ಯಲಬುರ್ಗಾ: ಪೊಲೀಸ್ ಠಾಣೆ ಎಂದರೆ ಯಾರೂ ಭಯಪಡುವ ಅಗತ್ಯವಿಲ್ಲ. ಯಾವುದೇ ಅಕ್ರಮ ಚಟುವಟಿಕೆ, ಘಟನೆಗಳು ನಡೆದಿದ್ದರೆ ಅವುಗಳನ್ನು ನಿರ್ಭಯವಾಗಿ ಬಂದು ದೂರು ನೀಡುವ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು ಎಂದು ಪಿಎಸ್‌ಐ ವಿಜಯ ಪ್ರತಾಪ್ ಹೇಳಿದರು.ಪಟ್ಟಣದ ಠಾಣೆಯಲ್ಲಿ ಮುಧೋಳ, ಕರಮುಡಿ, ಸಂಕನೂರ, ಹಿರೇಮ್ಯಾಗೇರಿ ಗ್ರಾಮದ ಆಯ್ದ ಮಕ್ಕಳಿಗೆ ಮಕ್ಕಳ ಸಾಹಿತ್ಯ ಸಂಭ್ರಮದ ಒಂದು ಭಾಗವಾಗಿ ನಾನು ರಿಪೋರ್ಟರ್ ಎಂಬ ಮಾಹಿತಿ ಮೇರೆಗೆ ಠಾಣೆಗೆ ಬಂದಿದ್ದ ಮಕ್ಕಳಿಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಪೊಲೀಸ್ ಠಾಣೆ ಇರುವುದೇ ಜನರ ರಕ್ಷಣೆ ಮತ್ತು ಸೇವೆಗಾಗಿ ಇರುವ ವಿಶ್ವಾಸ ಕೇಂದ್ರವಾಗಿದೆ ಎಂದರು.
ಪೊಲೀಸ್ ಇಲಾಖೆ ಇತ್ತೀಚೆಗೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಜನಸ್ನೇಹಿ ವಾತವರಣ ಸೃಷ್ಟಿ ಮಾಡುತ್ತಿದ್ದೇವೆ. ಪಠ್ಯಪುಸ್ತಕದ ಜೊತೆಗೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ತಿಳಿವಳಿಕೆ ಹೊಂದಬೇಕು. ಬಹಳ ಜನರು ಇಂದಿಗೂ ಪೊಲೀಸ್ ಠಾಣೆ ಎಂದರೆ ಭಯಪಡುತ್ತಾರೆ. ಸಮುದಾಯದಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಒಡನಾಟ ಒಳ್ಳೆಯದಲ್ಲ, ಅವರಲ್ಲಿ ಅನುಮಾನಾಸ್ಪದ ನಡೆ ಕಂಡುಬಂದಲ್ಲಿ ಮೊದಲು ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದರು.ಮಕ್ಕಳ ಮನಸ್ಸಲ್ಲಿ ಪೋಲಿಸರು ಎಂದರೆ ಭಯ ಎನ್ನುವುದು ಬರಬಾರದು. ನಾವು ನಿಮ್ಮಂತೆಯೇ ಮನುಷ್ಯರೇ. ಆದರೆ ತಪ್ಪು ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಲು ಹಾಗೂ ನೊಂದವರಿಗೆ ನ್ಯಾಯ ಒದಗಿಸುವ ಕೆಲಸ ನಾವು ಮಾಡುತ್ತೇವೆ. ಅಕ್ರಮ ಚಟುವಟಿಕೆಗಳು ನಡೆದರೆ, ಅಂದರೆ ಜೂಜಾಟ, ಬೆಟ್ಟಿಂಗ್, ಮದ್ಯ ಮಾರಾಟ ಕಂಡು ಬಂದರೆ ೧೧೨ ಉಚಿತ ನಂಬರ್ ಗೆ ಕರೆ ಮಾಡಿ ದೂರು ಕೊಡಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವಂತರಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಎಸ್‌ಐ ಗುಲಾಮ್‌ಅಹಮ್ಮದ್ ಖಾಜಿ, ಎಎಸ್‌ಐ ಬಸವರಾಜ ಮಾಲಗಿತ್ತಿ, ಪೇದೆಗಳಾದ ಬಾಳನಗೌಡ, ರಾಜಕುಮಾರ, ಗುರುರಾಜ, ಮುಖ್ಯಶಿಕ್ಷಕ ಖಾದರಭಾಷಾ, ವೈ.ಬಿ. ಮೇಟಿ, ಶಿಕ್ಷಕರಾದ ಪ್ರತಿಭಾ ಗಾಣಿಗೇರ, ಪರಮೇಶ ಚಿಂತಾಮಣಿ ಇದ್ದರು.