ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತೀ ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಪ್ರತಿಭೆ ಎಲ್ಲರಲ್ಲೂ ಇದೆ. ಆದರೆ ಈಗಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್‍ಯ. ಇವೆರಡರ ನಡುವೆ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದು ಬೆಂಗಳೂರಿನ ಮಲ್ಲೇಶ್ವರಂ ಪುನೀತ್ ಕೋಚಿಂಗ್ ಸೆಂಟರ್ ಮುಖ್ಯಸ್ಥ ಟಿ.ಜಿ.ನಾರಾಯಣಸ್ವಾಮಿ ಹೇಳಿದರು.ಫರ್ಲ್ ದೂರ ಶಿಕ್ಷಣ ಫೌಂಡೇಷನ್ ವತಿಯಿಂದ ತಾಲೂಕಿನ ಎಸ್.ಗೊಲ್ಲಹಳ್ಳಿಯ ಮಾದರಿ ನ್ಯಾಷನಲ್ ಗ್ರಾಮಾಂತರ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈಗಿನ ಸಮಾಜದಲ್ಲಿ ದೇಶ- ವಿದೇಶಗಳಲ್ಲಿ ಯಾವುದೇ ಉನ್ನತ ಹುದ್ದೆಗಳಾಗಲಿ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಹುದ್ದೆಗಳಿಂದ ಹಿಡಿದು ಹಲವಾರು ಮುಖ್ಯ ಹುದ್ದೆಗಳನ್ನು ನಿರ್ವಹಿಸುವ ಜ್ಞಾನ ಹೊಂದಿರುವಂತಹ ಪ್ರತಿಭೆಗಳಿದ್ದರೆ ಅವರು ಗ್ರಾಮೀಣ ಭಾಗದಿಂದ ಹೋಗಿರುವಂತಹ ವಿದ್ಯಾರ್ಥಿಗಳೇ ಆಗಿರುತ್ತಾರೆ ಎನ್ನುವ ಮೂಲಕ ಗ್ರಾಮಾಂತರ ವಿದ್ಯಾರ್ಥಿಗಳ ಮನೋಧೈರ್ಯ ಹೆಚ್ಚಿಸಿದರು.
ಯಾವುದೇ ಮುಖ್ಯ ಸ್ಥಾನಗಳನ್ನು ಪಡೆಯಬೇಕಾದರೆ ವಿದ್ಯೆ ಮತ್ತು ಶಿಕ್ಷಣ ತುಂಬಾ ಮುಖ್ಯವಾಗಿರುತ್ತದೆ. ವಿದ್ಯೆಯನ್ನು ನಾವು ಧೈರ್ಯದಿಂದ ಮತ್ತು ವಿದ್ಯೆಯ ಮೇಲಿನ ಪ್ರೀತಿಯನ್ನು ಅಗಾಧವಾಗಿ ಬೆಳೆಸಿಕೊಂಡು ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ನಾವು ಉನ್ನತ ಸ್ಥಾನಮಾನ ಹೊಂದಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಪರ್ಲ್ ಫೌಂಡೇಷನ್ ಅಧ್ಯಕ್ಷ ಡಾ. ರಜನೀಶ್ ಆರ್ಯನ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಪರ್ಲ್ ಸಂಸ್ಥೆಯು ಸದಾ ಬೆನ್ನೆಲುಬಾಗಿ ಕೆಲಸ ಮಾಡುತ್ತದೆ ಮತ್ತು ಶಿಕ್ಷಣದ ಮುಖಾಂತರ ಸಮಾಜದಲ್ಲಿ ಒಂದು ಅಗಾಧವಾದ ಶಕ್ತಿಯನ್ನು ಬೆಳೆಸುವುದೇ ನಮ್ಮ ಈ ಸಂಸ್ಥೆ ಗುರಿಯಾಗಿರುತ್ತದೆ. ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿ ಕೊಡುವಲ್ಲಿ ಪರ್ಲ್ ಸಂಸ್ಥೆಯು ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು.ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದನೆ ಸಲ್ಲಿಸಿದರು.
ಯಲುವಹಳ್ಳಿ ಜನಾರ್ಧನ್. ಕಾಲೇಜು ಪ್ರಾಂಶುಪಾಲ ಎಂ.ನರಸಿಂಹಮೂರ್ತಿ,ಬೂದಿಗೆರೆ ಗ್ರೀನ್ ಆ್ಯಪಲ್ ಅಕಾಡೆಮಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮಂಜುನಾಥ್, ವಿರಾಟ್ ಹೆಲ್ತ್ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಡಾ.ದಿನೇಶ್ ಎಸ್. ಗೌಡ, ಮಾದರಿ ನ್ಯಾಷನಲ್ ಗ್ರಾಮಾಂತರ ಪ್ರೌಢಶಾಲೆಯ ಮತ್ತು ಪದವಿ ಪೂರ್ವ ಕಾಲೇಜಿನ ಭೋಧಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.