ರಾಯಚೂರು: ಸಮೀಪದ ಯರಮರಸ್ ಕ್ಯಾಂಪ್‌ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಮರಳುವಾಗ ಅಪಘಾತ ಸಂಭವಿಸಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಧರಣಿ ಕುಳಿತ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಬೋಳಮಾನದೊಡ್ಡಿ ರಸ್ತೆಯಲ್ಲಿ ವಸತಿ ನಿಲಯ ಸೌಲಭ್ಯ ಕಲ್ಪಿಸಿದ್ದು, ಅಲ್ಲಿಗೆ ಹೋಗಲು ಸರಿಯಾದ ಬಸ್ ಸೌಲಭ್ಯಗಳಿಲ್ಲ. ಇದರಿಂದ ನಿತ್ಯ ಗಂಟೆಗಟ್ಟಲೇ ಬಸ್‌ಗಾಗಿ ಕಾಯಬೇಕು. ರಾಯಚೂರಿಗೆ ಹೋದ ಮೇಲೂ ಅಲ್ಲಿಂದ ಆಟೋ, ಬೈಕ್ ಇಲ್ಲವೇ ಇನ್ನಿತರ ವಾಹನಗಳಿಗೆ ಲಿಫ್ಟ್ ಕೇಳಿ ಹೋಗಬೇಕು. ಇದೇ ರೀತಿ ಆರು ವಿದ್ಯಾರ್ಥಿಗಳು ಟಂಟಂನಲ್ಲಿ ಹೋಗುವಾಗ ಆಟೋ ಪಲ್ಟಿಯಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಬಳ್ಳಾರಿಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಇನ್ನೂ ಇಬ್ಬರು ವಿದ್ಯಾರ್ಥಿಗಳನ್ನು ರಿಮ್ಸ್‌ನಲ್ಲಿ ದಾಖಲಿಸಲಾಗಿದೆ. ಮತ್ತಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಕಾಲೇಜಿಗೆ ಬರಬೇಕಿದೆ ಎಂದರು.ಕಾಲೇಜಿನ ಹಿಂಭಾಗದಲ್ಲಿ ಬಾಲಕ ಬಾಲಕಿಯರಿಗಾಗಿ ದೊಡ್ಡ ವಸತಿ ನಿಲಯ ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡುವ ಬದಲು ಐಐಐಟಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇದರಿಂದ ಕಾಲೇಜಿನ ವಿದ್ಯಾರ್ಥಿಗಳು ಸುಮಾರು 12 ಕಿಮೀ ದೂರದ ವಸತಿ ನಿಲಯಗಳಿಗೆ ಹೋಗಿ ಬರುವಷ್ಟರಲ್ಲಿ ಹೈರಾಣಾಗುತ್ತಿದ್ದಾರೆ. ಈ ಕೂಡಲೇ ಐಐಐಟಿ ವಿದ್ಯಾರ್ಥಿಗಳಿಗೆ ನೀಡಿರುವ ವಸತಿ ನಿಲಯಗಳನ್ನು ಮರಳಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿನ ಆವರಣದಲ್ಲಿಯೇ ವಿದ್ಯಾರ್ಥಿಗಳು ಬಹಳ ಹೊತ್ತು ಧರಣಿ ನಡೆಸಿದರು. ಕಾಲೇಜಿನ ಬೋಧಕ ವೃಂದ ಹೋರಾಟ ಕೈ ಬಿಡಲು ತಿಳಿಸಿದರು ಒಪ್ಪದೇ ಪ್ರತಿಭಟನೆ ಮುಂದುವರಿಸಿದರು. ಮಂಗಳವಾರವೂ ಹೋರಾಟ ನಡೆಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಇತ್ಯರ್ಥ ಪಡಿಸಬೇಕು. ಇಲ್ಲವಾದರೆ ಡಿಸಿ ಕಚೇರಿ ಬಳಿ ಹೋರಾಟ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.