ತುಮಕೂರು ಜಿಲ್ಲೇಲಿ ಎಕ್ಸ್ಪ್ರೆಸ್ ಕೆನಾಲ್ ಗೆ ತೀವ್ರ ವಿರೋಧ

KannadaprabhaNewsNetwork | Updated : May 16 2024, 12:52 AM IST

ಸಾರಾಂಶ

ಮಾಗಡಿಯ ಹೇಮಾವತಿ ಶ್ರೀರಂಗ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ 2014ರಲ್ಲಿ ಮುಕ್ಕಾಲು ಟಿಎಂಸಿ ನೀರು ಮಂಜೂರಾತಿಯಾಗಿದ್ದು, ಕಾಮಗಾರಿ ಆರಂಭವಾಗಿದೆ. ಈಗಾಗಲೇ ಕಾಮಗಾರಿಯು ಶೇ. 20ರಷ್ಟು ಮಾತ್ರ ಬಾಕಿ ಉಳಿದಿದ್ದು, 240 ಕಿಮೀ. ಪೈಪ್ ಲೈನ್ ಕಾಮಗಾರಿ ಪೂರ್ಣವಾದರೆ 83 ಕೆರೆಗಳಿಗೆ ನೀರು ತುಂಬಿಸಬಹುದು.

ಕನ್ನಡಪ್ರಭ ವಾರ್ತೆ ಮಾಗಡಿತಾಲೂಕಿನ 83 ಕೆರೆಗಳಿಗೆ ನೀರು ತುಂಬಿಸುವ ಬಹು ನಿರೀಕ್ಷಿತ ಹೇಮಾವತಿ ಯೋಜನೆಗೆ ಈ ಬಾರಿ ತುಮಕೂರು ಜಿಲ್ಲೆಯಲ್ಲಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ಕಾಮಗಾರಿಗೆ ವಿಗ್ನ ಆರಂಭವಾಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.

2014ರಲ್ಲಿ ಆರಂಭವಾದ ಹೇಮಾವತಿ ಕಾಮಗಾರಿಯು ಸಾಕಷ್ಟು ತೊಂದರೆಗಳನ್ನು ಕಾಣುತ್ತಲೇ ಆಮೆ ಗತಿಯಲ್ಲಿ ಸಾಗುತ್ತಿದೆ. ಈಗ ಕಾಮಗಾರಿಗೆ ವೇಗ ಸಿಗಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 900 ಕೋಟಿ ರು. ವೆಚ್ಚದಲ್ಲಿ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಮಾಗಡಿ ತಾಲೂಕಿಗೆ ನೀರು ತರುವ ಯೋಜನೆಗೆ ಚಾಲನೆ ನೀಡಿದ್ದರು. ಅದರಂತೆ ತುಮಕೂರು ಶಾಖಾ ನಾಲೆಯ ಸುಂಕಾಪುರ ಬಳಿ 70 ಕಿಮೀ ಸ್ಥಳದಿಂದ 166 ಕಿಮೀಗೆ ಸಂಪರ್ಕಿಸುವ ಕುಣಿಗಲ್ ನ ನಾಲೆವರೆಗೂ ಪೈಪ್ ಲೈನ್ ನಲ್ಲಿ ನೀರು ತರುವ ಯೋಜನೆ ಆರಂಭಿಸಿದ್ದಾರೆ. ಆದರೆ ಈ ಯೋಜನೆಯಿಂದ ತುಮಕೂರು ಜಿಲ್ಲೆಗೆ ಸಾಕಷ್ಟು ತೊಂದರೆಯಾಗಲಿದೆ ಎಂಬ ನಿಟ್ಟಿನಲ್ಲಿ ಅಲ್ಲಿನ ಜನಪ್ರತಿನಿಧಿಗಳು, ಮಠಾಧಿಪತಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಗುರುವಾರ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಇದರಿಂದ ಮಾಗಡಿ ತಾಲೂಕಿಗೆ ಹೇಮಾವತಿಯಿಂದ ನೀರು ಬರುತ್ತದೆಯೋ? ಇಲ್ಲವೋ? ಎಂಬ ಗೊಂದಲ ಶುರುವಾಗಿದೆ.

ಮುಕ್ಕಾಲು ಟಿಎಂಸಿ ನೀರು ಮಂಜೂರಾಗಿದೆ:

ಮಾಗಡಿಯ ಹೇಮಾವತಿ ಶ್ರೀರಂಗ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ 2014ರಲ್ಲಿ ಮುಕ್ಕಾಲು ಟಿಎಂಸಿ ನೀರು ಮಂಜೂರಾತಿಯಾಗಿದ್ದು, ಕಾಮಗಾರಿ ಆರಂಭವಾಗಿದೆ. ಈಗಾಗಲೇ ಕಾಮಗಾರಿಯು ಶೇ. 20ರಷ್ಟು ಮಾತ್ರ ಬಾಕಿ ಉಳಿದಿದ್ದು, 240 ಕಿಮೀ. ಪೈಪ್ ಲೈನ್ ಕಾಮಗಾರಿ ಪೂರ್ಣವಾದರೆ 83 ಕೆರೆಗಳಿಗೆ ನೀರು ತುಂಬಿಸಬಹುದು.

ಮಾಗಡಿಯಲ್ಲಿ ಹೇಮಾವತಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಕುಣಿಗಲ್ ನಿಂದ ಪೈಪ್ ಲೈನ್ ನ ಮೂಲಕ ಕೆರೆಗಳಿಗೆ ನೀರು ತುಂಬಿಸಬಹುದು. ಈಗ ಶಾಸಕ ಬಾಲಕೃಷ್ಣರವರು ಹೇಮಾವತಿ ಕಾಮಗಾರಿಯನ್ನು ಪೂರ್ಣಗೊಳಿಸುವ ಜವಾಬ್ದಾರಿ ತೆಗೆದುಕೊಂಡಿದ್ದು, ಎಕ್ಸ್ ಪ್ರೆಸ್ ಕೆನಾಲ್ ಗೊಂದಲವನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಲಿ ಎಂದು ಮಾಜಿ ಶಾಸಕ ಎ. ಮಂಜುನಾಥ್ ತಿಳಿಸುತ್ತಾರೆ.

ನಾಲೆ ಮೂಲಕ ನೀಡುವುದಾರೆ ತೊಂದರೆ ಇಲ್ಲ:

ತುಮಕೂರಿನ ಜನಪ್ರತಿನಿಧಿಗಳು ನಾಲೆ ಮೂಲಕ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋದರೆ ನಮ್ಮ ವಿರೋಧವಿಲ್ಲ, ಆದರೆ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯಿಂದ ನೇರವಾಗಿ ಪೈಪ್ ಲೈನ್ ಮೂಲಕ ನೀರು ಹರಿಸಿದರೆ ತುಮಕೂರು ಜಿಲ್ಲೆಗೆ ಸಾಕಷ್ಟು ತೊಂದರೆಯಾಗಲಿದೆ, ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Share this article