ಕನ್ನಡಪ್ರಭ ವಾರ್ತೆ ಕಲಬುರಗಿನಿಮ್ಮ ತಂದೆ ತಾಯಿಯರು ಪಟ್ಟ ಪರಿಶ್ರಮ ವ್ಯರ್ಥ ಮಾಡದೆ ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊಂಡು ಅವರ ಕನಸನ್ನು ನನಸಾಗಿಸಿ. ಅವಿರತ ಶ್ರಮ, ಅಚಲವಾದ ಗುರಿ ಹಾಗೂ ಸತತ ಸಾಧನೆ, ಕನಸುಗಳನ್ನು ನನಸು ಮಾಡಲು ಸಹಾಯವಾಗುತ್ತವೆ. ಯಾವಾಗಲೂ ಅಪ್ರಭುದ್ಧ ವಿಚಾರಗಳನ್ನು ದೂರ ಮಾಡಿ ಸಮಾಜಕ್ಕೆ ಬೆಳಕಾಗಿ ಎಂದು ಮೈಸೂರಿನ ವಿಶ್ರಾಂತ ಮುಖ್ಯ ಇಂಜಿನಿಯರ್ ಹಾಗೂ ಆಧ್ಯಾತ್ಮ ಚಿಂತಕರಾದ ಶಂಕರ ದೇವನೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶರಣಬಸವ ವಿವಿ ದೊಡ್ಡಪ್ಪ ಸಭಾಮಂಟಪದಲ್ಲಿ ಐ.ಕ್ಯೂ.ಎ.ಸಿ ಆಶ್ರಯದೊಂದಿಗೆ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಕನ್ನಡ, ಇಂಗ್ಲಿಷ್ ಮತ್ತು ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ತಾತ್ವಿಕತೆಯ ನೆಲೆಗಟ್ಟಿನಲ್ಲಿ ತಾಂತ್ರಿಕತೆಯು ಅರಳಲಿ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ತಾಂತ್ರಿಕತೆ ಯಾವಾಗಲೂ ತಾತ್ವಿಕ ನೆಲಗಟ್ಟಿನ ಮೇಲೆ ಅರಳಬೇಕು. ನಾವುಗಳು ಬರಿ ಕಣ್ಣು ತೆರೆದರೆ ಸಾಲದು ಒಳ್ಳೆಯದನ್ನು ನೋಡಬೇಕು-ಕಿವಿಗೊಟ್ಟರೆ ಸಾಲದು ಅತ್ಯುತ್ತಮವಾದುದನ್ನೇ ಕೇಳಬೇಕು. ಬರಿ ಅಂಕವೀರರಾಗುವುದಕ್ಕಿಂತ ಗುಣವೀರರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಶರಣ-ಸಂತರ ವಚನಗಳು ಬದುಕಿನ ದಿಕ್ಕನ್ನೆ ಬದಲಾಯಿಸುತ್ತವೆ. ಇಂದು ಸಂಸ್ಕಾರ, ಸಾಹಿತ್ಯ ಹಾಗೂ ಆಧ್ಯಾತ್ಮದ ಕಡೆಗೆ ಶರಣಾಗಬೇಕಾಗಿದೆ. ಮಾನವನಲ್ಲಿ ನಾಗರಿಕತೆಯೆಂಬುದು ಪರಂಪರೆಯಾಗಬೇಕು. “ಧರ್ಮವಿಲ್ಲದ ಜ್ಞಾನ ಕುರುಡು, ಜ್ಞಾನವಿಲ್ಲದ ಧರ್ಮ ಕುಂಟು” ಎಂಬಂತೆ ಈ ಧರ್ಮ ಮತ್ತು ಜ್ಞಾನ ಎರಡೂ ಸೇರಿದರೆ ಶಿಕ್ಷಣ ಹಾಗೂ ನಾಗರಿಕತೆಯ ಪ್ರವಾಹವೇ ಆಗಬಹುದು ಎಂದರು.ಶರಣಬಸವೇಶ್ವರರು ತಾವು ಬೆಳೆದ ಕಾಳುಗಳನ್ನು ಪ್ರಾಣಿ ಪಕ್ಷಿಗಳಿಗೆ ನೀಡುತ್ತಿದ್ದರು. ಅವರ ಜೀವನದ ಬಗ್ಗೆ ತಿಳಿದುಕೊಂಡು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಬೆಳಕಾಗಿ. ಸಿದ್ದರಾಮೇಶ್ವರರ ವಾಣಿ “ವಿದ್ಯೆಯೆಂಬುದು ಅಭ್ಯಾಸಿಗನ ಕೈವಶ” ಎನ್ನುವ ಹಾಗೆ ಒಳ್ಳೆಯವರಾಗಿ ಬದುಕಿ, ಜ್ಞಾನ ಸಂಪಾದಿಸಿ ಎಂದರು.
ಕನ್ನಡ ಭಾಷೆಯನ್ನು ಕೊಂಡಾಡಿ, ಕಲಿಯೋಕ್ಕೆ ನೂರು ಭಾಷೆ ಆಡುವುದಕ್ಕೆ ಒಂದೇ ಭಾಷೆ ಅದು ಕನ್ನಡ. ಕನ್ನಡಕ್ಕಿರುವ ಮೌಲ್ಯ ಬೇರೆ ಯಾವುದೇ ಭಾಷೆಗಿಲ್ಲ ಸುಂದರವಾಗಿರುವ ತಾಯಿ ಭಾಷೆ ಕನ್ನಡ. ಬೇವನ್ನು ತಿಂದು ಬೆಲ್ಲವನ್ನು ನೀಡುವ ಭಾಷೆ ಕನ್ನಡ ಎಂದು ಶಂಕರ ದೇವನೂರು ಅಭಿಪ್ರಾಯಪಟ್ಟರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಘದಡಿಯಲ್ಲಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಧ್ಯೆಯೋದ್ದೇಶವೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಮತ್ತು ಸಂಸ್ಕಾರವಂತರನ್ನಾಗಿ ಮಾಡುವುದು ಎಂದರು.
ವಿಚಾರ ಸಂಕಿರಣದಲ್ಲಿ ಶರಣಬಸವ ವಿವಿ ಸಮಕುಲಪತಿ ಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ವಿಭಾಗದ ಡಾ. ಕಲ್ಯಾಣರಾವ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ಚೆನ್ನಮ್ಮಾ ನಿರೂಪಿಸಿದರು. ಇಂಗ್ಲೀಷ ವಿಭಾಗದ ಪ್ರೊ. ಉಷಾ ಹತ್ತಿ ವಂದಿಸಿದರು.