ಆಗುಂಬೆ ಹೆದ್ದಾರಿ ಅಭಿವೃದ್ಧಿ ರೂಪುರೇಷೆಗೆ ಅಧ್ಯಯನ ತಂಡ

KannadaprabhaNewsNetwork | Published : Jan 6, 2025 1:00 AM

ಸಾರಾಂಶ

ಮಲೆನಾಡು-ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಅಭಿವೃದ್ಧಿ ಸಂದರ್ಭ ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ‌ಸುರಂಗ ನಿರ್ಮಾಣ ಕಾರ್ಯವೊ ಅಥವಾ ಮುಖ್ಯ ರಸ್ತೆ ಅಗಲಿಕರಣವೊ ಎಂಬ ವಿಚಾರ ಇನ್ನೂ ಅಂತಿಮವಾಗಿಲ್ಲ. ಕೇಂದ್ರ ಸಾರಿಗೆ ಮಂತ್ರಾಲಯ ಅಧ್ಯಯನ ನಡೆಸಿದ ಬಳಿಕ ಈ ಕುರಿತು ಖಚಿತ ನಿರ್ಣಯ ಆಗುವ ನಿರೀಕ್ಷೆ ಇದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಮಲೆನಾಡು-ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಅಭಿವೃದ್ಧಿ ಸಂದರ್ಭ ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ‌ಸುರಂಗ ನಿರ್ಮಾಣ ಕಾರ್ಯವೊ ಅಥವಾ ಮುಖ್ಯ ರಸ್ತೆ ಅಗಲಿಕರಣವೊ ಎಂಬ ವಿಚಾರ ಇನ್ನೂ ಅಂತಿಮವಾಗಿಲ್ಲ. ಕೇಂದ್ರ ಸಾರಿಗೆ ಮಂತ್ರಾಲಯ ಅಧ್ಯಯನ ನಡೆಸಿದ ಬಳಿಕ ಈ ಕುರಿತು ಖಚಿತ ನಿರ್ಣಯ ಆಗುವ ನಿರೀಕ್ಷೆ ಇದೆ.

ಪರಿಸರ ಹಾಗೂ ಭೂಸ್ವರೂಪದ ಅಧ್ಯಯನಕ್ಕಾಗಿ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಉನ್ನತಮಟ್ಟದ ತಾಂತ್ರಿಕ ಅಧ್ಯಯನ ತಂಡ ಇಲ್ಲಿಗೆ ಬೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕಳೆದ ವರ್ಷ 2024ರಲ್ಲಿ ರಸ್ತೆ ಅಗಲೀಕರಣಕ್ಕಾಗಿ ಪೂರ್ವ ಸಿದ್ಧತಾ ಯೋಜನಾ ವರದಿ ತಯಾರಿಗೆ ಟೆಂಡರ್‌ ಕರೆಯಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಟೆಂಡರ್‌ ಪ್ರಕ್ರಿಯೆ ಆರಂಭದಲ್ಲೇ ಮುಗ್ಗರಿಸಿತು. ಪೂರ್ವ ಸಿದ್ಧತಾ ಯೋಜನಾ ವರದಿ ತಯಾರಿಗಾಗಿ ಸುಮಾರು 2 ಕೋಟಿ ರು. ಮೀಸಲಿಡಲಾಗಿದೆ.

ಅಭಿವೃದ್ಧಿ ಸ್ವರೂಪ ಗೊಂದಲ:

ಆಗುಂಬೆ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 169 ಎ ಯು ಪ್ರಸ್ತುತ ಹೆದ್ದಾರಿ 3.5 ಮೀಟರ್ ಅಗಲವಿದೆ. ಘನ ವಾಹನ ಸಂಚರಿಸಬೇಕಾದರೆ ಒಟ್ಟು 10 ಮೀಟರ್ ಅಗಲೀಕರಣ ಅಗತ್ಯ. ಸೋಮೇಶ್ವರ ಪೇಟೆಯಿಂದ ಆಗುಂಬೆ ವರೆಗೆ 14 ತಿರುವುಗಳಿದ್ದು ಸೋಮೇಶ್ವರದಿಂದ ಆಗುಂಬೆ ವರೆಗೆ ಸುಮಾರು 15 ಕಿ.ಮೀ. ದೂರವಿದೆ.

ಕಳೆದ ವರ್ಷ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುರಂಗ ಮಾರ್ಗದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಮೇಗರವಳ್ಳಿಯಿಂದ ಉಡುಪಿ ಜಿಲ್ಲೆಯ ನಾಡ್ಪಾಲು ಗ್ರಾಮದ ಸೋಮೇಶ್ವರ ವರೆಗೆ ಸುಮಾರು 12 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸೂಕ್ಷ್ಮ ಪರಿಸರ ವ್ಯವಸ್ಥೆಯ ಹಿನ್ನೆಲೆಯಲ್ಲಿ ಯಾವುದು ಅಂತಿಮಗೊಂಡಿಲ್ಲ.

ಹೆಬ್ರಿ-ಆಗುಂಬೆ ಘಾಟಿ ಅಗಲೀಕರಣದ ಸೇರಿದಂತೆ ಒಟ್ಟು 21 ಕಿ.ಮೀ. ಉದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯಲಿದೆ. ಮಲ್ಪೆ-ಮೊಣಕಾಲ್ಮೂರು ಸಂಪರ್ಕಿಸುವ ರಾ.ಹೆ. 66 ಮಲ್ಪೆ, ಉಡುಪಿ ಮಣಿಪಾಲ‌, ಹಿರಿಯಡ್ಕ ಪೆರ್ಡೂರು , ಹೆಬ್ರಿ ಸೋಮೇಶ್ವರ ಅಗುಂಬೆ ಮಾರ್ಗವಾಗಿ ಶಿವಮೊಗ್ಗ ಮೂಲಕ ಮೊಣಕಾಲ್ಮೂರು ಸಂಪರ್ಕಿಸುತ್ತದೆ.

ಪರಿಸರ ಸೂಕ್ಷ್ಮ‌ವಲಯಕ್ಕೆ ಧಕ್ಕೆ:

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯ ಪರಿಸರ ಸೂಕ್ಷ್ಮ‌ವಲಯವಾಗಿದೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಆಗುಂಬೆ ಗುರುತಿಸಿಕೊಂಡಿದೆ. ರಸ್ತೆ ಅಗಲೀಕರಣ ಅಥವಾ ಸುರಂಗ ಮಾರ್ಗ ನಿರ್ಮಾಣವಾದರೆ ಈ ಪರಿಸರದಲ್ಲಿ ವಾಸಿಸುವ ಜೀವಜಂತುಗಳಿಗೆ ಅಪಾಯವು ಕಟ್ಟಿಟ್ಟ ಬುತ್ತಿ. ಅಪರೂಪದ ಪಾರಂಪರಿಕ ಮರಗಳ ಮಾರಣಹೋಮ ನಿರೀಕ್ಷಿತ.

ಇಂಟರ್‌ನ್ಯಾಷನಲ್‌ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಅಂಡ್ ನ್ಯಾಚುರಲ್ ರಿಸೋರ್ಸಸ್ (ಐಯುಸಿಎನ್‌) ಮಾಹಿತಿ ಪ್ರಕಾರ ಆಗುಂಬೆಯ ಸೋಮೇಶ್ವರ ಅಭಯಾರಣ್ಯದಲ್ಲಿ

ಪ್ಯಾಂಥೆರಾ ಟೈಗ್ರಿಸ್ (ಹುಲಿ), ಪ್ಯಾಂಥೆರಾ ಪಾರ್ಡಸ್ (ಸಾಮಾನ್ಯ ಚಿರತೆ), ಪ್ರಿಯೊನೈಲುರಸ್ ರುಬಿಗಿನೋಸಸ್ (ತುಕ್ಕು ಹಿಡಿದ ಚುಕ್ಕೆ ಬೆಕ್ಕು), ವಿವರ್ರಾ ಸಿವೆಟಿನಾ (ಮಲಬಾರ್ ಸಿವೆಟ್) ಸೇರಿದಂತೆ ಸಸ್ತನಿಗಳು, ಅಪರೂಪದ ಕಾಡುಪ್ರಾಣಿಗಳ ನೆಲೆವೀಡಾಗಿದೆ.

....................

ಸುರಂಗ ಮಾರ್ಗವೊ ರಸ್ತೆ ಅಗಲೀಕರಣವೊ ಎಂಬುದು ಅಂತಿಮವಾಗಿವಾಗಿಲ್ಲ. ಪೂರ್ವ ಸಿದ್ಧತಾ ಯೋಜನಾ ವರದಿ ತಯಾರಿಗಾಗಿ ಟೆಂಡರ್ ಕರೆದಿದ್ದರು ಫಲಿತಾಂಶ ವಿಫಲವಾಗಿದೆ. ಈಗ ರಾಷ್ಟ್ರೀಯ ಕೇಂದ್ರ ಸಾರಿಗೆ ಮಂತ್ರಾಲಯ ಅಧ್ಯಯನ ನಡೆಸಿದ ಬಳಿಕ ಸುರಂಗ ಮಾರ್ಗವೊ ರಸ್ತೆ ಅಗಲೀಕರಣವೊ ಎಂಬುದು ಅಂತಿಮವಾಗಲಿದೆ.

-ಮಂಜುನಾಥ್ ಎಂ.ವಿ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿಯಂತರ.

..............

ಸರ್ಕಾರದ ಹಸಿರು ನಿಯಮದ ಪ್ರಕಾರ ವೈಜ್ಞಾನಿಕ ರೀತಿ ರಸ್ತೆ ಅಗಲೀಕರಣ ಮಾಡಿದರೆ ಇಂತಹ ಪರಿಸರ ನಾಶ ತಡೆಯುತ್ತದೆ. ಪರಿಸರ ಹಾಗೂ ಅಭಿವೃದ್ಧಿ ಸಮತೋಲನದಲ್ಲಿ ಕಾಪಾಡುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ.

-ಆರತಿ ಅಶೋಕ್, ಸಾಮಾಜಿಕ ಕಾರ್ಯಕರ್ತರು ಮಾಳ.

Share this article