ಧಾರವಾಡ:
ನಮ್ಮಲ್ಲಿ ಮಹಾತ್ಮರ ಪ್ರತಿಮೆ ನಿರ್ಮಿಸಲಾಗುತ್ತಿದೆ ಹೊರತು ಅವರ ವಿಚಾರಗಳನ್ನು ಅಧ್ಯಯನ ಮಾಡುತ್ತಿಲ್ಲ ಎಂದು ಹಿರಿಯ ನಟ, ಚಿಂತಕ ಎಲ್. ಅಶೋಕ ಹೇಳಿದರು.ಕರ್ನಾಟಕ ವಿವಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಅಂಗವಾಗಿ ‘ಸಾಮಾಜಿಕ ನ್ಯಾಯ ಹಾಗೂ ಭಾರತದ ಸಂವಿಧಾನ: ಡಾ. ಬಿ.ಆರ್. ಅಂಬೇಡ್ಕರ್ ದೃಷ್ಟಿಕೋನಗಳು'' ವಿಷಯದ ಕುರಿತು ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಯುವ ಸಮುದಾಯವು ಆಳವಾಗಿ ಅಧ್ಯಯನ ಮಾಡುವ ಜತೆಗೆ ಅಧ್ಯಯನ, ಆಂದೋಲನ ಮತ್ತು ಅಧಿಕಾರ ತತ್ವ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.
ಕೆಳ ಸಮುದಾಯದ ಕುರಿತು ಚಿಂತಿಸಿದವರ ಮೊದಲಿಗರಲ್ಲಿ ಬಸವೇಶ್ವರರು ನಂತರ ಡಾ. ಬಿ.ಆರ್. ಅಂಬೇಡ್ಕರ್. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಬೇಕು ಎಂಬುವುದು ಅವರ ವಿಚಾರವಾಗಿತ್ತು. ವಿದ್ಯಾರ್ಥಿಗಳು ಅಂಬೇಡ್ಕರ್ ಬರೆದ ಕೃತಿಗಳನ್ನು ಕಡ್ಡಾಯವಾಗಿ ಓದಲೇಬೇಕು ಎಂದ ಅವರು, ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಆ ನಿಟ್ಟಿನಲ್ಲಿ ಸಮುದಾಯಗಳು ಸಂಘಟಿತವಾಗಬೇಕು. ಯುವ ಸಮುದಾಯವು ಹಿರಿಯರನ್ನು ಗೌರವಿಸಬೇಕು. ಪ್ರಗತಿಪರ ಸಾಹಿತ್ಯವನ್ನು ಓದಬೇಕು ಎಂದು ಸಲಹೆ ನೀಡಿದರು.ಚಿಂತಕ ಬೆಂಗಳೂರಿನ ಸುಬ್ಬು ಹೊಲೇಯಾರ್ ದಿಕ್ಸೂಚಿ ಭಾಷಣ ಮಾಡಿ, ಒಂದು ಮತ ಒಂದು ಮೌಲ್ಯ ಎಂಬ ತತ್ವದಡಿ ಅಂಬೇಡ್ಕರ್ ಮತದಾನಕ್ಕೆ ಹೆಚ್ಚು ಮಹತ್ವ ನೀಡಿದ್ದು ವಿಶೇಷ ಎಂದರು.
ಕವಿವಿ ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಸಚಂದ್ರ ನಾಟೀಕಾರ, ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಅಧ್ಯಯನ ಮೂಲಕ ಅರಿವು ಪಡೆಯಲು ಸಾಧ್ಯ. ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನ ಮತ್ತು ಪ್ರತಿಭೆಗೆ ಮನ್ನಣೆ ನೀಡಿದೆ ಎಂದರು.ವಿಚಾರ ಸಂಕಿರಣದಲ್ಲಿ ‘ದೇವನಾಂಪ್ರೀಯ’ ಮತ್ತು ‘ಸಾಮ್ರಾಟ್’ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸಂಶೋಧನಾ ಲೇಖನಗಳ ಎರಡು ಸಂಶೋಧನಾ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.
ವಿಚಾರ ಸಂಕಿರಣದಲ್ಲಿ ‘ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಮಹಿಳಾ ಸಬಲಿಕರಣ'''''''' ಕುರಿತು ರಾಮನಗರದ ಜೈರಾಮ್ ಮಾತನಾಡಿದರು. ಡಾ. ರವೀಂದ್ರ ಕಾಂಬಳೆ, ಪ್ರೊ. ಟಿ.ಟಿ. ಬಸವನಗೌಡ ಪ್ರತಿಕ್ರಿಯೆ ನೀಡಿದರು. ಅಧ್ಯಕ್ಷತೆಯನ್ನು ಪ್ರೊ. ಶಿಲಾಧರ ಮುಗಳಿ ವಹಿಸಿದ್ದರು. ಕುಲಸಚಿವ ಡಾ. ಎ. ಚೆನ್ನಪ್ಪ, ಪರೀಕ್ಷಾಂಗ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ್, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಡಾ. ಶ್ಯಾಮಲಾ ರತ್ನಾಕರ ಇದ್ದರು.