ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಕರ್ನಾಟಕ ನೀರಾವರಿ ನಿಗಮದಿಂದ ತಾಲೂಕಿನ ಮಾಗಳ-ಶಿರಹಟ್ಟಿ ತಾಲೂಕಿನ ಕಲ್ಲಾಗನೂರು ಗ್ರಾಮಗಳ ಮಧ್ಯೆ ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಲು ಸರ್ಕಾರ ನೇಮಿಸಿದ್ದ ತಜ್ಞರ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿದೆ.ಸಚಿವ ಎಚ್.ಕೆ. ಪಾಟೀಲ್ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ-ಸಾಸಲವಾಡ ಮಧ್ಯೆ ಸೇತುವೆ ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಚಿವರ ಈ ಪತ್ರಕ್ಕೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಸೇರಿದಂತೆ ಸಿಂಗಟಾಲೂರು ಯೋಜನಾ ಪ್ರದೇಶದ ಸಂತ್ರಸ್ತರು ಸಿಟ್ಟಿಗೆದ್ದು, ಮಾಗಳ-ಕಲ್ಲಾಗನೂರು ಮಧ್ಯೆಯೇ ಸೇತುವೆ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದರು.
ಹೊಳೆ ಇಟಗಿ-ಸಾಸಲವಾಡ ಮಧ್ಯೆ ನದಿಯೇ ಇಲ್ಲ, ಜತೆಗೆ ವಿಜಯನಗರ ಜಿಲ್ಲೆಯನ್ನು ಸಂಪರ್ಕಿಸುವ ಗ್ರಾಮದ ಹೆಸರನ್ನೇ ಸೂಚಿಸಿಲ್ಲ. ಸೇತುವೆ ನಿರ್ಮಾಣ ಕುರಿತು ಜಲ ಸಂಪನ್ಮೂಲ ಸಚಿವರು ಮರು ಪರಿಶೀಲನೆ ಮಾಡಬೇಕೆಂದು ಸ್ಥಳೀಯರು ಹಾಗೂ ಶಾಸಕರು ಪತ್ರ ಬರೆದ ಹಿನ್ನೆಲೆಯಲ್ಲಿ ಸರ್ಕಾರವು ಕರ್ನಾಟಕ ನೀರಾವರಿ ನಿಗಮ, ಮಲಪ್ರಭಾ ಯೋಜನೆಯ ಮುಖ್ಯ ಎಂಜಿನಿಯರ್ ಅಶೋಕ ಎಲ್. ವಾಸನದ್ ಅಧ್ಯಕ್ಷತೆಯಲ್ಲಿ 5 ಜನರ ತಂಡವನ್ನು ರಚಿಸಿ ಸೂಕ್ತ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿತ್ತು.ಕಳೆದ ಮಾ.13ರಂದು ತಾಂತ್ರಿಕ ತಜ್ಞರ ತಂಡವು ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಮತ್ತು ಕಲ್ಲಾಗನೂರು, ಗ್ರಾಮಗಳ ನದಿ ತೀರ ಪ್ರದೇಶಕ್ಕೆ ಭೇಟಿ ನೀಡಿ ಸಿಂಗಟಾಲೂರು ಯೋಜನೆ ಸಂತ್ರಸ್ತರು, ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿದರು. 5 ಜನರ ಸಮಿತಿ ಸದಸ್ಯರು ಚರ್ಚಿಸಿದರು.
ಹೊಳೆ ಇಟಗಿ-ಸಾಸಲವಾಡ ಮಧ್ಯೆ ಸೇತುವೆ ನಿರ್ಮಾಣದ ಪ್ರದೇಶ ಪರಿವೀಕ್ಷಿಸಲಾಗಿದ್ದು, ಈ ಎರಡು ಗ್ರಾಮಗಳ ಮಧ್ಯೆ ತುಂಗಭದ್ರಾ ನದಿ ಇಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಾಧಿತ ಪ್ರದೇಶಕ್ಕೆ ಒಳಪಟ್ಟಿಲ್ಲ. ಉದ್ದೇಶಿತ ಕಲ್ಲಾಗನೂರು-ಮಾಗಳ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಸಿಂಗಟಾಲೂರು ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡು ಸಂತ್ರಸ್ತರ ಪ್ರದೇಶವಾಗಿದೆ. ಮಾಗಳ ವಿಠಲಾಪುರ ಮಧ್ಯೆ ಸೇತುವೆ ಇಲ್ಲದ ಕಾರಣ ಯಾಂತ್ರಿಕೃತ ದೋಣಿಯಲ್ಲಿ ಜನ ಓಡಾಡುತ್ತಿದ್ದಾರೆ, ಈ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ತೆಪ್ಪ ದುರಂತ ನಡೆದು 9 ಜನ ಸಾವನ್ನಪ್ಪಿದ್ದರು. ಕಳೆದ 48 ವರ್ಷಗಳಿಂದ ಕಲ್ಲಾಗನೂರು-ಮಾಗಳ ಮಧ್ಯೆ ಸೇತುವೆ ನಿರ್ಮಾಣ ಮಾಡಬೇಕೆಂದು ಹೋರಾಟ ನಡೆಯುತ್ತಲೇ ಇದೆ. ಈ ಹಿಂದೆ ಶಿರಹಟ್ಟಿ ಶಾಸಕರಾಗಿದ್ದ ಉಪನಾಳ ಗೂಳಪ್ಪ ಕೂಡ ಇಲ್ಲೇ ಸೇತುವೆ ನಿರ್ಮಾಣ ಮಾಡಲು ಎಲ್ಲ ಸಿದ್ಧತೆ ನಡೆಸಿದ್ದರು.ಈ ಭಾಗದಲ್ಲಿ ಸೇತುವೆ ನಿರ್ಮಾಣದಿಂದ ವಿಜಯನಗರ ಮತ್ತು ಗದಗ ಜಿಲ್ಲೆಯ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ದೂರದ ಬೆಂಗಳೂರು, ಹುಬ್ಬಳ್ಳಿ, ಲಕ್ಷ್ಮೇಶ್ವರ ಸೇರಿದಂತೆ ಇತರೆ ಮಹಾ ನಗರಗಳಿಗೆ ಹೋಗಲು ಬಹಳ ಸಮೀಪವಾಗಲಿದೆ. ಇದರಿಂದ ಬಹಳಷ್ಟು ಅನುಕೂಲವಾಗುತ್ತದೆ. ಸೇತುವೆ ನಿರ್ಮಾಣಕ್ಕೆ ಇದೇ ಸೂಕ್ತ ಸ್ಥಳ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಈ ವರದಿ ಈಗಾಗಲೇ ಕರ್ನಾಟಕ ನೀರಾವರಿ ನಿಗಮದ ಎಂಡಿಗೆ ಸಲ್ಲಿಕೆಯಾಗಿದೆ.
ಕಲ್ಲಾಗನೂರು-ಮಾಗಳ ಹಾಗೂ ಹೊಳೆ ಇಟಗಿ ಸಾಸಲವಾಡ ಮಧ್ಯೆ ಸೇತುವೆ ನಿರ್ಮಾಣ ಸೂಕ್ತ ಸ್ಥಳ ಕುರಿತು ತಜ್ಞರ ತಂಡವು ಭೇಟಿ ನೀಡಿ ಪರಿಶೀಲಿಸಲಾಗಿದೆ. ಎಲ್ಲರ ಅಭಿಪ್ರಾಯ ಮತ್ತು ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ 5 ಅಂಶಗಳನ್ನು ಪರಿಗಣಿಸಿ ಸೂಕ್ತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಜಿ.ಆರ್. ಶಿವಮೂರ್ತಿ.ಸಿಂಗಟಾಲೂರು ಸಂತ್ರಸ್ತರ ಅನುಕೂಲಕ್ಕೆ ಕಲ್ಲಾಗನೂರು-ಮಾಗಳ ಮಧ್ಯೆ ಸೇತುವೆ ನಿರ್ಮಾಣ ಮಾಡಬೇಕೆಂದು ಕಳೆದ 48 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈಗಾಗಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಸೂಕ್ತ ವರದಿ ನೀಡಿದ್ದಾರೆ ಎನ್ನುತ್ತಾರೆ ಕಲ್ಲಾಗನೂರು ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಪದಾಧಿಕಾರಿ ಹೇಮಂತ್.