ಕಲಿಕೆ, ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಸ್ವತಂತ್ರ ನಿರ್ಧಾರ ಕೈಗೊಳ್ಳಿ

KannadaprabhaNewsNetwork | Published : Dec 26, 2023 1:30 AM

ಸಾರಾಂಶ

ವೃತ್ತಿ ಜೀವನದ ಮಾರ್ಗದರ್ಶಿ ತರಬೇತಿ ಉದ್ಘಾಟಿಸಿದ ಉಪನ್ಯಾಸಕ ಎಸ್.ಆರ್. ನಾಯ್ಕ್ ಮಾತನಾಡಿ ಕಲಿಕೆ, ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಸ್ವತಂತ್ರ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಗ್ರಾಮೀಣ ಭಾಗದ ಮಕ್ಕಳಿಗೆ ಈ ತರಬೇತಿ ತುಂಬಾ ಅವಶ್ಯಕವಾಗಿದೆ. ಪಿಯುಸಿ ಮುಗಿದ ಮೇಲೆ ಮುಂದೆ ಏನು ಮಾಡಬೇಕು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಇರುತ್ತದೆ. ನಿಮ್ಮ ಗುರಿ ಮತ್ತು ನಿಮ್ಮ ವೃತ್ತಿಯನ್ನು ನೀವೇ ಆಯ್ಕೆ ಮಾಡಿಕೊಳ್ಳುವುದು ತರಬೇತಿಯ ಉದ್ದೇಶವಾಗಿದೆ. ಈ ತರಬೇತಿ ನಿಮ್ಮ ಮುಂದಿನ ಕಲಿಕೆ ಮತ್ತು ವೃತ್ತಿಯ ಆಯ್ಕೆಗೆ ಮಾರ್ಗದರ್ಶನವಾಗಲಿದೆ ಎಂದು ಉಪನ್ಯಾಸಕ ಎಸ್.ಆರ್. ನಾಯ್ಕ್ ಹೇಳಿದರು.

ಪಟ್ಟಣದ ಎ.ಬಿ.ಸಾಲಕ್ಕಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಶಿಕ್ಷಣ ಯಾತ್ರೆ ಯೋಜನೆಯ ಅಡಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ವೃತ್ತಿ ಜೀವನದ ಮಾರ್ಗದರ್ಶಿ ಎಂಬ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ. ಸಾಲಕ್ಕಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ.ಎಂ. ಪಾಟೀಲ ಮಾತನಾಡಿ, ತರಬೇತಿ ನಿಮ್ಮ ವೃತ್ತಿ ಜೀವನ ಬದಲಾಯಿಸಬಲ್ಲದು. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಭವಿಷ್ಯ ಕಟ್ಟುತ್ತದೆ ಎಂದರು.

ಉಜ್ವಲ ಸಂಸ್ಥೆ ನಿಸ್ವಾರ್ಥ ಸೇವೆಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ ವೃತ್ತಿ ತರಬೇತಿಯಂತಹ ಹಲವು ಕಾರ್ಯಕ್ರಮ ನೀಡುತ್ತಿದೆ. ಈ ತರಬೇತಿ ನಿಮ್ಮ ಜೀವನದ ಉತ್ತಮ ಆಯ್ಕೆಯಾಗಿದೆ. ನಿರ್ದಿಷ್ಟ ಗುರಿಯೊಂದಿಗೆ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಭವಿಷ್ಯ ಉತ್ತಮವಾಗಲಿದೆ ಎಂದರು,

ಉಜ್ವಲ ಸಂಸ್ಥೆ ಸಂಯೋಜಕ ಸಾಗರ. ಎಸ್. ಘಾಟಗೆ ಮಾತನಾಡಿ, ಶಿಕ್ಷಣ ಸಮುದ್ರದಷ್ಟು ಆಳ ವಿಶ್ವದಷ್ಟು ವಿಶಾಲವಾದದ್ದು. ಮಕ್ಕಳಲ್ಲಿ ಹುದುಗಿದ ಪ್ರತಿಭೆ ಅನಾವರಣಗೊಳಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳು ಯಾರ ಒತ್ತಾಯಕ್ಕೂ ಒಳಗಾಗದೆ ತಮ್ಮ ಕಲಿಕಾ ವಿಷಯ ಹಾಗೂ ವೃತ್ತಿ ತಾವೇ ಆಯ್ಕೆ ಮಾಡಿಕೊಳ್ಳುವುದಾದು ಹಾಗೂ ಕಲಿತ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕೆನ್ನುವುದು ವೃತ್ತಿ ಜೀವನದ ಮಾರ್ಗದರ್ಶಿಯ ಉದ್ದೇಶ. ನಿಮಗೆ ಸಿಕ್ಕಿರುವ ಸಮಯ ಕಲಿಕೆಯಲ್ಲಿ ತೊಡಗಿಸಿಕೊಂಡು ಸತತ ಪ್ರಯತ್ನ ಮಾಡಿ. ನಿಮಗಾಗಿ ನಿಮ್ಮ ಪಾಲಕರು ಪಡುವ ಶ್ರಮವನ್ನು ನೆನಪಿಸಿಕೊಂಡು ಸಾಧನೆ ಮೂಲಕ ಮಾದರಿ ವ್ಯಕ್ತಿಯಾಗಿ ಜೀವನ ನಡೆಸಬೇಕು ಎಂದು ಹೇಳಿದರು.

ಸಮುದಾಯ ಸಂಘಟಕ ಜಿ.ಜಿ. ಬಿರಾದಾರ ತರಬೇತಿ ನಡೆಸಿಕೊಟ್ಟರು. ಭಾಗಣ್ಣ ಹಾಳಕಿ ನಿರೂಪಿಸಿ, ವಂದಿಸಿದರು. ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article