ಕನ್ನಡಪ್ರಭ ವಾರ್ತೆ ಹೊಸದುರ್ಗ
ಸಾಧನೆಗೆ ಯಾವುದೇ ಅಡ್ಡ ದಾರಿಗಳು ಇಲ್ಲ. ಇರುವುದೊಂದೇ ದಾರಿ ಅದು ಪರಿಶ್ರಮದ ದಾರಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಎಸ್.ಎಸ್.ರಂಗಮಂದಿರದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಘದ ಮೂಲ ಉದ್ದೇಶ ನಾಯಕತ್ವ ಗುಣಕ್ಕಿಂತ ನೈತಿಕ ನೆಲೆಗಟ್ಟು ಬಹಳ ಮುಖ್ಯ. ವಿದ್ಯಾರ್ಥಿಗಳಿಗೆ ನಾಯಕತ್ವದ ತರಬೇತಿ ಕೊಡುವುದಕ್ಕಿಂತ ನೈತಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ನೆಲೆಗಟ್ಟು ಕುಸಿಯದ ಹಾಗೆ ನೋಡಿಕೊಳ್ಳಬೇಕು. ನಾಯಕನಾದವನು ಗಂಧದ ಕೊರಡಿನಂತೆ ತನ್ನನ್ನು ತಾನು ಬದುಕನ್ನು ಸವೆಸಬೇಕು. ತನ್ನನ್ನು ನಾನು ಸುಟ್ಟುಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ನಾಯಕರಾದವರು ಸತ್ಯ, ಪ್ರಾಮಾಣಿಕತೆ, ದಯೆ ಇಂತಹ ಗುಣಗಳನ್ನು ಅಳವಡಿಸಿಕೊಂಡು ತ್ಯಾಗ ಜೀವಿಗಳಾಗಿ ಲೋಕಕ್ಕೆ ಬೇಕಾಗಿದ್ದನ್ನು ಕೊಡಬೇಕಾಗಿತ್ತು. ಆದರೆ ಇವತ್ತಿನ ನಾಯಕರು ಈ ಎಲ್ಲ ಗುಣಗಳನ್ನು ಗಾಳಿಗೆ ತೂರಿ ಹೇಗೆ ಸುಲಿಗೆ ಮಾಡಿ ತಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯಬಹುದು ಎನ್ನುವ ಗುಣಗಳನ್ನು ಹೊಂದಿರುವುದು ನಮ್ಮ ದುರಂತ ಎಂದರು.ಯಾವ ಮಕ್ಕಳೂ ದಡ್ಡರಲ್ಲ. ಇರುವ ಬುದ್ಧಿಶಕ್ತಿಯನ್ನು ಸತತ ಪರಿಶ್ರಮದ ಮೂಲಕ ಉತ್ತಮ ಗೊಳಿಸಿಕೊಂಡರೆ ಸಾಧನೆ ಸಿದ್ದಿಸುವುದು. ಪಠ್ಯವನ್ನು ಕಂಠಪಾಠ ಮಾಡದೆ ಪುನರ್ ಮನನದ ಮೂಲಕ ಕರಗತ ಮಾಡಿಕೊಂಡರೆ ಎಂಥದ್ದೇ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾಗುವುದು. ಈ ನಿಟ್ಟಿನಲ್ಲಿ ಶಿಕ್ಷಕರು ಜಡತ್ವ ಬಿಟ್ಟು ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು. ಇಂಥ ಸ್ಪೂರ್ತಿದಾಯಕ ಕಾರ್ಯಕ್ರಮ ಮಕ್ಕಳ ನಾಳಿನ ಬಾಳಬುತ್ತಿಯಾಗಬಲ್ಲವು. ವಿದ್ಯಾರ್ಥಿ ಶಿಕ್ಷಕರು ಹಾಗೂ ಪೋಷಕರ ಮಧ್ಯೆ ಅವಿನಾಭಾವ ಸಂಬಂಧ ಇರಬೇಕು. ಮೂವರಲ್ಲಿ ಸಂಬಂಧ ಸರಿಯಾಗಿದ್ದರೆ ಒಳ್ಳೆಯ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂದರು.
ವಿದ್ಯಾರ್ಥಿ ಸಂಘಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಪಿ.ಎಂ.ಪೋಷಣ್ ಸಹಾಯಕ ನಿರ್ದೇಶಕ ಆರ್.ಶಾಂತಪ್ಪ ಮಾತನಾಡಿ, ಎಲ್ಲ ಮಕ್ಕಳಲ್ಲಿ ಪ್ರತಿಭೆ ಇದ್ದೇ ಇದೆ. ಅಂತಹ ಪ್ರತಿಭೆಯನ್ನು ಗುರುತಿಸುವ ಕಾರ್ಯ ಶಿಕ್ಷಕರಾಗಿದ್ದಾಗಿದೆ. ತಾಯಿಯ ಮಡಿಲು ತಂದೆಯ ಹೆಗಲು ಪವಿತ್ರವಾದ ಸ್ಥಳಗಳು. ಇವುಗಳ ಮಹಿಮೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಪ್ರತಿಭೆ ಯಾರಪ್ಪನ ಸ್ವತ್ತಲ್ಲ ಅದು ಸಾಧಕನ ಸ್ವತ್ತು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿಭಾವಂತನಾಗಬೇಕು. ಆಗ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬಹುದು. ರೈತ, ಸೈನಿಕ ನಮ್ಮ ದೇಶದ ಬೆನ್ನೆಲುಬು. ಅಂಥವರಿಗೆ ಗೌರವ ಕೊಡುವ ಕೆಲಸ ಆಗಬೇಕು ಎಂದರು. ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ ಸಿ ಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಖಜಾಂಚಿ ಕೆ ಸಿ ಶಿವಮೂರ್ತಿ, ನಿವೃತ್ತ ಮುಖ್ಯ ಶಿಕ್ಷಕ ಎಸ್ ಸಿದ್ಧಪ್ಪ, ಉಭಯ ಶಾಲಾ ಮುಖ್ಯ ಶಿಕ್ಷಕರಾದ ಬಸವರಾಜ್, ಶಿಲ್ಪ, ಶಿವಕುಮಾರ ಇದ್ದರು.ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ್ ಹೆಚ್ ಎಸ್ ಹಾಗೂ ಶರಣ್ ವಚನಗೀತೆಗಳನ್ನು ಹಾಡಿದರು. ಶ್ರೀ ಗುರುಪಾದೇಶ್ವರ ಪ್ರೌಢಶಾಲಾ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯರೂಪಕವನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.