ಹಾಸ್ಟೆಲ್‌ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Dec 09, 2023, 01:15 AM IST
ಎಚ್‌೦೮.೧೨-ಡಿಎನ್‌ಡಿ೧: ಸಮಸ್ಯೆಗಳ ಆಗರ ಹಿಂದುಳಿದ ವರ್ಗಗಳ ದೇವರಾಜ ಅರಸು ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರತಿಭಟನೆ  ನಡೆಸಿದರು.  ಕೊಳೆತ ನೀರು, ಸ್ವಚ್ಛತೆಯಿಲ್ಲದ ಊಟ ಉಪಹಾರ ಚಿತ್ರಗಳು. | Kannada Prabha

ಸಾರಾಂಶ

ಹಾಸ್ಟೆಲ್‌ನಲ್ಲಿ ಅಡುಗೆ ತಯಾರಿಸುವ ಸ್ಥಳದಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ ಹಾವು ಸತ್ತು ಕೊಳೆತಿದೆ. ಇದನ್ನು ಯಾರು ಗಮನಿಸಿಲ್ಲ, ಅದೇ ನೀರನ್ನು ಅಡುಗೆಗೂ ಬಳಸಿದ್ದಾರೆ. ಬದಲಾದ ನೀರಿನ ರುಚಿ ಹಾಗೂ ದುರ್ವಾಸನೆ ಬರುತ್ತಿರುವುದನ್ನು ಸಹಿಸಲಾಗದೆ ವಿದ್ಯಾರ್ಥಿಗಳು ಪರಿಶೀಲಿಸಿದಾಗ ಹಾವು ಟ್ಯಾಂಕಿನಲ್ಲಿ ಸತ್ತಿರುವುದು ಕಂಡುಬಂದಿದೆ.

ದಾಂಡೇಲಿ:

ನಗರದ ಅಂಬೇವಾಡಿಯಲ್ಲಿ ಇರುವ ಹಿಂದುಳಿದ ವರ್ಗಗಳ ದೇವರಾಜ ಅರಸು ವಸತಿ ಶಾಲೆಯ ವಿದ್ಯಾರ್ಥಿಗಳು ತಮಗೆ ಆಗುತ್ತಿರುವ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ಹಿಂದಿನಿಂದಲೂ ಕೆಲವೊಂದು ಅವ್ಯವಸ್ಥೆಗಳ ಆಕ್ಷೇಪ ಈ ಹಾಸ್ಟೆಲ್‌ನಲ್ಲಿ ಇತ್ತು. ಆದರೆ ಇದೀಗ ವಾರ್ಡ್‌ನಾಗಿ ಚಿದಾನಂದ ಚಿಕ್ಕೋಪ್ಪ ಬಂದಿದ್ದು ಅವರ ನಿರ್ಲಕ್ಷ ಮತ್ತು ವಿದ್ಯಾಥಿರ್ಘಗಳ ಜತೆಗಿನ ಸಮನ್ವಯದ ಕೊರತೆಯಿಂದಾಗಿ ಸಮಸ್ಯೆಗಳು ಹೆಚ್ಚಿವೆ.

ಹಾಸ್ಟೆಲ್‌ನಲ್ಲಿ ಶುಚಿ-ರುಚಿಯಾದ ಊಟ, ಸೋಪು ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳನ್ನು ನೀಡಬೇಕು. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ವಾರ್ಡ್‌ನ ವಿರುದ್ಧ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಸ್ಪಂದಿಸಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ. ವಾರಕ್ಕೊಮ್ಮೆ ಮಾತ್ರ ಹಾಸ್ಟೆಲ್‌ಗೆ ಬರುವ ವಾರ್ಡ್‌ನ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಏನಾದರೂ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಓದಲೆಂದು ತಂದೆ-ತಾಯಿ ಹಾಗೂ ಮನೆ ಬಿಟ್ಟು ಬಂದಿರುವ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾಗಿರುವುದು ವಾರ್ಡ್‌ನ ಕರ್ತವ್ಯ. ಆದರೆ ಅದ್ಯಾವುದರ ಬಗ್ಗೆ ಗಮನ ಹರಿಸದ ವಾರ್ಡನ್ ಅಂದೋ ಇಂದೋ ಬಂದು ಹೋಗುತ್ತಿದ್ದಾರೆ ಎಂದು ದೂರಿದ್ದಾರೆ.ನೀರಿನ ಟ್ಯಾಂಕ್‌ನಲ್ಲಿ ಸತ್ತ ಹಾವು:ಹಾಸ್ಟೆಲ್‌ನಲ್ಲಿ ಅಡುಗೆ ತಯಾರಿಸುವ ಸ್ಥಳದಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ ಹಾವು ಸತ್ತು ಕೊಳೆತಿದೆ. ಇದನ್ನು ಯಾರು ಗಮನಿಸಿಲ್ಲ, ಅದೇ ನೀರನ್ನು ಅಡುಗೆಗೂ ಬಳಸಿದ್ದಾರೆ. ಬದಲಾದ ನೀರಿನ ರುಚಿ ಹಾಗೂ ದುರ್ವಾಸನೆ ಬರುತ್ತಿರುವುದನ್ನು ಸಹಿಸಲಾಗದೆ ವಿದ್ಯಾರ್ಥಿಗಳು ಪರಿಶೀಲಿಸಿದಾಗ ಹಾವು ಟ್ಯಾಂಕಿನಲ್ಲಿ ಸತ್ತಿರುವುದು ಕಂಡುಬಂದಿದೆ. ಈ ಕುರಿತು ವಾರ್ಡ್‌ನ ಹತ್ತಿರ ಕೇಳಿದರೆ ಈ ನೀರನ್ನು ಬಳಸುತ್ತಿಲ್ಲ ಎನ್ನುತ್ತಾರೆ. ಬಿಸಿಎಂ ಹಾಸ್ಟೆಲ್‌ನಲ್ಲಿ ಊಟ, ವಸತಿ, ನೀರು ಸೇರಿದಂತೆ ಹಲವು ಸಮಸ್ಯೆಗಳಿದ್ದರೂ ಆ ಬಗ್ಗೆ ವಾರ್ಡ್‌ನ ಬಳಿ ಹೇಳಿಕೊಂಡರು ಪರಿಹಾರ ಸಿಗದೆ ಇದ್ದಾಗ ವಿದ್ಯಾರ್ಥಿಗಳು ತಹಸೀಲ್ದಾರ್‌ ಕಚೇರಿಗೆ ಬಂದು ಹಠಾತ ಪ್ರತಿಭಟನೆ ನಡೆಸಿದ್ದಾರೆ.ವಿಷಯ ತಿಳಿದು ಹಾಸ್ಟೆಲ್‌ಗೆ ಬಂದ ತಹಸೀಲ್ದಾರ್‌ ಶೈಲೇಶ ಪರಮಾನಂದ, ನಗರಸಭೆ ಸದಸ್ಯ ಸಂಜಯ ನಂದ್ಯಾಳಕರ ಅವರು ಹಾಸ್ಟೆಲ್‌ ಅವ್ಯವಸ್ಥೆಯ ಮಾಹಿತಿ ಪಡೆದು ಯಾವುದೇ ಕಾರಣಕ್ಕೂ ಈಗ ತಯಾರಿಸುವ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡದಂತೆ, ಹೊರಗಡೆಯಿಂದ ಆಹಾರ ತಂದು ನೀಡುವಂತೆ ವಾರ್ಡನ್‌ಗೆ ನಿರ್ದೇಶಿಸಿದ್ದಾರೆ. ನಂತರ ತಹಸೀಲ್ದಾರ್‌ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಬಳಿ ಬಂದು ಮಾಹಿತಿ ಪಡೆದು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ