ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕುಡತಿನಿಯಲ್ಲಿ ೬ರಂದು ಮುಷ್ಕರ

KannadaprabhaNewsNetwork |  
Published : Aug 04, 2024, 01:27 AM IST
ಕುರುಗೋಡು 02ಕುಡತಿನಿ ಪಟ್ಟಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಮುಖಂಡರು ಮುಷ್ಕರ ಕರ ಪತ್ರಗಳನ್ನು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಕಾರ್ಖಾನೆ ಸ್ಥಾಪಿಸದೆ, ಉದ್ಯೋಗ ಭತ್ಯೆ ನೀಡದೆ, ರೈತರ ಭೂಮಿ ವಾಪಾಸ್ ನೀಡದೆ ಅನ್ಯಾಯ ಎಸಗಿವೆ ಎಂದು ಆರೋಪಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕುರುಗೋಡು: ಉದ್ಯೋಗ ನೀಡುವುದಾಗಿ ಹೇಳಿ ಕಾರ್ಖಾನೆ ಸ್ಥಾಪನೆಗೆ ಕಡಿಮೆ ಬೆಲೆಯಲ್ಲಿ ರೈತರ ಭೂಮಿಗಳನ್ನು ಖರೀದಿಸಿ ಸುಮಾರು ವರ್ಷಗಳೇ ಕಳೆದಿವೆ. ಆದರೆ, ಉದ್ಯೋಗ ನೀಡದೆ, ಕಾರ್ಖಾನೆಗಳನ್ನು ಸ್ಥಾಪಿಸದೆ ಉದ್ಯೋಗ ಭತ್ಯೆ ನೀಡದೆ ರೈತರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಆ. 6ರಂದು ಕುಡತಿನಿಯಲ್ಲಿ ಮುಷ್ಕರ ಹಮ್ಮಿಕೊಂಡಿವೆ.ಈ ಕುರಿತು ೫೯೪ನೇ ದಿನ ಮುಂದುವರಿದ ಹೋರಾಟ ಸ್ಥಳದಲ್ಲಿ ಶುಕ್ರವಾರ ರೈತ ಮುಖಂಡರು ಕರಪತ್ರ ಬಿಡುಗಡೆಗೊ‍‍ಳಿಸಿದರು. ಈ ವೇಳೆ ಮಾತನಾಡಿದ ಸಿಐಟಿಯು ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಕಾಮ್ರೇಡ್, ಕುಡತಿನಿ ಪಟ್ಟಣ ಸೇರಿ ಅರಗಿನ ದೋಣಿ, ಜಾನೆಕುಂಟೆ, ವೇಣಿ ವೀರಾಪುರ, ಕೊಳಗಲ್ಲು, ಎರಂಗಳ್ಳಿ ಗ್ರಾಮಗಳ ರೈತರ ೧೩ ಸಾವಿರಕ್ಕೂ ಹೆಚ್ಚು ಭೂಮಿಯನ್ನು ಕಾರ್ಖಾನೆ ಸ್ಥಾಪಿಸಿ, ಉದ್ಯೋಗ ಕೊಡುವುದಾಗಿ ನಂಬಿಸಿ, ಸುಮಾರು ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಮಿತ್ತಲ್, ಬ್ರಾಹ್ಮಣಿ ಹಾಗೂ ಎನ್.ಎಂ.ಡಿ.ಸಿ. ಕಂಪನಿಗಳು ಖರೀದಿಸಿವೆ. ಆದರೆ, ಕಾರ್ಖಾನೆ ಸ್ಥಾಪಿಸದೆ, ಉದ್ಯೋಗ ಭತ್ಯೆ ನೀಡದೆ, ರೈತರ ಭೂಮಿ ವಾಪಾಸ್ ನೀಡದೆ ಅನ್ಯಾಯ ಎಸಗಿವೆ ಎಂದು ಆರೋಪಿಸಿದರು.ಭೂಮಿ ನೀಡಿದ ರೈತರಿಗೆ ಸದ್ಯದ ಮಾರುಕಟ್ಟೆ ದರ ನೀಡಬೇಕು ಎಂದು ಇತ್ತೀಚಿಗೆ ಕಾರ್ಖಾನೆ ಮಾಲೀಕರಿಗೆ ಹಾಗೂ ಸರ್ಕಾರಕ್ಕೆ ಕೋರ್ಟ್ ನೋಟೀಸ್ ನೀಡಿದೆ. ಆದರೂ, ಸರ್ಕಾರ ಭೂಮಿ ಕಳೆದಕೊಂಡ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಸಿ ಕ್ರಮಕೈಗೊಳ್ಳಲು ಮುಂದಾಗಿಲ್ಲ. ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾರ್ಖಾನೆ ಮಾಲೀಕರು ಮತ್ತು ರೈತರ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಕುಡತಿನಿಯಲ್ಲಿ ಆ. ೬ಕ್ಕೆ ಮುಷ್ಕರ ಕೈಗೊಳ್ಳಲಿದ್ದೇವೆ. ಅದರ ಕರ ಪತ್ರಗಳನ್ನು ಮನೆ ಮನೆಗೆ ನೀಡುತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಎಂ. ತಿಪ್ಪೇಸ್ವಾಮಿ, ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಜಂಗ್ಲಿಸಾಬ್, ಹೋರಾಟ ಸಮಿತಿಯ ರೈತ ಮುಖಂಡ ಕವನೂರ ಅಂಜಿನಪ್ಪ, ತಾಯಪ್ಪ, ಹಟ್ಟಿ ಪಂಪಾಪತಿ, ಬಿಳಿ ಬಾಯಪ್ಪ, ಸಿದ್ದಪ್ಪ, ಮೆಟ್ರಿ ಹನುಮಯ್ಯ ಹನುಮಂತಪ್ಪ, ನಾರಾಯಣಪ್ಪ, ಶಂಕ್ರಪ್ಪ, ನಾಗಪ್ಪ, ರುದ್ರಪ್ಪ, ಬಂಡಿ ಹನುಮಂತಪ್ಪ, ಬಸವರಾಜಪ್ಪ, ನಾಗಪ್ಪ,ಸಿದ್ದಪ್ಪ, ಗೊರವರ ಸೋಮಶೇಖರ, ಶ್ರೀಪಾದ, ಮಜ್ಜಿಗೆ ಬಸಪ್ಪ, ಚಲವಾದಿ ತಿಪ್ಪಯ್ಯ, ಚಲುವಾದಿ ಯಲ್ಲಪ್ಪ, ಪಿಂಜಾರ ಹೋಲಿಸಾಬ್, ಚನ್ನಬಸಪ್ಪ, ರಾಮಣ್ಣ, ಜಗ್ಗ ಮಲ್ಲಿಕಾರ್ಜುನ, ಹೊಸಗೇರಪ್ಪ, ಮಹಿಳಾ ಮುಖಂಡರಾಗಿರುವ ಈರಮ್ಮ, ಹುಲಿಗೆಮ್ಮ, ಹನುಮಕ್ಕ, ದ್ಯಾವಮ್ಮ ಸೇರಿ ಇತರರು ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ