ವಿದ್ಯಾರ್ಥಿಗಳಿಗೆ ಮುಕ್ತ ಕಲಿಕೆಯ ವಾತಾವರಣ ಅಗತ್ಯ

KannadaprabhaNewsNetwork | Published : Aug 11, 2024 1:33 AM

ಸಾರಾಂಶ

ವಿಭಿನ್ನ ಜ್ಞಾನ ಶಿಸ್ತುಗಳ ನಡುವಿನ ಗೋಡೆಗಳು ನಶಿಸಿ ಹೋಗುತ್ತಿರುವ ಕಾಲದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ತುಮಕೂರು ವಿಭಿನ್ನ ಜ್ಞಾನ ಶಿಸ್ತುಗಳ ನಡುವಿನ ಗೋಡೆಗಳು ನಶಿಸಿ ಹೋಗುತ್ತಿರುವ ಕಾಲದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ರಾಜಾರಾಮ ತೋಳ್ಪಾಡಿ ಹೇಳಿದರು.

ನಗರದ ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ‘ಸಂರಚನಾ ವಾದ ಮತ್ತು ಸಂರಚನೋತ್ತರವಾದ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನ ಅಗಾಧವಾದ್ದರಿಂದ ಅದು ಯಾವ ಮೂಲದಿಂದ ಬಂದರೂ ಅದನ್ನು ತೆರೆದ ಮನಸ್ಸಿನಿಂದ ಸ್ವೀಕರಿಸದೆ ಹೋದರೆ ನಮ್ಮ ಆಲೋಚನೆಗಳು ಕುಬ್ಜ ವಾಗುತ್ತವೆ. ಹಾಗಾಗಿ ಇಂದಿನ ವಿಶ್ವವಿದ್ಯಾನಿಲಯಗಳು ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಈ ಬಗೆಯ ಮುಕ್ತ ಕಲಿಕೆಯ ವಾತಾವರಣ ಇರಬೇಕು ಎಂದರು.

ಸಂರಚನಾವಾದ ಮತ್ತು ಸಂರಚನೋತ್ತರ ವಾದಗಳನ್ನು ಕೇವಲ ಪಾಶ್ಚಾತ್ಯ ಚಿಂತನೆಗಳೆಂದು ಪರಿಗಣಿಸಬೇಕಿಲ್ಲ. ಏಕೆಂದರೆ ಜ್ಞಾನಕ್ಕೆ ಭೌಗೋಳಿಕತೆಯ ಸೀಮಿತ ವ್ಯಾಪ್ತಿ ಇಲ್ಲ. ನಮ್ಮ ವೈಯಕ್ತಿಕ ಸಂಬಂಧಗಳಿಂದ ಹಿಡಿದು ವಿಶ್ವವಿದ್ಯಾನಿಲಯದ ತರಗತಿಗಳವರೆಗೂ ಒಂದಲ್ಲ ಒಂದು ಬಗೆಯ ರಚನೆ ಇರುವುದನ್ನು ಗಮನಿಸಬಹುದು ಎಂದರು.

ನಮ್ಮ ಬದುಕಿನ ಪ್ರತಿಯೊಂದು ವಲಯಗಳಲ್ಲೂ ಅಧಿಕಾರ ಕೇಂದ್ರಿತವಾದ ಭಿನ್ನ ಸ್ತರದ ಸಂರಚನೆಗಳು ಇದ್ದೇ ಇರುತ್ತವೆ. ಇವುಗಳನ್ನು ಕೂಲಂಕಷವಾಗಿ ಅರಿತುಕೊಳ್ಳುವುದು ಸಂಶೋಧನೆಯಲ್ಲಿ ಮುಖ್ಯವಾದದ್ದು. ಸಂರಚನಾವಾದ ಅರ್ಥ ವಿವರಣಾಶಾಸ್ತ್ರದ ಮತ್ತೊಂದು ಮಗ್ಗಲು. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅರ್ಥದ ಸಮಸ್ಯೆ ಇದ್ದೇ ಇರುತ್ತದೆ ಎಂದು ತಿಳಿಸಿದರು.ಅರ್ಥ ಎಂಬುದು ಕೇವಲ ಪಠ್ಯದ ಒಳಗಷ್ಟೇ ಇರದೆ, ಪ್ರತಿ ಓದುಗನ ಸಾಮಾಜಿಕ ಸ್ತರದಲ್ಲು ಇರುತ್ತದೆ. ಸಂರಚನಾವಾದವನ್ನು ನಿರಾಕರಿಸದೆ ಅದರ ಕೆಲವು ಮೂಲಭೂತ ಚಿಂತನೆಗಳನ್ನು ವಿಮರ್ಶಿಸುವ ಮೂಲಕ ಸಂರಚನೋತ್ತರವಾದ ಹುಟ್ಟಿಕೊಂಡಿತು ಎಂದು ತಿಳಿಸಿದರು. ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ಭಾಷಾ ವಿಜ್ಞಾನಿಗಳಿಂದ ಹಿಡಿದು ಜಗತ್ತಿನ ವಿವಿಧ ವಲಯಗಳ ಜನ ಸಂರಚನೆ ಎಂಬುದರ ಬಗ್ಗೆ ಚಿಂತಿಸಿದ್ದಾರೆ. ಇದೊಂದು ಬಹು ದೊಡ್ಡ ತಾತ್ವಿಕ ಜಿಜ್ಞಾಸೆಯು ಹೌದು. ಭಾಷೆಗೆ ಸಂಬಂಧಿಸಿದಂತೆ ಮೂಲಭೂತವಾಗಿ ನಡೆದ ಈ ಚರ್ಚೆ ಸಾಮಾಜಿಕವಾಗಿ ನಮ್ಮ ನಡುವಿರುವ ಬೃಹತ್ ವಾಗ್ವಾದವೂ ಹೌದು ಎಂದರು.ವಿವಿಯ ಸಾರ್ವಜನಿಕ ಆಡಳಿತ ವಿಭಾಗದ ಸಹಪ್ರಾಧ್ಯಾಪಕ ಡಾ.ಕೆ. ಸಿ. ಸುರೇಶ ಮತ್ತು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article