ಕುಕನೂರು: ವಿದ್ಯಾರ್ಥಿಗಳು ಸಾಧನೆಯ ಹೆಜ್ಜೆ ತುಳಿದಾಗ ಅದುವೇ ಗುರುವಿಗೆ ಅವರು ನೀಡುವ ಕೊಡುಗೆಯಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಗವಿಸಿದ್ದಪ್ಪ ಛಲವಾದಿ ಹೇಳಿದರು.
ಪಟ್ಟಣದ ಶ್ರೀಗವಿಸಿದ್ದೇಶ್ವರ ಪ್ರೌಢಶಾಲೆಯ 2005 -6ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಜರುಗಿದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಕರು ಏಣಿಯಂತೆ ಕಾರ್ಯ ಮಾಡುತ್ತಾರೆ. ಮಕ್ಕಳನ್ನು ಕೆಳಗಿನಿಂದ ಮೇಲೆಕ್ಕೆತ್ತುವ ಅಭಿಲಾಷೆ ಹೊಂದಿರುತ್ತಾರೆ. ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ತಿದ್ದಿ, ಅಕ್ಷರ, ಅರಿವು ಜತೆಗೆ ನೆರಳು ಮೂಡಿಸುವ ಜವಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಪ್ರತಿ ಶಿಕ್ಷಕ ವಿದ್ಯಾರ್ಥಿಗಳ ಹಿತಕ್ಕಾಗಿ ಕೆಲಸ ಮಾಡುತ್ತಾರೆ. ಹಳೆ ಬೇರು ಹೊಸ ಚಿಗುರು ಎಂಬಂತೆ ವಿದ್ಯಾರ್ಥಿಗಳು ಬರುತ್ತಾ ಇರುತ್ತಾರೆ. ಎಲ್ಲ ವಿದ್ಯಾರ್ಥಿಗಳು ಶಿಕ್ಷಕ ಹಳೆ ಬೇರಾಗಿ ಜ್ಞಾನ ನೀಡುತ್ತಾ ಇರುತ್ತಾನೆ ಎಂದರು.ವಿದ್ಯಾರ್ಥಿಗಳು ಅಕ್ಷರ ಜ್ಞಾನ ನೀಡಿದ ಗುರುಗಳನ್ನು ನೆನೆಯುವ ಕಾರ್ಯ ಮಹತ್ವವಾದದ್ದು. ಶಿಷ್ಯರಿಲ್ಲದೆ ಗುರುಗಳಿರಲು ಸಾಧ್ಯವಿಲ್ಲ. ಇಂದಿನ ಮಕ್ಕಳಿಗೆ ಭೀತಿ ಇಲ್ಲದೆ ನೀತಿ ಶಿಕ್ಷಣ ಬರಲು ಸಾಧ್ಯವಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳ ಮಕ್ಕಳನ್ನು ದಂಡಿಸಿದರೆ ಪಾಲಕರು ಶಾಲೆಗೆ ಬಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವ ಪರಂಪರೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಳೆ ವಿದ್ಯಾರ್ಥಿ ನಾಗರಾಜ ಬೆಣಕಲ್ ಮಾತನಾಡಿ, ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಶಾಲೆಯಲ್ಲಿ ಕಲಿಕೆಯ ಕ್ಷಣಗಳನ್ನು ನೆನಪಿಸುತ್ತದೆ. ಬಹಳ ದಿನಗಳ ನಂತರ ಜತೆಗೆ ಓದಿದಂತ ಸ್ನೇಹತರನ್ನು ಹಾಗೂ ಶಿಕ್ಷಕರನ್ನು ಕಾಣುವುದೇ ಒಂದು ಸಂತಸದ ಕ್ಷಣ ಎಂದರು.ಗವಿಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ವೆಂಕಟೇಶ ಬಂಡಿವಡ್ಡರ, ಪಪಂ ಸದಸ್ಯ ಸಿದ್ದು ಉಳಾಗಡ್ಡಿ, ಗವಿಸಿದ್ದಪ್ಪ ಆರೇರ, ಬಿ.ಬಿ. ಜುಕ್ತಿ ಹಿರೇಮಠ, ಪಿ.ವಿ. ಸುಳೇಬಾವಿ, ಶಿವಪ್ಪ ಅರಮನೆ, ವೀರಣ್ಣ ಕಟ್ಟಿ, ಸಿದ್ದುನಗೌಡ ಪಾಟೀಲ್, ಟಿ.ಸಜ್ಜನ್, ಬಸವರಾಜ ಲಕ್ಷಾಣಿ, ಪಿ.ಬಿ. ಹುಬ್ಬಳ್ಳಿ, ಎಂ.ಕೆ. ತುಪ್ಪದ, ಅಕ್ಕಮಹಾದೇವಿ ಕರಡಿ, ಬಸವಣ್ಣಮ್ಮ ಅರಳೆಲೆಮಠ, ಅನ್ನಪೂರ್ಣ ತಿಪ್ಪೇಶೆಟ್ಟಿ, ಜಿಎಸ್ ಹೊಸ್ಮನಿ, ಎಸ್.ಎಂ. ಹಿರೇಮಠ, ಆರ್.ಬಿ.ತಳವಾರ್, ರಾಮಣ್ಣ ಹಳ್ಳಿಕೇರಿ, ಅನ್ವರ್ ಪಾಷ ಮಕ್ಕಂದರ್, ಶರಣಪ್ಪ ಗುಡ್ಲಾನೂರ್ ಹಳೆ ವಿದ್ಯಾರ್ಥಿಗಳಿದ್ದರು.