ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಶೀಘ್ರವೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಮುಕ್ತ, ನ್ಯಾಯ ಸಮ್ಮತ ಚುನಾವಣೆಗಾಗಿ ನಿಸ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಜ್ಜಾಗುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಕುರಿತು ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು ನೀತಿ ಸಂಹಿತೆ ಜಾರಿಯಾದ ನಂತರ ಎಲ್ಲಾ ಅಧಿಕಾರಿ ಸಿಬ್ಬಂದಿ ಚುನಾವಣಾ ಆಯೋಗದ ಅಡಿ ಕಾರ್ಯ ನಿರ್ವಹಿಸಬೇಕು. ಚುನಾವಣೆ ಕೆಲಸಗಳಿಗೆ ಈಗಾಗಲೇ ತಂಡಗಳನ್ನು ರಚಿಸಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆಯೋಗದ ಮಾರ್ಗದರ್ಶನ ಹಾಗೂ ಸಲಹೆ ಪಡೆದು ಕ್ರಮಬದ್ಧ ವಾಗಿ ಕೆಲಸ ನಿರ್ವಹಿಸಬೇಕು. ನೋಡಲ್ ಅಧಿಕಾರಿಗಳೊಂದಿಗೆ ಎಲ್ಲಾ ಸಿಬ್ಬಂದಿ ಕೈ ಜೋಡಿಸಬೇಕು ಎಂದರು.
ಯಾವುದೇ ಅಕ್ರಮ, ಅವ್ಯವಹಾರಗಳಿಗೆ ಅವಕಾಶ ಮಾಡಿಕೊಡಬಾರದು. ಚುನಾವಣಾ ಆಯೋಗದ ಹೊಸ ನಿರ್ದೇಶನಗಳು ಹಾಗೂ ತೀರ್ಮಾನಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿ ಮನವರಿಕೆ ಮಾಡಿಕೊಡಬೇಕು. ಅಂಚೆ ಮತಪತ್ರಕ್ಕೆ ನಿರ್ವಹಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಚುನಾವಣೆ ಅಕ್ರಮ ಅಥವಾ ಅವ್ಯವಹಾರಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.ಚುನಾವಣೆ ಕಾರ್ಯದ ನಡುವೆಯೂ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಚುನಾವಣೆ ನೆಪ ಹೇಳಿ ದೈನಂದಿನ ಕೆಲಸ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಸಾರ್ವಜನಿಕರೊಂದಿಗೆ ಸೌಮ್ಯದಿಂದ ವರ್ತಿಸಬೇಕು. ಬರ ಪರಿಸ್ಥಿತಿ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ಪ್ರಥಮಾದ್ಯತೆ ನೀಡಬೇಕಾಗುತ್ತದೆ. ಚುನಾವಣೆ ಸಮಯದಲ್ಲಿ 24 ಗಂಟೆಯೂ ಕೆಲಸ ಮಾಡಬೇಕಾಗುತ್ತದೆ. ಆರೋಗ್ಯದ ಕಡೆಗೂ ಗಮನವಿಟ್ಟು, ತಾಳ್ಮೆ ಹಾಗೂ ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿ, ಸಿಬ್ಬಂದಿಗೆ ಸಲಹೆ ನೀಡಿದರು.
ಈ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿವಿಧ ಶಾಖೆಗಳ ನೋಡೆಲ್ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.