ಕನ್ನಡಪ್ರಭ ವಾರ್ತೆ ಉಡುಪಿಛತ್ರಪತಿ ಶಿವಾಜಿ ಅವರ ಆದರ್ಶ, ಶಿಸ್ತು ಹಾಗೂ ದೇಶಾಭಿಮಾನವನ್ನು ವಿದ್ಯಾರ್ಥಿಗಳು ಮೈಗೊಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕರೆ ನೀಡಿದರು.
ತಾಯಿಯ ಪ್ರೇರಣೆಯಿಂದ ಉತ್ತಮ ವ್ಯಕ್ತಿತ್ವವನ್ನು ಮೈಗೊಡಿಸಿಕೊಂಡ ಶಿವಾಜಿಯು ಸ್ತ್ರೀಯರ ಕುರಿತು ಅಪಾರ ಗೌರವವನ್ನು ಹೊಂದಿದವರಾಗಿದ್ದು, ಇದು ಯುವಜನತೆಗೆ ಮಾದರಿಯಾಗಿದೆ ಎಂದರು.
ಶಿವಾಜಿ ಅವರ ಬಗ್ಗೆ ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಗೆರಿಲ್ಲಾ ಯುದ್ಧಗಳ ಮೂಲಕ ಶತ್ರುಗಳನ್ನು ಸದೆ ಬಡಿದು ತಮ್ಮ ಸೈನ್ಯದ ಸಂಖ್ಯೆಯನ್ನು ಏರಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅತ್ಯಂತ ಮಹತ್ವಕಾಂಕ್ಷಿ ನಾಯಕರಾಗಿದ್ದ ಶಿವಾಜಿ ಡಚ್ಚರು, ಪೋರ್ಚುಗೀಸರು ಮತ್ತು ಫ್ರೆಂಚರ ವಿರುದ್ಧ ಹೋರಾಡುವ ಮೂಲಕ ದೇಶ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಿದರು ಎಂದರು.ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಇಂದಿರಾ ಬಿ. ವಂದಿಸಿದರು.