ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ 8ನೇ ತರಗತಿಯ 40 ವಿದ್ಯಾರ್ಥಿಗಳು ಗುರುವಾರ ರಾತ್ರಿ ಪಟ್ಟಣದ ಬಿಇಒ ಕಚೇರಿಗೆ ತಮ್ಮ ಪಾಲಕರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಇಟಗಿ ಗ್ರಾಮದ ಅನುದಾನಿತ ಶಿಕ್ಷಣ ಸಂಸ್ಥೆಯವರು ತಮಗೆ ವರ್ಗಾವಣೆ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿದ್ದಾರೆಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಇಟಗಿಯ ಗ್ರಾಮಸ್ಥರು, ಕರವೇ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಬಿಇಒ ಕಚೇರಿಯಲ್ಲಿ ರಾತ್ರಿ ಊಟ ಮಾಡಿ ಪ್ರತಿಭಟಿಸಿದ ಪ್ರತಿಭಟನಾಕಾರರು ತಮಗೆ ತಮ್ಮೂರಿನ ಅನುದಾನಿತ ಶಾಲೆಯಿಂದ ತಾವು ಸಧ್ಯ ಓದುತ್ತಿರುವ ಸರ್ಕಾರಿ ಶಾಲೆಗೆ ವರ್ಗಾವಣೆ ಪತ್ರ ಒದಗಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದರು.ಕರವೇ ತಾಲೂಕು ಘಟಕದ ಅಧ್ಯಕ್ಷ ವಿಠ್ಠಲ ಹಿಂಡಲಕರ ಮಾತನಾಡಿ, ಇಟಗಿ ಮತ್ತು ಅಕ್ಕಪಕ್ಕದ ಭಾಗದ ಬಡ ಮಕ್ಕಳ ಅನುಕೂಲಕ್ಕಾಗಿ ಗ್ರಾಮಸ್ಥರು ಇತ್ತೀಚೆಗೆ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ ಫಲವಾಗಿ ಇಟಗಿಯ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಣ ಇಲಾಖೆ ಈ ವರ್ಷದಿಂದ ಹೊಸದಾಗಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಆರಂಭಿಸಿದೆ. ಈ ಪ್ರೌಢಶಾಲೆಯ 8ನೇ ತರಗತಿಗೆ ಸದ್ಯ 42 ಮಕ್ಕಳು ದಾಖಲಾಗಿದ್ದಾರೆ. ಇವರ ಪೈಕಿ ಇಬ್ಬರ ವರ್ಗಾವಣೆ ಪ್ರಮಾಣಪತ್ರ ಶಾಲೆಗೆ ಬಂದಿದೆ. ಇನ್ನುಳಿದ 40 ವಿದ್ಯಾರ್ಥಿಗಳಿಗೆ ಇಟಗಿಯ ಚನ್ನಮ್ಮರಾಣಿ ಸ್ಮಾರಕ ಪ್ರೌಢಶಾಲೆಯವರು ವರ್ಗಾವಣೆ ಪ್ರಮಾಣ ಪತ್ರ ನೀಡುತ್ತಿಲ್ಲ. ವರ್ಗಾವಣೆ ಪ್ರಮಾಣಪತ್ರ ಸಿಗದ ಕಾರಣ ಈ ಮಕ್ಕಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆಯ ಪರೀಕ್ಷೆಯನ್ನು (ಎನ್.ಎಂ.ಎಂ.ಎಸ್) ಎದುರಿಸಲು ಸಮಸ್ಯೆ ಉಂಟಾಗಿದೆ. ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕರವೇ ಬಿಇಒ ಕಚೇರಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುತ್ತಿದೆ ಎಂದರು.ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆಯ ಮಾಹಿತಿ ಪಡೆಯುತ್ತಲೇ ಬಿಇಒ ಕಚೇರಿಗೆ ಆಗಮಿಸಿದ ಡಿಡಿಪಿಐ ಲೀಲಾವತಿ ಹಿರೇಮಠ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿ, ಇಟಗಿ ಪ್ರೌಢಶಾಲೆಯ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಮಕ್ಕಳ ಬೇಡಿಕೆಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ನ್ಯಾಯಾಲಯಕ್ಕೆ ಮಕ್ಕಳ ಶೈಕ್ಷಣಿಕ ಹಕ್ಕಿನ ಬಗ್ಗೆ ವಿವರಿಸಲಾಗುವುದು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟನೆಯಿಂದ ಹಿಂದೆ ಸರಿದು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಡಿಡಿಪಿಐ ಅವರ ಮನವಿಯ ಬಳಿಕ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟನೆ ಹಿಂಪಡೆದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ ಮಾತನಾಡಿ, ಇಟಗಿಯ 8ನೇ ತಗರತಿಯ ಮಕ್ಕಳು ತಮ್ಮ ಹಕ್ಕಿಗಾಗಿ ಬಿಇಒ ಕಚೇರಿಗೆ ಮುತ್ತಿಗೆ ಹಾಕಿರುವ ಸಂಗತಿ ತಿಳಿದ ಬಳಿಕ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳೊಂದಿಗೆ ಬಿಇಒ ಕಚೇರಿಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಬಿಇಒ ಮತ್ತು ಡಿಡಿಪಿಐ ಅವರೊಂದಿಗೆ ಚರ್ಚಿಸಲಾಗಿದೆ. ಮಕ್ಕಳ ಹೋರಾಟಕ್ಕೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.ಬಿಇಒ ರಾಮಪ್ಪ ಮಾತನಾಡಿ, ಇಟಗಿಯ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕಿನ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾಗಿ ಮಕ್ಕಳ ಬೇಡಿಕೆಯನ್ನು ಮತ್ತು ಅವರು ಕೈಗೊಂಡ ಪ್ರತಿಭಟನೆಯ ಸಂಗತಿಯನ್ನು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಸದ್ಯ ಈ ಪ್ರಕರಣ ನ್ಯಾಯಾಲಯದ ಮುಂದಿರುವ ಕಾರಣ ನ್ಯಾಯಾಲಯದಿಂದ ಮುಂದಿನ ಆದೇಶ ಬರುವವರೆಗೆ ಕಾಯುವಂತೆ ಮಕ್ಕಳಿಗೆ ಮತ್ತು ಪಾಲಕರಿಗೆ ತಿಳಿಹೇಳಲಾಗಿದೆ ಎಂದು ವಿವರಿಸಿದರು.ಪ್ರತಿಭಟನೆಯ ಸಂದರ್ಭದಲ್ಲಿ ಸುರೇಶ ಜಾಧವ, ಸೂರ್ಯಕಾಂತ ಕುಲಕರ್ಣಿ, ಶಂಕರ ಕಮ್ಮಾರ, ದಶರಥ ಬನೋಶಿ, ಪ್ರಸಾದ ಪಾಟೀಲ ಮತ್ತಿತರರು ಇದ್ದರು.