ಕುಮಟಾ: ಉತ್ತರ ಕನ್ನಡದವರು ಪ್ರತಿಭಾನ್ವಿತರು. ಸದಾ ಪ್ರಯತ್ನಶೀಲರು. ಯಾರೇ ಆದರೂ ಕೀಳರಿಮೆ ತೊರೆದು ಕ್ರಿಯಾಶೀಲರಾದಾಗ ಯಶಸ್ಸಿನ ಗುರಿ ತಲುಪಬಹುದು ಎಂದು ಚಲನಚಿತ್ರ ನಟಿ, ರಂಗಕರ್ಮಿ, ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ತಿಳಿಸಿದರು.ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಯೋಗದ ಸರಸ್ವತಿ ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜತೆಗೆ ಎಲ್ಲಿ ಕಲೆ- ಸಂಸ್ಕೃತಿಯ ಆರಾಧನೆಯೂ ನಡೆಯುತ್ತದೆಯೋ ಆ ಸಂಸ್ಥೆ ಬೆಳೆಯುತ್ತದೆ. ಹೀಗಾಗಿ ವಿಧಾತ್ರಿ ಅಕಾಡೆಮಿ ನಡೆಸುತ್ತಿರುವ ಸರಸ್ವತಿ ಪಿಯು ಕಾಲೇಜು ನಿಜವಾದ ಸರಸ್ವತಿ ಮಂದಿರವಾಗಿದೆ. ಇಲ್ಲಿ ಬಾಯಿಪಾಠದ ಶಿಕ್ಷಣಕ್ಕಿಂತ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿರುವುದು ಸಂತಸದ ವಿಚಾರ ಎಂದರು. ಬಳಿಕ ವಿವಿಧ ಕಥನ ಹಾಗೂ ಹಾಡುಗಳನ್ನು ಅಭಿನಯಿಸಿ ತೋರಿಸಿದರು. ಕಲಾಂಜಲಿ ಸಂಯೋಜಕರಾದ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯೇ ಇಂತಹ ಕಾರ್ಯಕ್ರಮದ ಉದ್ದೇಶ. ಕಲೆ- ಕಲಾವಿದರ ಪರಿಚಯ, ಸಾಧನೆ ಮತ್ತು ಅವರ ವ್ಯಕ್ತಿತ್ವ ಮಕ್ಕಳಿಗೆ ಮಾದರಿ, ಸ್ಫೂರ್ತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲಾಂಜಲಿ ರೂಪ ತಾಳಿದ್ದು, ಕಳೆದ ನಾಲ್ಕು ವರ್ಷಗಳಿಂದ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ, ಉತ್ತರ ಕನ್ನಡದವರು ಸಾಧಕರನ್ನು ಎಲ್ಲಿದ್ದರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು. ಸಾಧಕರ ಜತೆ ನಿಂತು ಸಂಭ್ರಮಿಸುವ ಗುಣದವರು. ಇಂತಹ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡವನ್ನು ಹತ್ತಿರವಾಗಿಸಿದ ಕೀರ್ತಿ ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಡಾ. ಆರ್.ಜಿ. ಗುಂದಿ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಶಾರದಾ ಮೊಗೇರ, ಅಮೆರಿಕದಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಅಶೋಕ ಪ್ರಭು ಅವರನ್ನು ಸನ್ಮಾನಿಸಲಾಯಿತು. ಕಲಾಂಜಲಿಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿಜ್ಞಾನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಕಿರಣ ಭಟ್ಟ ಸ್ವಾಗತಿಸಿದರು. ಉಪಪ್ರಾಚಾರ್ಯೆ ಸುಜಾತಾ ಹೆಗಡೆ ವೇದಿಕೆಯಲ್ಲಿದ್ದರು. ಗಣೇಶ ಜೋಶಿ ನಿರೂಪಿಸಿದರು. ಚಿದಾನಂದ ಭಂಡಾರಿ ವಂದಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು.