ಕನ್ನಡಪ್ರಭ ವಾರ್ತೆ ಕೋಲಾರಅನಿಮಿಯ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಶಿಕ್ಷಕರು, ಅರಿವು ಪಡೆಯಿರಿ, ಶಾಲಾ ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆ, ಅಪೌಷ್ಟಕತೆ ತಡೆಯಲು ಅವರಿಗೆ ಆಹಾರ ಪದ್ಧತಿ ಕುರಿತು ಮಾರ್ಗದರ್ಶನ ನೀಡಿ ಎಂದು ರಾಷ್ಟ್ರೀಯ ಬಾಲಸ್ವಾಸ್ಥ್ಯ ಅಭಿಯಾನದ ಸಂಯೋಜಕಿ ಡಾ.ಹೀನಾಕೌಸರ್ ಸಲಹೆ ನೀಡಿದರು.
ನಗರದ ಮೆಥೋಡಿಸ್ಟ್ ಶಾಲೆ ಸಭಾಂಗಣದಲ್ಲಿ ಐಟಿಸಿ ಮಿಷನ್ ನೆರವು ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್‌ನಿಂದ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಿಂದ ತಾಲ್ಲೂಕಿನ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಅನಿಮಿಯ, ಅಪೌಷ್ಟಿಕತೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಪ್ರತಿ ಶಾಲೆಗೂ ಹೋಗಿ ಮಕ್ಕಳ ಹಿಮೋಗ್ಲೋಬಿನ್ ಮಟ್ಟದ ಪರೀಕ್ಷೆ ನಡೆಸಲಿದೆ ಎಂದರು.ಮಹಿಳೆ, ಮಕ್ಕಳಲ್ಲಿ ರಕ್ತಹೀನತೆಪ್ರಪಂಚದಾದ್ಯಂತ ೨ ಶತಕೋಟಿ ಜನರನ್ನು ಅನಿಮಿಯಾ ಬಾಧಿಸುತ್ತಿದೆ. ಅದರಲ್ಲೂ ಮಹಿಳೆಯರು, ಮಕ್ಕಳು ಹೆಚ್ಚಾಗಿ ರಕ್ತಹೀನತೆ ಸಮಸ್ಯೆಗೆ ತುತ್ತಾಗುತ್ತಿದ್ದು, ಮಕ್ಕಳ ಅರಿವಿನ ಬೆಳವಣಿಗೆ, ಶಕ್ತಿ, ಸಾಮರ್ಥ್ಯ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ, ಇದರಿಂದ ಮಕ್ಕಳ ಮೆದುಳಿನ ಬೆಳವಣಿಗೆ ತೀವ್ರವಾಗಿ ಕುಂಠಿತಗೊಳ್ಳುತ್ತಿದ್ದು, ಇದನ್ನು ನಂತರ ಬದಲಾಯಿಸಲು ಸಹಾ ಸಾಧ್ಯವಿಲ್ಲ ಎಂಬುದು ಆತಂಕಕಾರಿ ಎಂದರು.ಅನಿಮಿಯಾ ತಡೆಗೆ ಶಿಕ್ಷಕರು ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕು, ಮನೆಯಲ್ಲಿ ಸೊಪ್ಪು,ತರಕಾರಿ ಸೇರಿದಂತೆ ಕಬ್ಬಿಣಾಂಶಭರಿತ ತರಕಾರಿ ತಿನ್ನಬೇಕು. ಜಂಕ್‌ಫುಡ್‌ನಿಂದ ದೂರವಿರಬೇಕು. ಗರ್ಭಿಣಿಯರು ಐರನ್ ಮಾತ್ರೆ, ಪೌಷ್ಟಿಕ ಆಹಾರ ಸೇವಿಸುವ ಮೂಲಕ ಅವರಿಗೆ ಹಾಗೂ ಹುಟ್ಟುವ ಮಗು ಅನಿಮಿಯಾಗೆ ತುತ್ತಾಗುವುದನ್ನು ತಡೆಯಬಹುದು ಎಂಬ ಸತ್ಯ ಅರಿತು, ಅನಿಮಿಯಾ ತಡೆಗೆ ಸೊಪ್ಪು, ಹಸಿರು ತರಕಾರಿ, ಹಣ್ಣು,ಮೊಳಕೆ ಕಾಳು ಸೇವಿಸಲು ಸಲಹೆ ನೀಡಿದರು.ಜಂತುಹುಳುಗಳಿಂದ ರಕ್ತಹೀನತೆ
ನಗರದ ಜಿಲ್ಲಾಸ್ಪತ್ರೆ ವೈದ್ಯೆ ಡಾ.ರವೀನಾ ಮಾತನಾಡಿ, ಮಕ್ಕಳಲ್ಲಿ ಪೌಷ್ಟಿಕಾಂಶಭರಿತ ಆಹಾರ ಸಿಗದೇ ಹಾಗೂ ಜಂತುಹುಳುಗಳಿಂದಲೂ ರಕ್ತಹೀನತೆಗೆ ಕಾರಣವಾಗಿದೆ, ಆದ್ದರಿಂದಲೇ ಸರ್ಕಾರ ಶಾಲಾ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಅಲ್ಬೆಂಡೋಜಲ್ ಜಂತುಹುಳು ನಿವಾರಣಾ ಮಾತ್ರೆ ನೀಡುತ್ತಿದೆ, ಜತೆಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡುತ್ತಿದ್ದು, ಮಕ್ಕಳು ಬಿಸಾಡದಂತೆ ಎಚ್ಚರವಹಿಸಿ ನುಂಗಿಸಬೇಕು ಎಂದರು.ಬಯಲು ಬಹಿರ್ದೆಸೆ ಬೇಡ, ಶೌಚಕ್ಕೆ ಹೋದ ನಂತರ ಕೈತೊಳೆಯಿರಿ, ಸ್ವಚ್ಚತೆಗೆ ಒತ್ತು ನೀಡಿ, ಚಪ್ಪಲಿ ಬಳಸಿ, ಸೊಪ್ಪು ತರಕಾರಿಗಳನ್ನು ನೀರಿನಿಂದ ಸ್ವಚ್ಚಗೊಳಿಸಿ ಬಳಸುವುದರಿಂದ ಜಂತುಹುಳು ತಡೆಯಬಹುದು ಎಂದರು.ಅಪೌಷ್ಟಿಕತೆಯಿಂದ ಸಮಸ್ಯೆಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್ ಮಾತನಾಡಿ, ಅಪೌಷ್ಟಿಕತೆಯಿಂದಾಗುವ ಸಮಸ್ಯೆ, ರಕ್ತಹೀನತೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಒದಗಿಸಿ, ಇದು ಓದಿನ ಮೇಲೂ ಪರಿಣಾಮ ಬೀರುವುದರಿಂದ ಶಿಕ್ಷಕರು ಎಚ್ಚರಿಕೆ ವಹಿಸಬೇಕು, ಅಪೌಷ್ಟಿಕತೆ ತಡೆಗೆ ಪೋಷಕರಿಗೂ ಅರಿವು ಮೂಡಿಸಬೇಕು ಎಂದರು.ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಜಿಲ್ಲಾ ಸಂಯೋಜಕ ಸಂದೀಪ್ ಮಾತನಾಡಿ, ಅನಿಮಿಯ ತಡೆಗೆ ಅರಿವು ಮೂಡಿಸಲು ಐಟಿಸಿ ಮಿಷನ್ ನೆರವಿನಿಂದ ನಮ್ಮ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಶಿಕ್ಷಕರಿಗೆ ಅರಿವು ನೀಡಿದರೆ ಅದು ಮಕ್ಕಳಿಗೆ, ಸಮಾಜಕ್ಕೆ ತಲುಪಲು ಸಾಧ್ಯ ಎಂದರು.ಟ್ರಸ್ಟ್ ಮಾಲೂರು ತಾಲ್ಲೂಕು ಸಂಯೋಜಕ ಎಂ.ವಿ.ವಿಜಯಕುಮಾರ್ ಪ್ರಾತ್ಯಕ್ಷಿಕೆ ನಡೆಸಿದರು. ಕಾರ್ಯಾಗಾರದಲ್ಲಿ ಟ್ರಸ್ಟ್‌ನ ರಾಜ್ಯ ಯೋಜನಾ ಮುಖ್ಯಸ್ತ ಧನಂಜಯರಾವ್, ಇಸಿಒ ನಂಜುಂಡಗೌಡ, ಸಿಆರ್‌ಪಿ ಹರೀಶ್, ಮುನಿರಾಜು, ಟ್ರಸ್ಟ್‌ನ ಸಮುದಾಯ ಸಹಭಾಗಿಗಳಾದ ರವಿತೇಜ, ಸುಷ್ಮ ಇದ್ದರು.