ಕೊಡಗು ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ಸುಬ್ರಮಣ್ಯ ಷಷ್ಠಿ ಉತ್ಸವ

KannadaprabhaNewsNetwork |  
Published : Dec 19, 2023, 01:45 AM IST
ಮಡಿಕೇರಿಯ ಮುತ್ತಪ್ಪ ದೇಗುಲದಲ್ಲಿ ಸುಬ್ರಮಣ್ಯ ಷಷ್ಠಿ ಉತ್ಸವ | Kannada Prabha

ಸಾರಾಂಶ

ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಮುತ್ತಪ್ಪ ದೇಗುಲ, ಅಮ್ಮತ್ತಿ ಸಮೀಪದ ಬೈರಾಂಬಾಡ ಸೇರಿದಂತೆ ಜಿಲ್ಲೆಯ ಹಲವೆಡೆ ಸುಬ್ರಹ್ಮಣ್ಯನ ಆರಾಧನೆ, ಮಹಾಪೂಜೆ

ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲಾದ್ಯಂತ ವಿವಿಧ ದೇವಾಲಯಗಳಲ್ಲಿ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಮುತ್ತಪ್ಪ ದೇಗುಲ, ಅಮ್ಮತ್ತಿ ಸಮೀಪದ ಬೈರಾಂಬಾಡ ಸೇರಿದಂತೆ ಜಿಲ್ಲೆಯ ಹಲವೆಡೆ ಸುಬ್ರಹ್ಮಣ್ಯನ ಆರಾಧನೆ, ಅಭಿಷೇಕ, ಹೂವಿನ ಅಲಂಕಾರ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಷಷ್ಠಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆಯಿಂದಲೇ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ, ಹರಕೆಯಾಗಿ ನಾನಾ ಬಗೆಯ ಬೆಳ್ಳಿಯ ಪ್ರತಿರೂಪಗಳನ್ನು ದೇವರಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬೈರಂಬಾಡದಲ್ಲಿ: ಕೊಡಗಿನಲ್ಲಿ ಸುಬ್ರಮಣ್ಯ ದೇವರ ನೆಲೆಯೆಂದೇ ಪ್ರಖ್ಯಾತಿ ಪಡೆದಿರುವ ಅಮ್ಮತ್ತಿ ಒಂಟಿಯಂಗಡಿ ಸಮೀಪದ ಬೈರಂಬಾಡದ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಪ್ರಧಾನ ಅರ್ಚಕರ ನೇತತ್ವದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡು ದೇವರಿಗೆ ಪಂಚಾಮೃತಾಭಿಷೇಕ, ಕುಂಕು ಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿ ಷೇಕಗಳು ನಡೆದವು. ಭಕ್ತಾದಿಗಳು ಹಣ್ಣುಕಾಯಿ, ಹರಕೆಯನ್ನು ದೇವರಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು. ಜಿಲ್ಲೆಯ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ತಂಡೋಪ ತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು. ಇವರೊಂದಿಗೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆವರಣಲ್ಲಿ ಭಕ್ತರು ಕೂರಲು ಸೂಕ್ತ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ದೇವರಿಗೆ ಮಹಾಮಂಗಳಾರತಿ ಸೇವೆ ನಡೆದ ಬಳಿಕ ಮಧ್ಯಾಹ್ನ ಅನ್ನಸಂರ್ತಪಣೆ ನಡೆಯಿತು. ಭಕ್ತರು ಸುಬ್ರಹ್ಮಣ್ಯ ದೇವರಿಗೆ ಪ್ರತಿರೂಪಗಳನ್ನು ಹರಕೆಯಾಗಿ ಸಲ್ಲಿಸಿದರು. ದೇವಾಲಯದ ಹೊರಭಾಗದಲ್ಲಿ ಹರಕೆ ಹೊತ್ತ ಭಕ್ತರು ಕೇಶ ಮುಂಡನ ಮಾಡಿಸಿಕೊಳ್ಳುತ್ತಿದ್ದರು.

ಜಾತ್ರೆ ಪ್ರಯುಕ್ತ ಸಂಜೆವರೆಗೆ ಮಡಿಕೇರಿ, ಮೂರ್ನಾಡು, ಸಿದ್ದಾಪುರ, ವಿರಾಜಪೇಟೆ ಸೇರಿದಂತೆ ವಿವಿಧ ಕಡೆಗಳಿಂದ ವಿಶೇಷ ಖಾಸಗಿ ಬಸ್‌ಗಳು, ಬಾಡಿಗೆ ಜೀಪ್, ವ್ಯಾನ್ ಇನ್ನಿತರ ವಾಹನಗಳ ಸಂಚಾರವಿತ್ತು. ಇದರಿಂದ ನಾನಾ ಕಡೆಗಳಿಂದ ಭಕ್ತರು ಆಗಮಿಸಲು ಅನುಕೂಲವಾಯಿತು. ಸಿದ್ದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ನೇತತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತು. ವಾಹನಗಳ ನಿಲುಗಡೆಗೆ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ನಿಯಂತಣ್ರದಲ್ಲಿ ತೊಡಗಿಕೊಂಡಿದ್ದರು. ದೇವಾಲಯದ ರಸ್ತೆ ಬದಿಯಲ್ಲಿ ವೃದ್ಧರ ಜತೆ ಪುಟಾಣಿಗಳು ಕೂಡ ಭಿಕ್ಷಾಟನೆಯಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂತು. ಜಾತ್ರಾ ಸಂದರ್ಭ ಭಿಕ್ಷೆ ನೀಡಿದರೆ ಹೆಚ್ಚಿನ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ನಾನಾ ಕಡೆಗಳಿಂದ ಆಗಮಿಸಿದ್ದ ಭಿಕ್ಷುಕರಿಗೆ ಭಕ್ತರು ಅಕ್ಕಿ ಹಾಗೂ ಹಣವನ್ನು ದಾನವಾಗಿ ನೀಡಿದರು. ಇತ್ತ ಹೊರಭಾಗದ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ವಿವಿಧ ಮಳಿಗೆಗಳನ್ನು ನಿರ್ಮಾಸಿ ಮಾರಾಟದಲ್ಲಿ ತೊಡಗಿಕೊಂಡಿದ್ದರು.ಅಶ್ವತ್ಥ ಕಟ್ಟೆಗಳಲ್ಲೂ ನಾಗರ ಕಲ್ಲಿಗೆ ಭಕ್ತರು ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು. ಕೂಡಿಗೆಯ ಶ್ರೀಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪದ ದೇವಾಯಗಳಲ್ಲೂ ಸುಬ್ರಹ್ಮಣ್ಯನ ಆರಾಧನೆ ನಡೆಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ