ಶಿರಹಟ್ಟಿ: ನಶಿಸುತ್ತಿರುವ ಜಾನಪದ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜಾನಪದ ಎಂಬುದು ನಮ್ಮ ನಾಡಿನ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಅನರ್ಘ್ಯ ರತ್ನವಿದ್ದಂತೆ.ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ರಾಜ್ಯ ಜಾನಪದ ಅಕಾಡಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ ಹೇಳಿದರು.
ಶ್ರೀ ಬೇರೇಶ್ವರ ಸೇವಾ ಸಮಿತಿ ಶಿರಹಟ್ಟಿ, ಬೀರೇಶ್ವರ ಕಾರ್ತಿಕೋತ್ಸವ ಜಾತ್ರೆ ಹಾಗೂ ೧೯ನೇ ವರ್ಷದ ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆ ಯುವ ಸಂಭ್ರಮ ಜನಪದ ರಸಮಂಜರಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಸಂಸ್ಕೃತಿ,ಪರಂಪರೆಯಿಂದ ಬಂದ ಸಾಹಿತ್ಯ ಜನಪದ ಸಾಹಿತ್ಯವಾಗಿದೆ. ಮನಸ್ಸುಗಳನ್ನು ಒಂದುಗೂಡಿಸುವುದು, ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುವುದು ಜನಪದದ ಆಶಯವಾಗಿದೆ ಎಂದು ಹೇಳಿದರು.
ಕವಿವಾಣಿ ಹೂವಾದರೆ ಜನವಾಣಿ ಬೇರು ಎಂಬಂತೆ ಯಾವುದೇ ಭಾಷೆಯಾಗಲಿ ಅದು ಸ್ವಯಂ ಸಹಜ ಭಾವದಿಂದ ಭಾವದೀಪ್ತಿಯಾಗಿ ಬಂದಿರುತ್ತದೆ. ಅದೇ ಜಾನಪದ ಸಾಹಿತ್ಯವಾಗಿ ರೂಪಗೊಂಡಿದೆ ಎನಿಸುತ್ತಿದೆ. ಹಳ್ಳಿ ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ. ಇದು ಈ ನಾಡಿನ ನೆಲದ ಮೂಲ ಸಂಸ್ಕೃತಿಯಾಗಿದೆ ಎಂದರು.ಜಾನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳಿವೆ. ಜಾನಪದ ನಮ್ಮ ಗ್ರಾಮೀಣ ಬದುಕಿನ ಪ್ರತೀಕ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಆಚರಣೆಗಳಿವೆ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಕಲೆಗಳು ಮುಸುಕಾಗುತ್ತಿದೆ ಎಂಬ ಬೇಸರ ಕಾಡುತ್ತಿದೆ. ಆದರೆ ಜಾನಪದಕ್ಕೆ ಎಂದಿಗೂ ಅಳಿವಿಲ್ಲ ಎಂದರು.
ಜಾನಪದರು ಎಲ್ಲರಿಗೂ ಒಳಿತನ್ನೇ ಬಯಸಿದವರು. ಜನರು ಯಾವ ರೀತಿ ಜೀವಿಸಬೇಕು, ಯಾವುದು ತಪ್ಪು, ಯಾವುದು ಸರಿ, ಸಾಮಾಜಿಕ ಜವಾಬ್ದಾರಿಗಳೇನು, ಧಾರ್ಮಿಕ, ವೈಜ್ಞಾನಿಕವಾಗಿ ಹೇಗೆ ಜೀವಿಸಬೇಕು ಎಂಬುದನ್ನು ಸಮರ್ಥವಾಗಿ ಜಾನಪದ ಸಾಹಿತ್ಯ ತಿಳಿಸುತ್ತದೆ. ಜಾನಪದ ನಮ್ಮ ತಾಯಿಬೇರು ಅದನ್ನು ಆಳವಾಗಿ ಅಭ್ಯಾಸ ಮಾಡಿದಷ್ಟು ಜ್ಞಾನದ ಮಟ್ಟ ಹೆಚ್ಚುತ್ತದೆ ಎಂದು ಬಣ್ಣಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದ ಕಲಾವಿದರು ಪ್ರದರ್ಶಿಸುವ ಕಲೆ ನೋಡಿ ಬೆಳೆಸಬೇಕು. ಜನಪದ ಸಾಹಿತ್ಯದಲ್ಲಿ ನಮ್ಮ ನಾಡಿನ ಸಂಸ್ಕೃತಿ ಸಂಪ್ರದಾಯ ಅಡಗಿದೆ. ಸಿನಿಮಾ ಹಾಗೂ ಟಿವಿ ಮಾಧ್ಯಮಗಳಿಂದ ಸಮಾಜದಲ್ಲಿ ಜಾನಪದ ಕಲೆ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಈ ನೆಲದ ಜಾನಪದ ಕಲೆಗಳು ನಶಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ನಾವೆಲ್ಲ ಆಧುನಿಕ ಭರಾಟೆ ಹಾಗೂ ಒತ್ತಡದ ಬದುಕಿನಲ್ಲಿ ಜೀವನ ನಡೆಸುತ್ತಿದ್ದೇವೆ.ಇಂತಹ ಸಂದಿಗ್ದ ಸ್ಥಿತಿಯಲ್ಲಿ ನಮ್ಮ ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದೇವೆ.ಎದುರಾದ ಪರಿಸ್ಥಿತಿಯ ನಡುವೆ ಸಂಸ್ಕಾರ, ಸಂಬಂಧಗಳನ್ನು ಗಟ್ಟಿಗೊಳಿಸಲು ಜನಪದ ಸಾಹಿತ್ಯ ಹಾಗೂ ಕಲೆಗಳು ಅವಶ್ಯವಾಗಿದೆ ಎಂದು ಹೇಳಿದರು.ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿ, ಬೀರೇಶ್ವರ ಸೇವಾ ಸಮಿತಿಯವರು ಸಮಾಜದ ಯುವ ಮುಖಂಡ ಮಂಜುನಾಥ ಘಂಟಿ ನೇತೃತ್ವದಲ್ಲಿ ಸತತ ೧೯ನೇ ವರ್ಷದಿಂದ ಕಾರ್ತಿಕೋತ್ಸವದ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಕಾಯಿಯಂತಿರುವ ಜನಪದ ಕಲಾವಿದರನ್ನು ಗುರುತಿಸುವ ಕಾರ್ಯ ಮಾಡಿ ಅವರನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸಮಾಜದ ಯುವಕರು ಶಿಕ್ಷಣವಂತರಾಗಬೇಕು.ಭಕ್ತಿ-ಭಾವಗಳಿಂದ ನಡೆಯುವ ಜತೆಗೆ ಸಂಸ್ಕಾರ,ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಇಂದು ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿದೆ. ಇದಕ್ಕೆ ಬದಲಾದ ಜೀವನ ಶೈಲಿಯೂ ಕಾರಣವಾಗಿದೆ. ಕಣ್ಮರೆಯಾಗುತ್ತಿರುವ ಜನಪದ ಕಲೆ ಉಳಿಸಿ ಬೆಳೆಸಿ ಎಂದರು.ಸಮಾಜದ ಯುವ ಮುಖಂಡ ಮಂಜುನಾಥ ಘಂಟಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಹಮಿಗಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹುಮಾಯೂನ ಮಾಗಡಿ, ಪಿಎಸ್‌ಐ ಚನ್ನಯ್ಯ ದೇವೂರ, ಹೊನ್ನಪ್ಪ ಶಿರಹಟ್ಟಿ, ಗೂಳಪ್ಪ ಕರಿಗಾರ, ದೇವಪ್ಪ ಬಟ್ಟೂರ, ಸೋಮನಗೌಡ ಮರಿಗೌಡ್ರ, ಮಹೇಶ ಹಾರೋಗೇರಿ, ನಿಂಗಪ್ಪ ಗುಡ್ಡದ, ರಮೇಶ ಲಮಾಣಿ, ನಾರಾಯಣ ಪವಾರ, ತಿಪ್ಪಣ್ಣ ಸಂಶಿ, ವೀರಯ್ಯ ಮಠಪತಿ, ಆನಂದ ಮಾಳೆಕೊಪ್ಪ ಸೇರಿ ಇತರರು ಇದ್ದರು.