ಪರಿಸರ ಉಳಿವಿಗೆ ವಿದ್ಯಾರ್ಥಿಗಳು ಕಂಕಣಬದ್ಧರಾಗಿ: ದೊಡ್ಡಯ್ಯ

KannadaprabhaNewsNetwork |  
Published : Jun 06, 2024, 12:30 AM IST
5 ಕೆಎಂಎನ್‌ಡಿ-2ಮಳವಳ್‌ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಕಾಲೇಜಿನ ಅಭಿವೃದ್ಧಿ ಸಮಿತ ಉಪಾಧ್ಯಕ್ಷ ದೊಡ್ಡಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕವಯಸ್ಸಿನಿಂದಲೇ ವಿದ್ಯಾರ್ಥಿಗಳು ಪರಿಸರದ ಕಾಳಜಿಯನ್ನು ಮೂಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮೊಬೈಲ್, ಸಾಮಾಜಿಕ ಜಾಲತಾಣಗಳ ಗೀಳು ಅಂಟಿಸಿಕೊಂಡು ಸಮಯ ವ್ಯರ್ಥಗೊಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಪರಿಸರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಗೀಳು ಅಂಟಿಸಿಕೊಳ್ಳುವ ಬದಲಿಗೆ ನಿಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದಕ್ಕೆ ಆಸಕ್ತಿ ತೋರಿಸಬೇಕು ಎಂದು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್ ಸಹಯೋಗದೊಂದಿಗೆ ಬುಧವಾರ ನಡೆದ ಪರಿಸರ ದಿನಾಚರಣೆ ಹಾಗೂ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿಕ್ಕವಯಸ್ಸಿನಿಂದಲೇ ವಿದ್ಯಾರ್ಥಿಗಳು ಪರಿಸರದ ಕಾಳಜಿಯನ್ನು ಮೂಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮೊಬೈಲ್, ಸಾಮಾಜಿಕ ಜಾಲತಾಣಗಳ ಗೀಳು ಅಂಟಿಸಿಕೊಂಡು ಸಮಯ ವ್ಯರ್ಥಗೊಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಪರಿಸರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಪರಿಸರ ಮಾಲಿನ್ಯದಿಂದ ಆಗುವ ಜೀವಹಾನಿ ಗಮನದಲ್ಲಿಟ್ಟುಕೊಂಡು ಎಲ್ಲರೂ ಪರಿಸರ ರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.

ಶಿಕ್ಷಣದ ಪ್ರಾಮುಖ್ಯತೆಯಾಗಿ ಗಿಡ ನೆಟ್ಟು ಮರ ಬೆಳೆಸುವುದನ್ನು ರೂಢಿಸಿಕೊಳ್ಳಬೇಕು. ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಜೀವನ ಪರಿಪೂರ್ಣ ಆಗುವುದಿಲ್ಲ, ಮರ-ಗಿಡ ಇಲ್ಲದಿದ್ದರೆ ಪರಿಸರ ಉಳಿಯುವುದಿಲ್ಲ, ಪರಿಸರವನ್ನು ಉಳಿಸುವ ಅನಿವಾರ್ಯತೆ ಇದ್ದು, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ಕರ್ತವ್ಯವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಗಿಡ ನೆಡುವ ಕಾರ್ಯಕ್ಕೆ ಪ್ರಭಾರ ಪ್ರಾಂಶುಪಾಲ ಎಚ್.ವಿ.ನಿಂಗರಾಜು ಚಾಲನೆ ನೀಡಿ ಮಾತನಾಡಿ, ಮುಂದಿನ ಭವಿಷ್ಯದ ದೃಷ್ಟಿಯಿಂದ ಗಿಡಗಳನ್ನು ನೆಟ್ಟು ನೀರುಣಿಸುವಿಕೆ ಸೇರಿದಂತೆ ಪರಿಸರ ಸಂರಕ್ಷಣೆಗೆ ಯುವ ಸಮೂಹ ಮುಂದಾಗಬೇಕು. ವಿದ್ಯಾರ್ಥಿಗಳು ಅಮೂಲ್ಯವಾದ ಸಮಯ ವ್ಯರ್ಥಗೊಳಿಸದೇ ಸದುಪಯೋಗಪಡಿಸಿಕೊಳ್ಳಿ ಎಂದರು.

ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್ ನ ಯೋಜನಾಧಿಕಾರಿ ಪಾಂಡ್ಯ, ಉಪನ್ಯಾಸಕರಾದ ಮಲ್ಲಿಕಾರ್ಜುನಸ್ವಾಮಿ, ದೇವರಾಜು, ಹರೀಶ್, ಶಿವಣ್ಣ, ದೇವಿಕಾ, ಸೌಭಾಗ್ಯ, ನಾಗರತ್ನ, ಶಿಲ್ಪ, ಮಧು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ