ಹಾನಗಲ್ ಶ್ರೀ ಶಿವಕುಮಾರಸ್ವಾಮಿಗಳ ಜಯಂತ್ಯುತ್ಸವ । ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ ಚಾಮರಾಜನಗರವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಸಂಸ್ಕಾರ ಕಲಿತು ಧರ್ಮದ ಬಗ್ಗೆ ಜಾಗೃತರಾಗಿ ಪ್ರಗತಿಯತ್ತ ಮುನ್ನಡೆಯಬೇಕು ಎಂದು ಹರವೆ ಮಠಾಧ್ಯಕ್ಷ ಶ್ರೀ ಸರ್ಪಭೂಷಣ ಸ್ವಾಮೀಜಿ ತಿಳಿಸಿದರು. ನಗರದ ಶ್ರೀ ಬಸವರಾಜಸ್ವಾಮಿಗಳ ಅನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಶ್ರೀ ಡಾ.ರಾಜೇಂದ್ರಸ್ವಾಮಿಗಳು, ಹಾನಗಲ್ ಶ್ರೀ ಶಿವಕುಮಾರಸ್ವಾಮಿಗಳ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವೇಶ್ವರರು ಸ್ಥಾಪನೆ ಮಾಡಿದ ಲಿಂಗಾಯತ ವೀರಶೈವ ಧರ್ಮವು ಇತ್ತಿಚಿನ ದಿನಗಳಲ್ಲಿ ಅರಿವಿನ ಕೊರತೆಯಿಂದ ಹಿನ್ನಡೆಯಾಗುತ್ತಿದೆ. ೧೨ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಹಾಗೂ ಶರಣರು ನಮಗಾಗಿ ಲಿಂಗಾಯತ ಧರ್ಮವನ್ನು ನೀಡಿದ್ದಾರೆ. ಅದರ ಅಚಾರ, ವಿಚಾರಗಳು ಸಹ ನಮ್ಮ ಅಭಿವೃದ್ದಿಗೆ ಪೂರಕವಾಗಿದೆ. ಆದರೂ ಸಹ ನಮ್ಮ ಧರ್ಮದ ಬಗ್ಗೆ ತಾತ್ಸಾರ ಮನೋಭಾವನೆ ಸಲ್ಲದು, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜೊತೆಗೆ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ, ನಮ್ಮ ಸಮಾಜದ ಬಗ್ಗೆ ಹೆಮ್ಮೆ ಬರುವಂತೆ ಮಾಡಬೇಕು. ವಿದ್ಯಾರ್ಥಿಗಳಾದ ತಾವುಗಳ ಸಹ ಶಿಕ್ಷಣ ಪಡೆದರೆ ಸಾಲದು, ಧರ್ಮ ಜಾಗೃತಿ ಬೆಳೆಸಿಕೊಳ್ಳಬೇಕು. ತಂದೆ ತಾಯಿಗಳ ಮಾತಿಗೆ ಬೆಲೆ ಕೊಡುವ ಜೊತೆ ಅವರನ್ನು ಸುಖವಾಗಿಡುವ ಪ್ರಯತ್ನ ನಿಮ್ಮದಾಗಬೇಕು.ಮರಿಯಾಲ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಮ್ಮ ಸಾಧನೆಯನ್ನು ನೋಡಿ ಪ್ರೋತ್ಸಾಹಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇಂಥ ಧರ್ಮದ ಬಗ್ಗೆ ತಾವೆಲ್ಲರು ಋಣಿಗಳಾಗಿರಬೇಕು. ಇತರರಿಗೆ ಮಾದರಿಯಾಗಿ ಬೆಳೆಯಬೇಕು. ನಮ್ಮ ಧರ್ಮ, ಸಂಸ್ಕೃತಿ, ಅಚಾರ ವಿಚಾರಗಳನ್ನು ಬಿಟ್ಟುಕೊಡಬಾರದು. ಎಲ್ಲಾ ರಂಗದಲ್ಲಿಯೂ ನಮ್ಮದೇ ಧರ್ಮದ ಛಾಪು ಮೂಡಿಸುವ ಜೊತೆಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಪಡೆದ ೧೭೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ವೇದಿಕೆಯಲ್ಲಿ ನಗರ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ, ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನಾಗೇಂದ್ರ, ತಾಲೂಕು ಅಧ್ಯಕ್ಷರಾದ ಹಂಗಳ ನಂಜಪ್ಪ. ಹೊಸೂರು ನಟೇಶ್, ಕೆ.ಎಂ. ಬಸವರಾಜಪ್ಪ, ಬಿ. ಮಹದೇವಪ್ರಸಾದ್, ಪುಟ್ಟಸುಬ್ಬಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಪ್ರಭುಸ್ವಾಮಿ, ಬಿ. ರತ್ನಮ್ಮ, ಖಜಾಂಚಿ ಬಸವರಾಜು, ಕಾರ್ಯದರ್ಶಿ ಕೆ.ಎಂ. ಮಲ್ಲೇಶಪ್ಪ, ಲೋಕೇಶ್ ಕೆ.ಅರ್. , ವೀರಭದ್ರಸ್ವಾಮಿ, ಎನ್.ಆರ್. ಪುರುಷೋತ್ತಮ್, ಕಾಡಹಳ್ಳಿ ಮಧು, ನಿರಂಜನಮೂರ್ತಿ, ಪ್ರಮೋದ್, ರತ್ನಮ್ಮ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ಜೆಎಸ್‌ಎಸ್ ಪಿಆರ್‌ಓ ಆರ್.ಎಂ ಸ್ವಾಮಿ ಮೊದಲಾದವರು ಇದ್ದರು.