ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ: ಎಚ್.ಎನ್. ಚಂದ್ರಶೇಖರ

KannadaprabhaNewsNetwork | Published : Sep 26, 2024 10:37 AM

ಸಾರಾಂಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದ ೧೪ ಜಿಲ್ಲೆಗಳಲ್ಲಿ ಎಂಆರ್‌ಐ, ಸ್ಕ್ಯಾನಿಂಗ್ ಯಂತ್ರಗಳು ಬಂದ್ ಆಗಿವೆ. ಅವರಿಗೆ ಕೊಡಲು ಸರ್ಕಾರದ ಬಳಿ ಹಣವೇ ಇಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ ಹೇಳಿದರು.

ಹಾವೇರಿ: ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಅಧಿಕಾರಕ್ಕೆ ಅಂಟಿ ಕೂರದೇ, ನೈತಿಕತೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವ ವರೆಗೂ ಪಕ್ಷದಿಂದ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಚಲಾವಣೆಗೆ ಉತ್ತರದಾಯಿತ್ವ ಇರಬೇಕು. ಇದಕ್ಕೆ ವಿಶ್ವಾಸ ಮತ್ತು ನೈತಿಕತೆ ಅಗತ್ಯ. ಸಮಾಜವಾದಿ, ಅಹಿಂದ ಅಜೆಂಡಾ ಬಗ್ಗೆ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಆಧಾರದಲ್ಲಿ ಅಧಿಕಾರದಲ್ಲಿ ಉಳಿದುಕೊಂಡಿದ್ದಾರೆ. ಅಧಿಕಾರಕ್ಕೆ ವಿಶ್ವಾಸವೇ ಆಧಾರ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳೇ ಅವರ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಕೆ.ಜೆ. ಜಾರ್ಜ್, ಸಂತೋಷ ಲಾಡ್ ಅವರಿಂದ ಸಚಿವ ಸ್ಥಾನಕ್ಕೆ ಇದೇ ಸಿದ್ದರಾಮಯ್ಯ ರಾಜೀನಾಮೆ ಪಡೆದಿದ್ದರು. ವಿಚಾರಣೆ ಮುಗಿದ ಮೇಲೆ ತಪ್ಪು ಮಾಡಿಲ್ಲ ಎಂದಾದಾಗ ಮತ್ತೆ ಸಚಿವರಾದರು. ಈಶ್ವರಪ್ಪ ಅವರಿಗೆ ಮಾನ, ಮರ್ಯಾದೆ ಇದ್ದರೆ ಮೊದಲು ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಅವರೇ ಒತ್ತಾಯಿಸಿದ್ದರು. ಆಗ ಈಶ್ವರಪ್ಪ ಕೂಡ ರಾಜೀನಾಮೆ ಸಲ್ಲಿಸಿ ಕ್ಲೀನ್‌ಚಿಟ್ ಪಡೆದುಕೊಂಡರು. ಈಗ ಈ ಪದಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನ್ವಯಿಸುವುದಿಲ್ಲವೇ? ನಿಮಗೊಂದು ನ್ಯಾಯ ಇತರರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿ, ಇದು ನನ್ನ ಆಡು ಭಾಷೆ ಎನ್ನುವ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಾರೆ. ಇಂದು ರಾಜ್ಯದಲ್ಲಿ ದಿನಕ್ಕೆ ೨-೩ ಅತ್ಯಾಚಾರ ಪ್ರಕರಣಗಳ ವರದಿ ಆಗುತ್ತಲೇ ಇವೆ. ಈಗ ಸರ್ಕಾರ ಅಷ್ಟೇ ಅಲ್ಲ ಪೊಲೀಸರು, ಜಿಲ್ಲಾಧಿಕಾರಿಗಳು ರಣಹೇಡಿಗಳಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನಾಗಮಂಗಲದಲ್ಲಿ ಪೊಲೀಸರ ಎದುರೆ ಸಾರ್ವಜನಿಕ ಆಸ್ತಿಹಾನಿ ಆಗುತ್ತಿದ್ದರೂ ಸುಮ್ಮನೆ ನಿಂತಿದ್ದರು. ಇನ್ನು ರಾಜ್ಯದ ೧೪ ಜಿಲ್ಲೆಗಳಲ್ಲಿ ಎಂಆರ್‌ಐ, ಸ್ಕ್ಯಾನಿಂಗ್ ಯಂತ್ರಗಳು ಬಂದ್ ಆಗಿವೆ. ಅವರಿಗೆ ಕೊಡಲು ಸರ್ಕಾರದ ಬಳಿ ಹಣವೇ ಇಲ್ಲ. ಇದಕ್ಕಾಗಿ ಜನರು ಪರದಾಡುತ್ತಿದ್ದಾರೆ. ಪಂಜಾಬ್ ನಂತರ ದಿವಾಳಿ ಆಗುವ ರಾಜ್ಯಗಳ ಸಾಲಿನಲ್ಲಿ ಇದೀಗ ಕರ್ನಾಟಕ ಸೇರಿಕೊಂಡಿದ್ದು, ಘೊಷಣೆಯೊಂದೇ ಬಾಕಿ ಇದೆ ಎಂದು ಕುಟುಕಿದರು.

ಸೋನಿಯಾ, ರಾಹುಲ್‌ ಗಾಂಧಿ, ಡಿ.ಕೆ. ಶಿವಕುಮಾರ ಸೇರಿದಂತೆ ಹಲವರು ಬೇಲ್ ಮೇಲಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಅವರ ಮೇಲೆ ೬೧ ಲೋಕಾಯುಕ್ತ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ೫೦ ಪ್ರಕರಣದ ತನಿಖೆಯೇ ಆಗಲಿಲ್ಲ. ಅದಕ್ಕಾಗಿ ಲೋಕಾಯುಕ್ತವನ್ನೆ ಬಂದ್ ಮಾಡಿದ ಅಪಕೀರ್ತಿ ಅವರ ಮೇಲಿದೆ. ತನಿಖೆಗೂ ಮುನ್ನ ನಿರ್ಧಾರ ಪ್ರಕಟಿಸುವ, ವಿವೇಚನೆ ಇಲ್ಲದ ಗೃಹ ಸಚಿವರು ರಾಜ್ಯದಲ್ಲಿದ್ದಾರೆ. ಹೆಜ್ಜೆಹೆಜ್ಜೆಗೂ ಸುಳ್ಳುಗಳನ್ನು ಹೇಳಿ, ಸಾಕಷ್ಟ್ಟು ಅನ್ಯಾಯ ಎಸಗಿದ್ದಾರೆ. ಇಂಥವರಿಂದ ರಾಜ್ಯದ ಜನರು ನಲುಗುತ್ತಿದ್ದಾರೆ. ಹಲವಾರು ಸಚಿವರೇ ಮುಂದಿನ ಮುಖ್ಯಮಂತ್ರಿ ತಾವೇ ಎಂದು ಹೇಳುವ ಮೂಲಕ ನಿಮ್ಮ ಮೇಲೆ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಂಡತನ ತೋರದೇ ಕೂಡಲೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಬಿಜೆಪಿ ವತಿಯಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಪ್ರಮುಖರಾದ ಸುರೇಶ ಹೊಸಮನಿ, ನಂಜುಂಡೇಶ ಕಳ್ಳೇರ, ಗಿರೀಶ ತುಪ್ಪದ, ಜಗದೀಶ ಮಲಗೋಡ, ಶಿವಯೋಗಿ ಹೂಲಿಕಂತಿಮಠ ಇತರರು ಇದ್ದರು.

Share this article