ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ.೧೨ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏ.೧೯ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಖುದ್ದಾಗಿ ಅಥವಾ ಭಾರತ ಚುನಾವಣಾ ಆಯೋಗದ ಸುವಿಧಾ ಆನ್‌ಲೈನ್ ಮೂಲಕವೂ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ, ಹಾವೇರಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕುರಿತ ಮಾರ್ಗಸೂಚಿಗಳನ್ನು ವಿವರಿಸಿದರು.ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸಿದವರು ಸುವಿಧಾ ಅಪ್ಲಿಕೇಷನ್ ಮೂಲಕ ನಾಮಪತ್ರ ಸಲ್ಲಿಸಬಹುದು. ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸಿದ ನಂತರ ಕಡ್ಡಾಯವಾಗಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಏ. ೧೮ರೊಳಗಾಗಿ ಮುದ್ರಿತ ನಾಮಪತ್ರದ ಪ್ರತಿಯನ್ನು ಖುದ್ದಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಕೇವಲ ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸಿ, ಮುದ್ರಿತ ಪ್ರತಿ ಸಲ್ಲಿಸದೇ ಇದ್ದರೆ ಆ ಅಭ್ಯರ್ಥಿಯ ಉಮೇದುವಾರಿಕೆ ''ಸಿಂಧು'' ಆಗುವುದಿಲ್ಲ ಎಂದು ಮಾಹಿತಿ ನೀಡಿದರು.
ಹಾವೇರಿ ಡಿಸಿ ಕಚೇರಿಗೆ ಸಲ್ಲಿಸಬೇಕು: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಲು ಇಚ್ಛಿಸುವ ಗದಗ ಅಥವಾ ಹಾವೇರಿ ಜಿಲ್ಲೆಯ ಆಕಾಂಕ್ಷಿಗಳು ಏ.೧೨ರಿಂದ ಏ.೧೯ ರವರೆಗೆ ಏ.೧೩ ಹಾಗೂ ಏ.೧೪ ಸಾರ್ವತ್ರಿಕ ರಜಾದಿನ ಹೊರತುಪಡಿಸಿ ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯ ಒಳಗಾಗಿ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಮಧ್ಯಾಹ್ನ ೩ ಗಂಟೆ ನಂತರ ಯಾವುದೇ ಕಾರಣಕ್ಕೂ ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಸ್ಥಾಪಿಸಿರುವ ಗಡಿಯಾರದಲ್ಲಿ ತೋರಿಸುವ ಸಮಯವನ್ನೇ ಅಂತಿಮ ಎಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.ಏ.೨೦ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.೨೧ರಂದು ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಏ.೨೨ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಕಾರ್ಯ ಏ.೨೦ರಂದು ಮಧ್ಯಾಹ್ನ ೩ ಗಂಟೆಗೆ ಪೂರ್ಣಗೊಳ್ಳಲಿದೆ. ಅಂದು ಮಧ್ಯಾಹ್ನ ೩ರಿಂದ ೫ ಗಂಟೆವರೆಗೆ ಹಾಗೂ ಏ.೨೨ರ ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಪಕ್ಷೇತರರಿಗೆ ೧೦ ಜನ ಸೂಚಕರು ಅವಶ್ಯ: ಭಾರತ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ವತಿಯಿಂದ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಒಬ್ಬ ಸೂಚಕನ ಬೆಂಬಲದೊಂದಿಗೆ ಹಾಗೂ ಭಾರತ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆಯದ ಆದರೆ ನೋಂದಾಯಿತ ಪಕ್ಷದ ಅಭ್ಯರ್ಥಿಯಾಗಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗಳು ೧೦ ಜನ ಸೂಚಕರ ಬೆಂಬಲದೊಂದಿಗೆ ನಮೂನೆ ೨-ಎರಲ್ಲಿ ಅರ್ಜಿ ಸಲ್ಲಿಸಬೇಕು. ಸೂಚಕರು ಇದೇ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು. ಈ ಕುರಿತಂತೆ ದೃಢೀಕರಣ ಪತ್ರ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ನಮೂನೆ-೨೬ರಲ್ಲಿ ಯಾವುದೇ ಅಂಕಣವನ್ನು ಖಾಲಿ ಬಿಡದಂತೆ ಭರ್ತಿಮಾಡಬೇಕು ಹಾಗೂ ಮತ ಪತ್ರದಲ್ಲಿ ತಮ್ಮ ಹೆಸರು ಯಾವ ರೀತಿ ಮುದ್ರಿಸಬೇಕು ಎನ್ನುವ ಬಗ್ಗೆ ತಮ್ಮ ಸ್ವ ಹಸ್ತ್ತಾಕ್ಷರದಲ್ಲಿ ಬರೆದು ರುಜುಮಾಡಿ ಸಲ್ಲಿಸಬೇಕು. ಈ ಕ್ಷೇತ್ರದ ಮತದಾರರಲ್ಲದವರು ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದರೆ ಮತದಾರರ ಪಟ್ಟಿಯ ಭಾಗ ಸಂಖ್ಯೆ, ಕ್ರಮಸಂಖ್ಯೆ ಒಳಗೊಂಡ ವಿವರವನ್ನು ಆಯಾ ಮತ ಕ್ಷೇತ್ರದ ಇ ಆರ್ ಒ ಅಥವಾ ಎಆರ್ ಒ ಅವರಿಂದ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ ಎಂದು ತಿಳಿಸಿದರು.ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಯ ಒಳಗಡೆ ಅಭ್ಯರ್ಥಿ ಒಳಗೊಂಡಂತೆ ಐದು ಜನರಿಗೆ ಮಾತ್ರ ಅವಕಾಶವಿದೆ. ೧೦೦ ಮೀಟರ್ ಪರದಿಯೊಳಗೆ ಮೂರು ವಾಹನಗಳನ್ನು ತರಲು ಮಾತ್ರ ಅನುಮತಿ ನೀಡಲಾಗುವುದು ಎಂದರು.ಹೊಸ ಬ್ಯಾಂಕ್ ಖಾತೆ ಕಡ್ಡಾಯ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ವೆಚ್ಚದ ನಿರ್ವಹಣಾ ಉದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪ್ರತ್ಯೇಕ ಖಾತೆ ತೆರೆಯಬೇಕು. ನಾಮಪತ್ರ ಸಲ್ಲಿಸುವ ಕನಿಷ್ಠ ಒಂದು ದಿನದ ಮುಂಚೆ ತೆರೆದ ಹೊಸ ಖಾತೆಯ ಪಾಸ್‌ಬುಕ್‌ನ ಝರಾಕ್ಸ ಪ್ರತಿಯನ್ನು ಸಲ್ಲಿಸಬೇಕು. ಈ ಖಾತೆಯು ಅಭ್ಯರ್ಥಿಯ ಹೆಸರಿನಲ್ಲಿ ಅಥವಾ ಅಭ್ಯರ್ಥಿ ಮತ್ತು ಅವರ ಚುನಾವಣಾ ಏಜೆಂಟರ ಜಂಟಿ ಹೆಸರಿನಲ್ಲಿರಬಹುದು. ಆದರೆ ಯಾವುದೇ ಕಾರಣಕ್ಕೂ ಕುಟುಂಬ ಸದಸ್ಯರ ಜಂಟಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತಿಲ್ಲ ಎಂದು ತಿಳಿಸಿದರು.
ಕ್ರಿಮಿನಲ್ ಪ್ರಕರಣ ಮಾಹಿತಿ ಕಡ್ಡಾಯ: ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಮ್ಮ ಮೇಲೆ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತಂತೆ ವಿವರವಾಗಿ ನಮೂದಿಸಬೇಕು. ಈ ಪ್ರಕರಣ ಕುರಿತಂತೆ ಪತ್ರಿಕೆಗಳಲ್ಲಿ ಕನಿಷ್ಠ ಮೂರುಬಾರಿ ಜಾಹೀರಾತು ರೂಪದಲ್ಲಿ ಪ್ರಕಟಿಸಬೇಕು. ಈ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.ಸ್ಪರ್ಧಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಅವಧಿ ಮುಗಿದ ನಂತರ ಏ.೨೨ರಂದು ಮಧ್ಯಾಹ್ನ ೩ ಗಂಟೆ ನಂತರ ಆಯೋಗದ ಮಾರ್ಗಸೂಚಿಯಂತೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಹಾಗೂ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣಾ ಶಿರಸ್ತೇದಾರ ಎಂ.ಜಿ.ಚಿತ್ತೆಖಾನ್, ಮಾಸ್ಟರ್ ಟ್ರೇನರ್ ಅರವಿಂದ ಐರಣಿ, ವಿವಿಧ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.