ರಾಜ್ಯ ಸರ್ಕಾರದ ಜಾತಿ ಗಣತಿ ವಿರುದ್ಧ ಹೋರಾಟ: ವೀರಣ್ಣ ಚರಂತಿಮಠ

KannadaprabhaNewsNetwork |  
Published : Mar 07, 2024, 01:46 AM IST
(ಫೋಟೋ 6ಬಿಕೆಟಿ8,ಬಾಗಲಕೋಟೆಯ ಬಿವಿವಿ ಸಂಘದ ಮಿನಿಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿದರು.) | Kannada Prabha

ಸಾರಾಂಶ

ಬಾಗಲಕೋಟೆ : ರಾಜ್ಯ ಸರ್ಕಾರದ ಜಾತಿ ಗಣತಿಯನ್ನು ನಾವು ಒಪ್ಪುವುದಿಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಜಾತಿ ಗಣತಿ ಮಾಡಿಸುತ್ತೇವೆ ಹಾಗೂ ಸರ್ಕಾರದ ಜಾತಿ ಗಣತಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯ ಸರ್ಕಾರದ ಜಾತಿ ಗಣತಿಯನ್ನು ನಾವು ಒಪ್ಪುವುದಿಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಜಾತಿ ಗಣತಿ ಮಾಡಿಸುತ್ತೇವೆ ಹಾಗೂ ಸರ್ಕಾರದ ಜಾತಿ ಗಣತಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಇಲ್ಲಿನ ಬಿವಿವಿ ಸಂಘದ ಮಿನಿಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿ ಗಣತಿ ವೈಜ್ಞಾನಿಕವಾಗಿಲ್ಲ. ಯಾರ ಮನೆಗೂ ಹೋಗದೆ ಹೇಗೆ ಜಾತಿ ಗಣತಿ ಮಾಡಲಾಗಿದೆ ಎಂದು ಪ್ರಶ್ನಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿರುವ ಸಮಾಜವನ್ನು ಕಡಿಮೆ ತೋರಿಸಿ ಕುಗ್ಗಿಸುವ ಕೆಲಸ ವರದಿ ಮೂಲಕ ಮಾಡಲಾಗುತ್ತಿದೆ. ಇದು ಒಳ್ಳೆಯ ಸಂಪ್ರದಾಯವಲ್ಲ. ಅಧಿಕಾರ ಇದೆ ಎಂದು ವರದಿ ತರಿಸಿಕೊಂಡಿದ್ದಕ್ಕೆ ಜಾತಿ ಗಣತಿ ಎನ್ನಲ್ಲ. ಮನೆ-ಮನೆಗೆ ತೆರಳಿ ವರದಿ ಮಾಡಬೇಕು. ಎಲ್ಲ ಸಮಾಜಗಳಲ್ಲೂ ಒಳ ಪಂಗಡಗಳಿವೆ. ಸದ್ಯದ ವರದಿಯಲ್ಲಿ ಅವುಗಳನ್ನು ಬೇರೆ ಬೇರೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು ಸವಲತ್ತುಗಳಿಗಾಗಿ ಬೇರೆ ಬೇರೆ ಜಾತಿ ಎಂದು ಬರೆದುಕೊಂಡಿರಬಹುದು. ಆದರೆ, ಅದನ್ನೇ ಆಧಾರವಾಗಿಟ್ಟುಕೊಂಡು ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಾಲಂನಲ್ಲಿ ಒಳಪಂಗಡದ ಜತೆಗೆ ವೀರಶೈವ ಲಿಂಗಾಯತ ಎಂದು ಬರೆಸಬೇಕು. ನಮ್ಮ ಮನೆಗಂತೂ ಯಾರೂ ಬಂದಿಲ್ಲ. ಇಂತಹ ವರದಿ ಪದ್ಧತಿ ಒಳ್ಳೆಯದಲ್ಲ. ಸಮಾಜವನ್ನು ಕಲುಷಿತ ಮಾಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಆಗ್ರಹಿಸಿದರು.

ಯಾವಾಗ ಸಿದ್ದರಾಮಯ್ಯ ಆಡಳಿತಕ್ಕೆ ಬಂದಿದ್ದಾರೋ ಆಗಿನಿಂದ ಸಮುದಾಯಗಳ ನಡುವೆ ಸಂಘರ್ಷಗಳು ಶುರುವಾಗಿದೆ. 2013ರಲ್ಲಿ ಅಧಿಕಾರಕ್ಕೆ ಬಂದಾಗ ವೀರಶೈವ ಲಿಂಗಾಯತ ಬೇರೆ ಬೇರೆ ಮಾಡುವ ಪ್ರಯತ್ನ, ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸುವ ವಿಚಾರದಲ್ಲೂ ತಾರತಮ್ಯ ಮಾಡಿದರು. ಕಲುಷಿತ ಮನಸ್ಸಿದ್ದಾಗ ಅಂತಹ ವಿಚಾರಗಳೇ ಬರುವುದು. ಇಂತವರಿಂದ ಒಳ್ಳೆಯ ಕೆಲಸ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ನಮ್ಮ ತಪ್ಪಿನಿಂದ ಅಧಿಕಾರಕ್ಕೆ ಬಂದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಇವರಿಗೆ ರಾಜ್ಯದ ಬರಸ್ಥಿತಿಯ ಅರಿವಿಲ್ಲ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಿಂಗಾದರೆ ನಮ್ಮ ಸ್ಥಿತಿ ಏನಾಗಬಾರದು ಎಂದು ಪ್ರಶ್ನಿಸಿದರು.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಪಾಟೀಲ, ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಭಗವತಿ ಇದ್ದರು.

ವೀರಶೈವ ಲಿಂಗಾಯತ ಮಕ್ಕಳಿಗೆ 9ರಂದು ಪ್ರತಿಭಾ ಪುರಸ್ಕಾರ:

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಮಾ.9ರಂದು ಬೆಳಗ್ಗೆ 11ಕ್ಕೆ ಬಿವಿವಿ ಸಂಘದ ನೂತನ ಸಭಾಭವನದಲ್ಲಿ 2021-22 ಹಾಗೂ 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಭಗವತಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...