ್, ಗ್ರಾಮೀಣದಲ್ಲಿ 242 ಬೂತ್ ಸೇರಿದಂತೆ ಒಟ್ಟು 272 ಬೂತ್‌ಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಜೂ.26 ಬೂತ್ ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಚುನಾವಣಾ ಅಕ್ರಮ ಚಟುವಟಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ರಾಷ್ಟ್ರೀಯ 209 ವಿಶೇಷ ಭೂಸ್ವಾಧೀನಾಧಿಕಾರಿ ನಹೀದಾ ಜಮ್‌ಜಮ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರೀಲ್ 26ರಂದು ನಡೆಯಲಿರುವ ಚುನಾವಣೆಗೆ ಮಾರ್ಚ್ 16ರಿಂದ ನೀತಿಸಂಹಿತೆ ಜಾರಿಯಾಗಿದೆ. ಮಾರ್ಚ್ 28ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಏಪ್ರಿಲ್ 4 ರಂದು ನಾಮಪತ್ರ ಕೊನೆ ದಿನ. ಜೂ.೪ ರಂದು ಮತ ಎಣಿಕೆ ನಡೆಯಲಿದೆ. ಜೂನ್ 6 ರಂದು ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗಲಿದೆ ಎಂದರು.

186 ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,25,470 ಪುರುಷರು, 1,26,665 ಮಹಿಳೆಯರು, 23 ಇತರೆ ಸೇರಿದಂತೆ ಒಟ್ಟು 2,52,158 ಮತದಾರರಿದ್ದಾರೆ. ಪಟ್ಟಣದಲ್ಲಿ 30 ಬೂತ್, ಗ್ರಾಮೀಣದಲ್ಲಿ 242 ಬೂತ್ ಸೇರಿದಂತೆ ಒಟ್ಟು 272 ಬೂತ್‌ಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಜೂ.26 ಬೂತ್ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.

ತಾಲೂಕಿನಲ್ಲಿ ಸೂಕ್ಷ್ಮ ಮತಗಟ್ಟೆಗಳು 3, ಅತಿ ಸೂಕ್ಷ್ಮ ಮತಗಟ್ಟೆ 24, ಸಂಪರ್ಕದಿಂದ ದೂರ ಉಳಿದ ಮತಗಟ್ಟೆ 2 ಎಂದು ಗುರುತಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮ ಚಟುವಟಿಕೆ ತಡೆಯಲು 18 ಅಧಿಕಾರಿಗಳ ತಂಡ ರಚನೆ ಮಾಡಿ ತಾಲೂಕಿನಾದ್ಯಂತ 5 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ತಾಲೂಕು ಕಚೇರಿಯಲ್ಲಿ ಚುನಾವಣಾ ಕಂಟ್ರೋಲ್‌ರೂಂ ಸ್ಥಾಪಿಸಿದ್ದು ಸಾರ್ವಜನಿಕರು ದೂರವಾಣಿ ಸಂಖ್ಯೆ 08231-242277 ಮೂಲಕ ದೂರ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಹೆಚ್ಚಿನ ಪರಿಣಾಮಕಾರಿಯಾಗಿ ಮಾದರಿ ನೀತಿ ಸಂಹಿತೆ ಜಾರಿ ಮಾಡಲು ಭಾರತ ಚುನಾವಣಾ ಆಯೋಗದ ತಂತ್ರಾಂಶವಾದ ಸಿ-ವಿಐಜಿಐಎಲ್ ಮೂಲಕ ದೂರುಗಳನ್ನು ಸಹ ಸಾರ್ವಜನಿಕರು ಸಲ್ಲಿಸಬಹುದು. ತಾಲೂಕಿನ ಬೆಂಡರವಾಡಿ, ಕುಂತೂರು, ದೇವಿರಹಳ್ಳಿ, ಸತ್ತೇಗಾಲ, ಚಿಕ್ಕಬಾಗಿಲು ಗ್ರಾಮಗಳಲ್ಲಿ ಚೆಕ್ ಪೊಸ್ಟ್ ನಿರ್ಮಿಸಲಾಗಿದೆ. ತನಿಖೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.

ಪಟ್ಟಣದ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಬ್ಬಂದಿಗೆ ತರಬೇತಿ ನೀಡುವುದರ ಜೊತೆಗೆ ಮಸ್ಟಿರಿಂಗ್ ಮತ್ತು ಡಿ.ಮಸ್ಟಿರಿಂಗ್ ಕೇಂದ್ರವನ್ನಾಗಿ ಸ್ಥಾಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು.

50 ಸಾವಿರ ಮೇಲ್ಪಟ್ಟು ಹಣ ಸಾಗಿಸುವಂತಿಲ್ಲ. ಹಣ ಸಾಗಿಸುವಂತಿದ್ದರೇ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸಬೇಕು. ಚುನಾವಣೆಯಲ್ಲಿ ಹೆಚ್ಚು ಮತದಾನವಾಗಲು ಚುನಾವಣಾ ಆಯೋಗ ಹಾಗೂ ತಾಲೂಕು ಆಡಳಿತದ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.

ಈ ವೇಳೆ ತಹಸೀಲ್ದಾರ್ ಕೆ.ಎನ್ ಲೊಕೇಶ್, ಇನ್ಸ್ ಪೆಕ್ಟರ್ ರವಿಕುಮಾರ್ ಇದ್ದರು.

Share this article