ಕನ್ನಡಪ್ರಭ ವಾರ್ತೆ ಹುಣಸೂರು
ವಿದ್ಯಾರ್ಥಿಗಳು ನೋಡುವ ಸಂಸ್ಕೃತಿಯನ್ನು ತ್ಯಜಿಸಿ ಮತ್ತೆ ಓದುವ ಸಂಸ್ಕೃತಿಗೆ ಮರಳುವ ಅಗತ್ಯತೆ ಇದೆ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕನ್ನಡ ವಿಭಾಗದ ವತಿಯಿಂದ ಮೈಸೂರಿನ ಯದುನಂದನ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಕಾಲೇಜು ಗ್ರಂಥಾಲಯಕ್ಕೆ ಉಚಿತವಾಗಿ 200ಕ್ಕೂ ಹೆಚ್ಚು ಪುಸ್ತಕಗಳ ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಓದುವ ಹವ್ಯಾಸ ಸಹಜವಾಗಿ ಎಲ್ಲರಲ್ಲೂ ಇತ್ತು. ವಿದ್ಯಾರ್ಥಿಜೀವನದಲ್ಲಿ ಮಹನೀಯರ ಜೀವನಗಾಥೆ, ನಾಟಕ, ಕಲೆ,ಸಾಹಿತ್ಯ, ಸಂಸ್ಕೃತಿ, ಪ್ರಚಲಿತ ವಿದ್ಯಮಾನ ಎಲ್ಲವನ್ನೂ ಓದುತ್ತಿದ್ದರು. ಆದರೆ ಇದೀಗ ಆಧುನಿಕ ತಂತ್ರಜ್ಞಾನ ನಮಗೆ ಬೆರಳ ತುದಿಯಲ್ಲೇ ಮಾಹಿತಿಯನ್ನು ನೀಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಕೇಳುವ ಮತ್ತು ನೋಡುವ ಸಂಸ್ಕೃತಿಗೆ ಸಿಕ್ಕುಬಿದ್ದಿದ್ದಾರೆ ಎಂದು ವಿಷಾದಿಸಿದರು.ವಿದ್ಯಾರ್ಥಿ ಜೀವನದಲ್ಲಿ ಪುಸ್ತಕವನ್ನು ಓದುವುದೇ ಒಂದು ದೊಡ್ಡ ಗುರಿಯಾಗಬೇಕು. ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಮಹಾತ್ಮರ ಜೀವನ ಚರಿತ್ರೆ ಓದಬೇಕು. ನಮ್ಮ ಬದುಕಿಗೆ ಅಲ್ಲಿ ಅನೇಕ ಮಾರ್ಗಗಳಿರುತ್ತದೆ. ಕಲೆ,ಕ್ರೀಡೆ,ಇತಿಹಾಸ,ಸ್ಪರ್ಥಾತ್ಮಕ ಪರಿಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು ಎಂದು ಅವರು ಹೇಳಿದರು.
ಗೂಗಲ್, ಯೂಟ್ಯೂಬ್ ಇದರಲ್ಲಿ ಕ್ಷಣಿಕವಾದ ಮಾಹಿತಿ ಸಿಗುತ್ತದೆ. ನಮಗೆ ಶಾಶ್ವತವಾದ ಮಾಹಿತಿ ಬರಹಗಳೆ, ಅಂತಹ ಬರಹಗಳನ್ನು ನಾವು ಹುಡುಕಿಕೊಂಡು ಓದುಬೇಕು. ಓದುವ ಸಂಸ್ಕೃತಿಗೆ ನಾವು ಮತ್ತೆ ಮತ್ತೆ ಮೈಗೂಢಿಸಿಕೊಳ್ಳಬೇಕು ಜಗತ್ತಿನ ವಿಶ್ವಜ್ಞಾನಿಯೆಂದು ಕೀರ್ತಿ ಪಡೆದ ಡಾ.ಬಿ.ಆರ್.ಅಂಬೇಡ್ಕರ್ ರವರು ಪುಸ್ತಕವನ್ನುಹೆಚ್ಚು ಹೆಚ್ಚು ಓದುವ ಮೂಲಕ ಜ್ಞಾನಿಯಾದರು, ವಿಶ್ವದ ಜ್ಞಾನಿಯ ದಿನವನ್ನು ಆಚರಿಸುತ್ತಾರೆ. ಚಿನ್ನ,ಸಂಪತ್ತು,ವಸ್ತುವನ್ನು ಕಳುಮಾಡಬಹುದು,ಆದರೆ ಜ್ಞಾನವನ್ನು ಯಾರು ಕದಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡ ಭಾಷೆಯ ಕೃತಿಗಳಿಗೆ ಬರಹ, ಗ್ರಂಥ, ಪುಸ್ತಕಕ್ಕೆ ಎಷ್ಟು ಮಹತ್ವವಿದೆ ಎಂಬುದು ಇದರಿಂದ ತಿಳಿಯುತ್ತದೆ. ಹಿಂದೆ ಹೆಣ್ಣು ಮಕ್ಕಳು ಕಥೆ,ಕಾದಂಬರಿಯನ್ನು ಓದುವ ಮೂಲಕ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಳ್ಳುತ್ತಿದ್ದರು,ಇಂದು ಬದುಕಿನ ಪರೀಕ್ಷೆ ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಯ ಮೇಲೆ ನಿಂತಿದೆ. ಅದನ್ನು ಓದಿ ಪಾಸಾದರೆ ನಿಮ್ಮ ಬದುಕು ಕೂಡ ಉತ್ತೀಣವಾದಂತೆ ಎಂದು ಅವರು ಹೇಳಿದರು.
ಮನುಷ್ಯನ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಓದುವ ಹವ್ಯಾಸ ಮಾತ್ರ ಉತ್ತಮ ವೇದಿಕೆಯಾಗಬಲ್ಲದು. ಓದು ಜ್ಞಾನದ ಬೆಳಕನ್ನು ನೀಡುತ್ತದೆ. ಯಾರೂ ಕದಿಯಲಾಗದ ಸಂಪತ್ತು ವಿದ್ಯೆ. ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಸಲಹೆ ಮಾಡಿದರು.ಯದುನಂದನ ಪ್ರಕಾಶನವು ವಿದ್ಯಾರ್ಥಿಗಳಿಗಾಗಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿರುವ ಉದ್ದೇಶ ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳಸಿಕೊಳ್ಳಿರಿ ಎನ್ನುವುದಾಗಿದೆ. ವಿವಿಧ ಪ್ರಾಕಾರಗಳ ಪುಸ್ತಕ ನಿಮ್ಮ ಗೆಳೆಯರಾಗಲಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದ ಸಾಧಕರು ತಾವು ಪುಸ್ತಕ ಓದಿ ಜ್ಞಾನ ಸಂಪಾದಿಸಿ ಸಾಧನೆಗೈದಿದ್ದಾಗಿ ತಿಳಿಸುತ್ತಾರೆಯೇ ಹೊರತು ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನಲ್ಲ ಎನ್ನುತ್ತಾರೆ. ಓದುವ ಪ್ರವೃತ್ತಿ ಹೊಂದಿದವರು ಉದ್ಯೋಗ ಸಂದರ್ಶನದ ವೇಳೆ ಅವರ ಸ್ಫುಟಮಾತು, ಕ್ರಿಯಾಶೀಲ ಯೋಚನೆಗಳು ಸರಾಗವಾಗಿ ಹೊರಬರಲು ಸಾಧ್ಯವಿದೆ ಎಂದರು.
ಯದುನಂದನ ಪ್ರಕಾಶನದ ಮುಖ್ಯಸ್ಥ, ಯುವ ಸಾಹಿತಿ ರಾಜೇಶ್ ಹೊನ್ನೇನಹಳ್ಳಿ ಮಾತನಾಡಿ, ಓದುವ ಹವ್ಯಾಸವಿದ್ದರೆ ಲಾಭವೇನೆಂದು ಕೇಳದಿರಿ, ಓದುವ ಪ್ರವೃತ್ತಿ ನಿಮ್ಮಲ್ಲಿದ್ದರೆ ನೀವು ಈ ಸಮಾಜಕ್ಕೆ ಒಬ್ಬ ಉತ್ತಮ ಸನ್ನಡತೆಯ ವ್ಯಕ್ತಿಯಾಗುತ್ತೀರಿ ಎನ್ನುವುದಂತೂ ಖಂಡಿತ. ಪುಸ್ಕತ ಪ್ರಕಾಶನ ಅಷ್ಟು ಸುಲಭದ ಕಾರ್ಯವಲ್ಲ. ಒಂದು ಪುಸ್ತಕ ಹೊರಬರಲು ನೂರಾರು ಕೈಗಳ ಶ್ರಮವಿದೆ. ಆ ಕುಟುಂಬಗಳ ಭವಿಷ್ಯ ಪುಸ್ತಕ ಪ್ರಕಾಶನದಲ್ಲಿದೆ. ಹಾಗಾಗಿ ನೀವು ಓದಿದಲ್ಲಿ ನಿಮ್ಮ ಜ್ಞಾನದ ವೃದ್ಧಿಯ ಜೊತೆಗೆ ಪ್ರಕಾಶನ ಕುಟುಂಬದ ಬದುಕು ಬೆಳಕಾಗುತ್ತದೆ ಎಂದರು.ಉದ್ಯಮಿ ನಿಂಗರಾಜು ಮಾತನಾಡಿ, ಸರ್ಕಾರಿ ಕೆಲಸ ಸಿಗದಿದ್ದಲ್ಲಿ ಸ್ವಯಂ ಉದ್ಯೋಗ ಆರಂಭಿಸಿ, ನೀವೇ ಬೇರೆಯವರಿಗೆ ಕೆಲಸ ನೀಡುವಂತಾಗಬೇಕು. ಯಾರಿಗಾದರೂ ಸ್ವಯಂ ಉದ್ಯೋಗ ಆರಂಭಿಸುವ ಬಗ್ಗೆ ಸಲಹೆ- ಸೂಚನೆ- ತರಬೇತಿ ಬೇಕಾದರೆ ತಾವು ನೀಡಲು ಸಿದ್ಧ ಎಂದರು.
ಪ್ರಾಂಶುಪಾಲ ಪ್ರೊ.ಎಸ್. ಮಂಜು ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ರಾಜಶೇಖರನ್, ಪುಟ್ಟಶೆಟ್ಟಿ, ಎಂ.ಆರ್. ಬಸವಲಿಂಗಸ್ವಾಮಿ, ಕೆ.ಪಿ. ಪ್ರಸನ್ನ, ಡಾ.ಕರುಣಾಕರ್, ಡಾ.ಕೆ.ಪಿ.ಪ್ರಸನ್ನ, ಪುಟ್ಟಶೆಟ್ಟಿ, ಹನುಮಂತಪ್ಪ ಬಿ.ಕೆ. ಮಂಜುನಾಥ್ ಗ್ರಂಥಪಾಲಕ ಕರುಣಾಕರ್ ಇದ್ದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.